Advertisement

ಖಂಡೇನಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ!

03:55 PM Apr 29, 2019 | Naveen |

ಚಿತ್ರದುರ್ಗ: ಆಂಧ್ರ ಗಡಿಭಾಗದ ಗ್ರಾಪಂ ಕೇಂದ್ರ ಸ್ಥಾನದ ಖಂಡೇನಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಜನರು ನೀರಿಗಾಗಿ ಹೈರಾಣಾಗಿದ್ದಾರೆ.

Advertisement

ಜಿಲ್ಲೆಯ ಗಡಿ ಗ್ರಾಮ ಇದಾಗಿದ್ದು ಆಂಧ್ರದ ಪ್ರದೇಶದ ಅಗ್ರಹಾರ ಎನ್ನುವ ಹಳ್ಳಿಯಿಂದ ನಿತ್ಯ ಕುಡಿಯುವ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಖಂಡೇನಹಳ್ಳಿಯಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಅಗ್ರಹಾರ ಗ್ರಾಮದ ಜನತೆ ಯಾವುದೇ ಭೇದ ತೋರದೆ ಸಹೋದರಂತೆ ನೀರು ನೀಡುತ್ತಿದ್ದಾರೆ. ಆದರೂ ಹೊರ ರಾಜ್ಯಕ್ಕೆ ಹೋಗಿ ನೀರು ತರುವುದು ಎಷ್ಟು ಸೂಕ್ತ ಎನ್ನುವ ಭಾವನೆ ಜನರಲ್ಲಿ ಕಾಡುತ್ತಿದೆ. ಖಂಡೇನಹಳ್ಳಿ ಪಾಳ್ಯ, ಮದ್ದಿಹಳ್ಳಿ, ಹಲಗಲದ್ದಿ, ಹೊಸಕೆರೆ ಗ್ರಾಮಗಳಿಂದಲೂ ಜನರು ನೀರು ತರುತ್ತಿದ್ದಾರೆ.

ಬತ್ತಿದ ಕೊಳವೆಬಾವಿಗಳು: ಗ್ರಾಮದಲ್ಲಿದ್ದ 8 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಶುದ್ಧ ಕುಡಿಯುವ ನೀರಿನ ಘಕದ ಕೊಳವೆ ಬಾವಿ ಕೂಡ ಒಣಗಿ ಹೋಗಿದೆ. ಸ್ಥಳೀಯ ಗ್ರಾಪಂ ಆಡಳಿತ ನೀರು ನೀಡದೇ ಕೈಕಟ್ಟಿ ಕೂತಿಲ್ಲ. ಇತ್ತೀಚೆಗೆ ಎರಡು ಕೊಳವೆ ಬಾವಿ ಕೊರೆಯಲಾಯಿತು. ಅದರಲ್ಲಿ ಒಂದು ಕೊಳವೆ ಬಾವಿ ವಿಫಲವಾಯಿತು. ಇನ್ನೊಂದರಲ್ಲಿ ಅರ್ಧ, ಮುಕ್ಕಾಲಿಂಚು ನೀರು ಬರುತ್ತಿದೆಯಾದರೂ ಗ್ರಾಮದಲ್ಲಿರುವ ನಾಲ್ಕು ಸಾವಿರ ಜನಸಂಖ್ಯೆಗೆ ಸಾಕಾಗುತ್ತಿಲ್ಲ.

ವಿದ್ಯುತ್‌ ಸಮಸ್ಯೆ: ಸದ್ಯಕ್ಕೆ ದಿನ ಒಂದಕ್ಕೆ ಎರಡು-ಮೂರು ಲೋಡ್‌ ಟ್ಯಾಂಕರ್‌ ನೀರನ್ನು ರೈತರ ಜಮೀನುಗಳಿಂದ ತುಂಬಿಸಿಕೊಂಡು ನೀಡಲಾಗುತ್ತಿದೆ. ರೈತರ ಜಮೀನುಗಳಿಗೆ ಮೂರು ಗಂಟೆ ಕಾಲ ತ್ರಿಫೇಸ್‌ ವಿದ್ಯುತ್‌ ನೀಡುತ್ತಿದ್ದು, ಒಂದು ಟ್ಯಾಂಕರ್‌ ಲೋಡ್‌ ಮಾಡಲು ಎರಡು ಗಂಟೆ ಬೇಕಾಗುತ್ತದೆ. ದಿನಕ್ಕೆ ಒಂದು ಟ್ಯಾಂಕರ್‌ ನಲ್ಲಿ ಎರಡು ಲೋಡ್‌ ನೀರು ಪೂರೈಕೆ ಮಾಡುವುದೇ ದುಸ್ತಾರವಾಗಿದೆ.

