ಗಾತ್ರದಲ್ಲಿ ಇದು ಸಾಮಾನ್ಯ ಹಲಸಿಗಿಂತ ದೊಡ್ಡದಲ್ಲ. ಅಬ್ಬಬ್ಬ ಎಂದರೆ ಸುಲಿದ ತೆಂಗಿನಕಾಯಿಯಷ್ಟು ಇರುತ್ತದೆ. ರುದ್ರಾಕ್ಷಿಯ ಹಾಗೇ ದುಂಡಗಿನ ಆಕೃತಿಯಲ್ಲಿರುವ ಕಾರಣ ಅದರದೇ ಹೆಸರನ್ನೂ ಪಡೆದಿದೆ. ಸ್ಥಳೀಯವಾಗಿ ಮುಂಡು ಹಲಸು ಎಂದೂ ಇದನ್ನು ಕರೆಯುವುದುಂಟು. ಮರದ ಬುಡದಿಂದ ಆರಂಭಿಸಿ ತಲೆಯವರೆಗೂ ಒತ್ತೂತ್ತಾಗಿ ಕಾಯಿಗಳಾಗುವುದು ಇದರ ವಿಶಿಷ್ಟ ಗುಣ. ಇಂಥ ವಿಶೇಷ ಹಲಸಿನ ಆರು ಮರಗಳನ್ನು ಬೆಳೆಸಿ, ಕಾಯಿ ಕೊಯ್ಯುತ್ತಿದ್ದಾರೆ ವೆಂಕಪ್ಪ ನಾಯ್ಕರು.
ಬೆಳ್ತಂಗಡಿ ತಾಲೂಕಿನ ಬದ್ಯಾರಿನ ಸನಿಹ ಅಶ್ವತ್ಥಪಳಿಕೆಯಲ್ಲಿರುವ ಪುಟ್ಟ ಭೂಮಿಯಲ್ಲಿ ಅವರು ತೆಂಗು, ಕಾಳುಮೆಣಸು, ಅಡಿಕೆಗಳ ಚೊಕ್ಕವಾದ ಕೃಷಿ ಮಾಡುತ್ತಿದ್ದಾರೆ.
ವೆಂಕಪ್ಪನಾಯ್ಕರು ಬೆಳೆಸಿದ ಆರು ಮರಗಳಲ್ಲಿಯೂ ಭಿನ್ನ ಗುಣಗಳ ಕಾಯಿಗಳೇ ಇವೆ. ಸಾಮಾನ್ಯವಾಗಿ ಒಂದು ಕಾಯಿ ಗರಿಷ್ಠ ಒಂದು ಕಿಲೋ ತೂಗುತ್ತದೆ. ಸಣ್ಣ ಕುಟುಂಬಕ್ಕೆ ಒಂದು ಹೊತ್ತಿನ ಪದಾರ್ಥ ಮಾಡಲು ಒಂದು ಕಾಯಿ ಸಾಕು. ಕಾಯಿ ಎಳೆಯದಾಗಿದ್ದರೆ ಹೊರಗಿನ ಮುಳ್ಳು ತೆಗೆದು ಇಡೀ ಕಾಯನ್ನು ಸಣ್ಣಗೆ ಹೆಚ್ಚಿ ಪಲ್ಯ, ಸಾಂಬಾರು ಮಾಡಬಹುದು. ಹಲಸಿಗಿಂತ ಭಿನ್ನ ಸ್ವಾದ ಹೊಂದಿದ್ದು ತುಂಬ ರುಚಿಕರವಾಗಿದೆ ಎನ್ನುತ್ತಾರೆ ನಾಯ್ಕರು.
