Advertisement

ಕುಂದಾಪುರ ಮಿನಿ ವಿಧಾನಸೌಧದ ಸ್ಲ್ಯಾಬ್‌ ಕುಸಿತ: ಸಿಬಂದಿಗೆ ಗಾಯ

12:12 AM Aug 18, 2019 | Team Udayavani |

ಕುಂದಾಪುರ: ಕೇವಲ 4 ವರ್ಷಗಳ ಹಿಂದೆ ನಿರ್ಮಾಣಗೊಂಡ ಕುಂದಾಪುರದ ಮಿನಿ ವಿಧಾನ ಸೌಧದ ಮೇಲಂತಸ್ತಿನ ಕಂದಾಯ ವಿಭಾಗದ ಕೊಠಡಿಯ ಸ್ಲ್ಯಾಬ್‌ ಕುಸಿದು ಕರ್ತವ್ಯ ನಿರತ ಸಿಬಂದಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಉದ್ಘಾಟನೆಗೂ ಮೊದಲೇ ಈ ಕಟ್ಟಡದ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿತ್ತು.

Advertisement

ಮಿನಿ ವಿಧಾನ ಸೌಧದ ಮೇಲಂತಸ್ತಿನ ತಹಶೀಲ್ದಾರ್‌ ಗ್ರೇಡ್‌-1 ಕಚೇರಿಗೆ ಹೊಂದಿ ಕೊಂಡಂತಿರುವ ಕಂದಾಯ ವಿಭಾಗದ ಕಚೇರಿಯ ಮೇಲ್ಛಾವಣಿಯ ಸ್ಲ್ಯಾಬ್‌ನ ಗಾರೆ ಶನಿವಾರ ಮಧ್ಯಾಹ್ನದ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಅವರ ಮೇಲೆ ಬಿದ್ದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಳಕ್ಕೆ ಬೀಳುವಾಗ ಫ್ಯಾನ್‌ ಇದ್ದುದರಿಂದ ನಾರಾಯಣ ಅವರತಲೆಗೆ ಬೀಳುವುದು ತಪ್ಪಿದೆ. ಅಷ್ಟರಲ್ಲಿ ಅವರು ಕೈ ಅಡ್ಡ ಹಿಡಿದಿದ್ದು, ಕೈಗೆ ಗಾಯವಾಗಿದೆ. ಈ ಕೊಠಡಿಯಲ್ಲಿ 12 ಮಂದಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸೊತ್ತುಗಳಿಗೆ ಹಾನಿ

ಕಚೇರಿಯೊಳಗಿದ್ದ 3 ಕಂಪ್ಯೂಟರ್‌, 1 ಫ್ಯಾನ್‌, ಹಲವು ಕುರ್ಚಿಗಳು, ಕಡತಗಳು ಹಾಗೂ ಇತರ ಪರಿಕರಗಳಿಗೂ ಹಾನಿಯಾಗಿದೆ. ಗಾರೆ ಮತ್ತಷ್ಟು ಕುಸಿಯುವ ಸಂಭವವಿದ್ದು, ಅಧಿಕಾರಿಗಳು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಇದೇ ಕೊಠಡಿಯ ಗೋಡೆ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

Advertisement

4 ವರ್ಷಗಳ ಹಿಂದೆ ಉದ್ಘಾಟನೆ

2015 ಫೆ. 7ರಂದು ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ಹಾಗೂ ಆಗಿನ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಈ ಕಟ್ಟಡವನ್ನು ಉದ್ಘಾಟಿಸಿದ್ದರು.

ಸುಮಾರು ನಾಲ್ಕೂವರೆ ವರ್ಷದ ಹಿಂದೆ ನಿರ್ಮಾಣವಾಗಿದ್ದ ಮಿನಿ ವಿಧಾನಸೌಧದಲ್ಲಿ ಕಳೆದ ವರ್ಷ ಮೊದಲ ಮಹಡಿ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್‌ ನ ಸಿಮೆಂಟ್ ಗಾರೆ ಕುಸಿದಿತ್ತು. ಈಗ ಮತ್ತೆ ಕೊಠಡಿಯೊಳಗಿನ ಸ್ಲ್ಯಾಬ್‌ ಕುಸಿದಿದೆ.

ಉದಯವಾಣಿ ವರದಿ

ಉದಯವಾಣಿ ಪತ್ರಿಕೆಯು ಮಿನಿ ವಿಧಾನಸೌಧದ ಕಳಪೆ ಕಾಮಗಾರಿ, ಗೋಡೆ ಬಿರುಕು ಬಿಟ್ಟ ಬಗ್ಗೆ, ನೀರು ಸೋರುತ್ತಿರುವ ಕುರಿತಂತೆ ಸಮಗ್ರ ವಾಗಿ ವರದಿಯನ್ನು ಪ್ರಕಟಿಸಿತ್ತು. ಆದರೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next