ಟ್ಯಾಂಕರ್‌ ನೀರು ಸಾಕಾಗುತ್ತಿಲ್ಲ: ಟ್ಯಾಂಕರ್‌ ಮೂಲಕ ತಂದ ನೀರನ್ನು ಕೇರಿ ಕೇರಿಗಳಲ್ಲಿ ಅಡ್ಡ ಗಟ್ಟಿ ನೀರು ಪಡೆಯುತ್ತಾರೆ. ಯಾರಿಗೆ ನೀರು ಪೂರೈಕೆ ಮಾಡಬೇಕೆನ್ನುವುದು ಅರ್ಥವಾಗುತ್ತಿಲ್ಲ. ಒಂದು ರೀತಿ ನೀರಿಗಾಗಿ ಯುದ್ಧ ಮಾಡಿದಂತಾಗುತ್ತಿದೆ ಎಂದು ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ.

Advertisement

ನೀರು ತರುವುದೇ ನಿತ್ಯ ಕಾಯಕ: ಹೊರ ರಾಜ್ಯ ಆಂಧ್ರ ಪ್ರದೇಶದ ಅಗ್ರಹಾರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ 3 ಕಿ.ಮೀ. ದೂರಕ್ಕೆ ಹೋಗಿ ನೀರು ತರುವುದೇ ನಿತ್ಯದ ಕೆಲಸವಾಗಿದೆ. ಗ್ರಾಮದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಬುಡಕಟ್ಟು ಸಮುದಾಯಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನೀರಿಗಾಗಿ ಯಮಯಾತನೆ ಪಡುತ್ತಿದ್ದಾರೆ.

ತಾತ್ಕಾಲಿಕ ಪರಿಹಾರ: ನೀರಿನ ಸಮಸ್ಯೆ ಅರಿತ ಸ್ಥಳೀಯ ಆಡಳಿತ ಗ್ರಾಮ ಪಂಚಾಯತ್‌ ಈಗಾಗಲೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರೂ ನೀರಿನ ಸಮಸ್ಯೆಗೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ತಾತ್ಕಾಲಿಕ ಪರಿಹಾರ ಕಾರ್ಯವೂ ಮುಗಿದು ಹೋಗಿದೆ. ಹಾಗಾಗಿ ಕೈಚೆಲ್ಲಿ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡ್ಮೂರು ದಿನಕ್ಕೊಮ್ಮೆ ನೀರು: ಗ್ರಾಪಂ ವತಿಯಿಂದ ಸಮಗ್ರವಾಗಿ ನೀರು ಪೂರೈಸಲು ಅಸಾಧ್ಯವಾಗಿದ್ದು, ಎರಡು ದಿನಕ್ಕೊಮ್ಮೆ, ವಾರಕ್ಕೊಮ್ಮೆ ನೀರು ಸಿಗುವುದು ಕಷ್ಟವಾಗಿದೆ. ಬಹುತೇಕ ಮನೆಗಳು ನೀರಿನ ಸಮಸ್ಯೆಯಿಂದ ನಲುಗಿ ಹೋಗಿವೆ. ಸತತ 8-10 ವರ್ಷಗಳ ನಿರಂತರ ಬರದಿಂದಾಗಿ ಪ್ರತಿ ಬಾರಿಗಿಂತ ಈ ಬಾರಿ ಬಹುಬೇಗನೆ ಜಲಮೂಲ ಸಂಪೂರ್ಣ ಬತ್ತಿದ ಪರಿಣಾಮ ನೀರಿಗಾಗಿ ಹಾಹಕಾರ ಎದ್ದಿದೆ.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಕೆ ಆಗುತ್ತಿಲ್ಲವಾದ್ದರಿಂದ ಅದು ಸುಸ್ಥಿತಿಯಲ್ಲಿದೆಯೋ, ದುಸ್ಥಿತಿಯಲ್ಲಿದೆಯೋ ಎನ್ನುವುದು ತಿಳಿಯುತ್ತಿಲ್ಲ. ಇತ್ತೀಚೆಗೆ ಆರ್‌ ಒ ಘಟಕದ ಕೊಳವೆ ಬಾವಿಗೆ ಮೋಟರ್‌ ದುರಸ್ತಿ ಮಾಡಿಸಿ ಅಳವಡಿಸಲಾಗಿತ್ತು. ಆದರೂ ಹನಿ ನೀರು ಬರುತ್ತಿಲ್ಲ.

ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ. ನೆರೆಯ ಆಂಧ್ರ ಪ್ರದೇಶದ ಅಗ್ರಹಾರ, ಗ್ರಾಪಂ ಸಮೀಪದ ಹಳ್ಳಿಗಳಾದ ಪಾಳ್ಯ, ಮದ್ದಿಹಳ್ಳಿ, ಹಲಗಲದ್ದಿ, ಹೊಸಕೆರೆ ಗ್ರಾಮಗಳಲ್ಲಿ ನೀರು ತರುತ್ತಿದ್ದಾರೆ. ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಸಾಕಾಗುತ್ತಿಲ್ಲ.
ಕೆ.ಸೌಮ್ಯ ಗೋವಿಂದರಾಜು,
ಉಪಾಧ್ಯಕ್ಷರು, ಖಂಡೇನಹಳ್ಳಿ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next