Advertisement

ಶಿಥಿಲಾವಸ್ಥೆಯಲ್ಲಿ 43 ವರ್ಷ ಹಳೆಯ ಕಂಡ್ಲೂರು ಸೇತುವೆ

09:25 PM Feb 01, 2020 | Sriram |

ಕಂಡ್ಲೂರು: ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರು ಸೇತುವೆಯು ಶಿಥಿಲಾವಸ್ಥೆ ಯಲ್ಲಿದೆ ಎಂದು ಪ್ರಾಮಿÕ (ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ)ಯು 2017ರಲ್ಲಿಯೇ ತಪಾಸಣೆ ನಡೆಸಿ, ವರದಿ ಕೊಟ್ಟಿದೆ. ಆದರೆ ಇನ್ನೂ ಇದರ ದುರಸ್ತಿಗೆ ಮಾತ್ರ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸೇತುವೆಯಲ್ಲಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು, ದುರಸ್ತಿಗೆ ಮುಂದಾಗಿ ಎನ್ನುವ ಕೂಗು ಸ್ಥಳೀಯರದ್ದಾಗಿದೆ.

Advertisement

ಯಡ್ತರೆ ಮಂಜಯ್ಯ ಶೆಟ್ಟರು ಬೈಂದೂರು ಶಾಸಕರಾಗಿದ್ದ ವೇಳೆ 1977ರಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಕಂಡ್ಲೂರಿನಲ್ಲಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಪ್ರತಿ ನಿತ್ಯ ಈ ಸೇತುವೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಹಲವರಿಗೆ ಉಪಯೋಗ
ಕುಂದಾಪುರದಿಂದ ಕಂಡ್ಲೂರು, ಅಂಪಾರು, ಸಿದ್ದಾಪುರ, ಹೊಸಂಗಡಿ, ತೀರ್ಥಹಳ್ಳಿ, ಶಿವಮೊಗ್ಗ ಕಡೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ – 52 ಕೂಡ ಇದೇ ಸೇತುವೆಯ ಮೂಲಕವೇ ಹಾದು ಹೋಗುತ್ತದೆ. ಸಿದ್ದಾಪುರ, ಶಂಕರನಾರಾಯಣ, ಅಂಪಾರು, ಕಂಡ್ಲೂರು ಭಾಗದವರಿಗೆ ಕುಂದಾಪುರ ಅಥವಾ ಉಡುಪಿಗೆ ತೆರಳಲು ಕೂಡ ಇದೇ ಸೇತುವೆಯಾಗಿಯೇ ಸಂಚರಿಸಬೇಕು. ಪ್ರತಿ ನಿತ್ಯ ಹತ್ತಾರು ಬಸ್‌ಗಳು ಈ ಸೇತುವೆಯಾಗಿ ತೆರಳುತ್ತವೆ. ಅಂಪಾರು, ಕಂಡೂÉರು ಭಾಗದಿಂದ ಕುಂದಾಪುರ, ಕೋಟೇಶ್ವರ ಶಾಲಾ – ಕಾಲೇಜಿಗೆ ಹೋಗುವ ನೂರಾರು ಮಂದಿ ವಿದ್ಯಾರ್ಥಿಗಳಿದ್ದಾರೆ.

ಅಲ್ಲಲ್ಲಿ ಬಿರುಕು ಬಿಟ್ಟ ಸೇತುವೆ
ಈ ಸೇತುವೆಯು 300 ಮೀ. ಉದ್ದವಿದ್ದು, 7.5 ಅಗಲವಿದೆ. ಹಲವು ವರ್ಷಗಳಿಂದ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಧ್ಯೆ ಬೃಹದಾಕಾರದ ಕಂದಕ ಸೃಷ್ಟಿಯಾಗಿದೆ. ಕೆಲವೆಡೆಯಂತೂ ಡಾಮರು, ಕಾಂಕ್ರೀಟ್‌ ಎದ್ದು ಹೋಗಿ, ಕಬ್ಬಿಣದ ರಾಡ್‌ಗಳು ಕಾಣುತ್ತಿದೆ. ಮಳೆಗಾಲದಲ್ಲಂತೂ ಈ ಕಂದಕಗಳಲ್ಲಿ ನೀರು ನಿಂತು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಾಮಿಯಿಂದ ತಪಾಸಣೆ ; ವರದಿ
ಈ ಸೇತುವೆಯು ಶಿಥಿಲಾವಸ್ಥೆಯಲ್ಲಿದೆ ಎನ್ನುವ ಮಾತುಗಳು ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದು, 2017-18 ರ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಾಮಿÕ (ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ) ವಿಭಾಗದಿಂದ ಸೇತುವೆಗಳ ಬಾಳಿಕೆ ಹಾಗೂ ಧಾರಣಾ ಸಾಮರ್ಥ್ಯ ನಡೆಸುವ ಯಂತ್ರದ ಮೂಲಕ ತಪಾಸಣೆ ನಡೆಸಲಾಗಿತ್ತು. 2017ರ ಅ. 23ರಂದು ಪ್ರಾಮಿÕಯು ಇದರ ದುರಸ್ತಿ ಅಗತ್ಯವಿದೆಯೆಂದು ವರದಿ ತಯಾರಿಸಿ, 1.32 ಕೋ.ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ನೀಡಿತ್ತು.

