Advertisement

ಕಂದಾ, ನಿನಗೇಕೆ ಪೆಟ್ಟು ಕೊಟ್ಟೆ ಗೊತ್ತಾ?

03:45 AM Jun 28, 2017 | Team Udayavani |

ನಾನು ಪೆಟ್ಟು ಕೊಟ್ಟಾಗ, ನೀನು ಅತ್ತೂ ಅತ್ತೂ ನಿದ್ರೆಗೆ ಜಾರುತ್ತೀ. ಆದರೆ, ನನಗೆ ಅಂದು ನಿದ್ರೆ ಬರುವುದಿಲ್ಲ ಪುಟ್ಟಾ. ನಿನ್ನ ಮುದ್ದು ಮೋರೆಯ ಪಕ್ಕದಲ್ಲಿ ನನ್ನ ಮುಖವನ್ನು ತಂದು, ನಿನ್ನ ಕೂದಲನ್ನು ನೇವರಿಸುತ್ತೇನೆ…

Advertisement

ಪ್ರೀತಿಯ ಮಗಳೇ…
ನಾನು ಕೆಲಸ ಮುಗಿಸಿ, ಮನೆಗೆ ಬಂದಾಗ, ಅಪಾರ ಖುಷಿಯಲ್ಲಿ ನನ್ನನ್ನು ಸ್ವಾಗತಿಸುತ್ತೀ. ನಿನ್ನ ಮೊಗದ ಆ ನಗುವಿನ ಅಂದ ಅನೇಕ ಸಲ ನನ್ನ ಮನಸ್ಸನ್ನು ಹೂವಾಗಿಸುತ್ತದೆ. ಆದರೆ, ಇನ್ನೂ ಕೆಲವು ಸಲ ಆ ನಗುವನ್ನು ಅರಿಯದೆ ಮೂಢನಾಗುವೆ. ಮನಸ್ಸನ್ನು ವಿನಾ ಕಾರಣ ಕಲ್ಲು ಮಾಡಿಕೊಳ್ಳುವೆ. ಇದಕ್ಕೆಲ್ಲ ಕಾರಣ, ನನ್ನ ಕೆಲಸದೊತ್ತಡ ಪುಟ್ಟಾ…
“ನಿಮ್ಮ ಟೆನ್ಶನ್ ಅನ್ನು ನನ್ನ ಮೇಲೆ ಹಾಕೆºàಡಿ’ ಎಂದು ಹೇಳಲಾರದ ಮುಗ್ಧ ಹೂವು ನೀನು ಎನ್ನುವುದನ್ನು ನಾನು ಚೆನ್ನಾಗಿ ಬಲ್ಲೆ. ನನ್ನದು ನೂರಾರು ಯೋಚನೆಗಳನ್ನು ತುಂಬಿಕೊಂಡ ತಲೆ. ವಯಸ್ಸಾದಂತೆ ತಾಳ್ಮೆ ಹೆಚ್ಚಾಗಬೇಕು, ಹೆಚ್ಚಾಗುತ್ತದೆ ಕೂಡ. ಆದರೆ, ಕೆಲವು ಸಲ ಏನಾಗುತ್ತದೋ ಗೊತ್ತಿಲ್ಲ… ನಿನಗೆ ಪೆಟ್ಟು ಕೊಡುತ್ತೇನೆ. ಆಗ ನೀನು ಅಳುತ್ತೀ. ಮುನಿಸಿಕೊಂಡು ಹೋಗಿ, ಮೂಲೆಯಲ್ಲಿ ಕೂರುತ್ತೀ.

ಪುಟ್ಟಾ, ಇದೆಲ್ಲ ಪ್ರಹಸನ ಮುಗಿದ ಮೇಲೆ ಮತ್ತೆ ನಾನು ಯೋಚಿಸುತ್ತೇನೆ ಕಣೋ… “ನಿನ್ನ ಹೊಡೆದಿದ್ದಕ್ಕೆ ಏನು ಕಾರಣ?’ ಎಂದು. ಅದು ಬಹುತೇಕ ಸಲ ಚಿಲ್ಲರೆ ವಿಷಯವೇ ಆಗಿರುತ್ತದೆ ಎನ್ನುವುದೂ ನನಗೂ ಅನ್ನಿಸಿದೆ. ಶಾಲೆಯ ಹೋಮ್‌ವರ್ಕ್‌ ಮಾಡದೇ ಇದ್ದಾಗ, ನೀನು ಹೆಚ್ಚು ಹೊತ್ತು ಆಟದ ಮೈದಾನದಲ್ಲಿಯೇ ಕಾಲ ಕಳೆದಾಗ, ನನ್ನ ಮಾತನ್ನು ಕೇಳದೇ ಇದ್ದಾಗ… ಇಂಥ ಸಣ್ಣಪುಟ್ಟ ಸಂಗತಿಗಳೂ ನನಗೆ ಆಗ ದೊಡ್ಡದಾಗಿ ಕಾಣಿಸುತ್ತವೆ.