ಈ ಹಲಸಿನ ತೊಳೆಗಳು ಗಾತ್ರದಲ್ಲಿ ಸಣ್ಣದಿರುವ ಕಾರಣ, ಹಪ್ಪಳ ಮಾಡಲು ಬಳಸುವುದಿಲ್ಲವಂತೆ. ಹಣ್ಣಾದರೆ ತೊಳೆಗಳು ಬಹು ಸಿಹಿ. ಸಣ್ಣ ಬೀಜಗಳು ಕೂಡ ಗೋಡಂಬಿಯಂತೆ ಸ್ವಾದಿಷ್ಟವಾಗಿವೆ. ಹೊರಗಿನ ಸಿಪ್ಪೆ ತೆಗೆದು ಒಳಗಿನ ಭಾಗವನ್ನು ಹೋಳು ಮಾಡಿ ಸಾಂಬಾರು ಮಾಡಬಹುದು ಅಥವಾ ತೊಳೆಗಳನ್ನು ಬೇರ್ಪಡಿಸಿಯೂ ಉಪಯೋಗಿಸಬಹುದು. ಮರ ನೆಟ್ಟಗೆ ಬೆಳೆಯುತ್ತ ಹೋಗುವುದು ಇದರ ವೈಶಿಷ್ಟ್ಯ. ಕೊಂಬೆಗಳ ಬದಲು ಮರದಲ್ಲಿಯೇ ಗೆಜ್ಜೆ ಕಟ್ಟಿದ ಹಾಗೇ ಬೇರಿನವರೆಗೂ ಗೊಂಚಲು ತುಂಬ ಕಾಯಿಗಳಾಗುತ್ತವೆ. ಒಂದು ತೊಟ್ಟಿನಲ್ಲಿ ಐದಕ್ಕಿಂತ ಅಧಿಕ ಕಾಯಿಗಳಿರುತ್ತವೆ. ಒಂದೊಂದು ಮರದಲ್ಲಿ ಐನೂರಕ್ಕಿಂತ ಮೇಲ್ಪಟ್ಟು ಕಾಯಿಗಳು ಸಿಗುತ್ತವೆ. ಆರು ತಿಂಗಳ ಕಾಲ ಇದನ್ನು ನಿತ್ಯ ತರಕಾರಿಯಾಗಿ ಬಳಸಬಹುದು.
ರುದ್ರಾಕ್ಷಿ ಹಲಸಿನ ಮರ ಅಕ್ಟೋಬರ್ ವೇಳೆಗೆ ಎಳೆ ಹಲಸನ್ನು ಬಿಡಲಾರಂಭಿಸುತ್ತದೆ. ಜೂನ್ ತಿಂಗಳ ಹೊತ್ತಿಗೆ ಫಸಲು ಮುಗಿಯುತ್ತದೆ. ಬೀಜವನ್ನು ಬಿತ್ತಿ ತಯಾರಿಸಿದ ಗಿಡವನ್ನು ನೆಟ್ಟರೆ ಕಾಯಿಗಳಾಗಲು ಹತ್ತು ವರ್ಷ ಬೇಕಾಗುತ್ತದೆಯಂತೆ. ಕೊಂಬೆಯನ್ನು ಕಸಿ ಕಟ್ಟಿ ತಯಾರಿಸಿದ ಗಿಡದಲ್ಲಿ ಬೇಗನೆ ಹಣ್ಣು ಕೊಯ್ಯಬಹುದು. ತೋಟದೊಳಗೆ, ಗುಡ್ಡದಲ್ಲಿ ಕೂಡ ಮರ ಬೆಳೆಸಬಹುದು. ಮೊದಲ ವರ್ಷ ಬೇಸಿಗೆಯಲ್ಲಿ ಬುಡಕ್ಕೆ ನೀರು ಸಿಕ್ಕಿದರೆ ಅನ್ಯ ಗೊಬ್ಬರ, ಆರೈಕೆಯ ಬಯಕೆ ಇಲ್ಲದೆ ಬೆಳೆಯುತ್ತದೆ. ಬುಡಕ್ಕೆ ಹೊಸ ಮಣ್ಣು ಹಾಕಿ ಬೇರು ಸಲೀಸಾಗಿ ಹೋಗಲು ಅನುಕೂಲಕರವಿದ್ದಲ್ಲಿ ಫಸಲು ಶೀಘ್ರ ಕೊಡುತ್ತದಂತೆ. ಪೇಟೆಯ ವಾಸಿಗಳು ಹಿತ್ತಲಿನಲ್ಲಿಯೂ ಬೆಳೆಯಬಹುದಾದ ಮರವಿದು. ಆದರೆ ರೈತರ ಅನಾಸಕ್ತಿಯಿಂದಾಗಿ ಇದರ ಕೃಷಿ ತೀರ ವಿರಳವಾಗಿ ಗೋಚರಿಸುತ್ತಿದೆ.
– ಪ,ರಾಮಕೃಷ್ಣ ಶಾಸ್ತ್ರೀ