Advertisement

11 ಸಾವಿರ ವಾಹನ ಸಂಚಾರ
ಇದು ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52 ಹಾದು ಹೋಗುವ ಸೇತುವೆಯಾಗಿದೆ. ಪ್ರತಿ ನಿತ್ಯ ಈ ಸೇತುವೆಯಲ್ಲಿ 11 ಸಾವಿರಕ್ಕೂ ಮಿಕ್ಕಿ ವಾಹನಗಳು ಸಂಚರಿಸುತ್ತವೆ. ವಿಶೇಷ ದಿನಗಳಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಿರುತ್ತದೆ. ಪ್ರತಿ ದಿನ ಸಾವಿರಾರು ಮಂದಿ ಇದೇ ಸೇತುವೆಯನ್ನು ಆಶ್ರಯಿಸಿದ್ದಾರೆ.

ಕಂಡ್ಲೂರು ಸೇತುವೆ ಶಿಥಿಲಾವಸ್ಥೆಯಲ್ಲಿದೆ ಎಂದು ಪ್ರಾಮಿÕಯು 2017ರಲ್ಲಿಯೇ ವರದಿ ಕೊಟ್ಟಿದ್ದರೂ ಸರಕಾರದಿಂದ ಮಾತ್ರ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಸೇತುವೆಯಲ್ಲಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ದುರಸ್ತಿಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹ .

ವಿಶೇಷ ಸಭೆಯಲ್ಲಿ ಪ್ರಸ್ತಾಪ
ಕಂಡ್ಲೂರು ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಇದರ ದುರಸ್ತಿಗೆ ತತ್‌ಕ್ಷಣ ಕ್ರಮಕೈಗೊಳ್ಳಿ ಎನ್ನುವುದಾಗಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದೇನೆ. ರಾಜ್ಯ ಹೆದ್ದಾರಿ ಹಾದು ಹೋಗುವ ಪ್ರಮುಖ ಸೇತುವೆಯಾಗಿದ್ದು, ಸೇತುವೆ ದುರಸ್ತಿ ಬಗ್ಗೆ ಆದ್ಯತೆ ನೆಲೆಯಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುವುದು. -ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಪ್ರಸ್ತಾವನೆ ಸಲ್ಲಿಕೆ
ಪ್ರಾಮಿÕಯವರು ನೀಡಿದ ವರದಿಯಂತೆ ಈಗಾಗಲೇ ಸರಕಾರಕ್ಕೆ ಲೋಕೋಪಯೋಗಿ ಇಲಾಖೆಯಿಂದ ದುರಸ್ತಿಗಾಗಿ 1.32 ಕೋ.ರೂ. ವೆಚ್ಚದ ಅಂದಾಜುಪಟ್ಟಿಯನ್ನು ತಯಾರಿಸಿ ಸಲ್ಲಿಸಲಾಗಿದೆ. 2018 ರ ಆ. 16 ರಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಲಭ್ಯವಾದ ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ದುರ್ಗಾದಾಸ್‌, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

ದುರಸ್ತಿ ಮಾಡದಿದ್ದರೆ ಅಪಾಯ
ಕಂಡ್ಲೂರು ಸೇತುವೆಯು ಅನೇಕ ವರ್ಷಗಳಿಂದ ಇದೇ ಸ್ಥಿತಿಯಲ್ಲಿದ್ದು, ನಾನು ಜಿ.ಪಂ. ಸದಸ್ಯನಾಗಿದ್ದ 2005 ರಿಂದ 2010 ಅವಧಿಯಲ್ಲಿಯೇ ಜಿ.ಪಂ. ಸಭೆಗಳಲ್ಲಿ ಸೇತುವೆ ದುರಸ್ತಿಗೆ ಒತ್ತಾಯ ಮಾಡಿದ್ದೆ. ಕಳೆದ 10-15 ವರ್ಷಗಳಿಂದ ದುರಸ್ತಿಗಾಗಿ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇನ್ನೂ ಕೂಡ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸೇತುವೆ ಮುರಿದು ಹೋಗುವ ಅಪಾಯವೂ ದೂರವಿಲ್ಲ. ದೇವಾನಂದ್‌ ಶೆಟ್ಟಿ ಹಳ್ನಾಡು,ಸ್ಥಳೀಯರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next