ನಾನು ಪೆಟ್ಟು ಕೊಟ್ಟಾಗ, ನೀನು ಅತ್ತೂ ಅತ್ತೂ ನಿದ್ರೆಗೆ ಜಾರುತ್ತೀ. ಆದರೆ, ನನಗೆ ಅಂದು ನಿದ್ರೆ ಬರುವುದಿಲ್ಲ ಪುಟ್ಟಾ. ನಿನ್ನ ಮುದ್ದು ಮೋರೆಯ ಪಕ್ಕದಲ್ಲಿ ನನ್ನ ಮುಖವನ್ನು ತಂದು, ನಿನ್ನ ಕೂದಲನ್ನು ನೇವರಿಸುತ್ತೇನೆ. “ಸಾರಿ, ಕಣೋ… ಕ್ಷಮಿಸು ನನ್ನ’ ಎಂದು ನಿನ್ನ ಅಮ್ಮನಿಗೆ ಕೇಳಿಸದ ಹಾಗೆ, ಹೇಳುತ್ತೇನೆ. ಅದರಲ್ಲೂ ನನ್ನದೇನೋ ಒಂದು ಅಹಂಕಾರ. ನೀನು ಅತ್ತಿದ್ದಕ್ಕಿಂತ ಹೆಚ್ಚು, ನಾನು ಮನಸ್ಸಿನಲ್ಲಿ ಅತ್ತಿರುತ್ತೇನೆ ಪುಟ್ಟಾ…

ಮರುದಿನ ಬೆಳಗ್ಗೆ, ನಿನಗೊಂದು ಪಪ್ಪಿ ಕೊಟ್ಟೆ ನಾನು ಎಬ್ಬಿಸುತ್ತೇನೆ. ಆ ವೇಳೆ ನಿನಗೊಂದು ಪುಟ್ಟ ತರಗತಿ. ಅರ್ಧ ಗಂಟೆ ನೀತಿಪಾಠ ಹೇಳುತ್ತೇನೆ. ಆಗಲೂ ನಾನು “ನೀನು ಮಾಡಿದ್ದು, ಸಣ್ಣ ತಪ್ಪು. ಕ್ಷಮಿಸಿದ್ದೇನೆ ಕಣೋ’ ಎಂದು ತಪ್ಪೊಪ್ಪಿಕೊಳ್ಳುವುದಿಲ್ಲ. ಅಲ್ಲೂ ಅಹಂಕಾರ ತೋರಿ, “ಇನ್ನೊಮ್ಮೆ ಹಾಗೆ ಮಾಡಬೇಡ’ ಎಂದು ಮೆತ್ತನೆ, ನಿನ್ನ ಕಿವಿಯನ್ನು ಹಿಂಡುತ್ತೇನೆ. ನನ್ನ ಈ ಎಲ್ಲ ಅಪರಾಧಗಳನ್ನೂ ನೀನು ಮನ್ನಿಸುವಂತೆ, ತಲೆ ಅಲ್ಲಾಡಿಸಿ, ಒಂದು ನಗುತ್ತೀಯಲ್ಲಾ… ಆ ನಗುವೇ ನನ್ನನ್ನು ಪುನಃ ಮನುಷ್ಯನನ್ನಾಗಿಸುತ್ತೆ. ನಿನ್ನ ಪಿಳಿಪಿಳಿ ಕಣ್ಣಿನಲ್ಲಿ ಏನೋ ವಿಶೇಷ ಪ್ರೀತಿ ಕಾಣಿಸುತ್ತದೆ. 

Advertisement

ಮತ್ತೆ ನಾನು ಕೆಲಸಕ್ಕೆ ಹೊರಡುತ್ತೇನೆ. ಅಲ್ಲೂ ನಿನ್ನದೇ ನೆನಪು. ಅದ್ಹೇಗೋ, ಮತ್ತೆ ಕೆಲಸದೊತ್ತಡ ನನ್ನ ತಲೆಯೇರುತ್ತದೆ. ಮನೆಗೆ ಬಂದಾಗ ಅದೇ ಒತ್ತಡವೇ ನನ್ನನ್ನು ಪುನಃ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಸಾರಿ, ಮಗಳೇ… ಇನ್ನೆಂದೂ ಹೊಡೆಯುವುದಿಲ್ಲ.

ನಿನ್ನ ಪ್ರೀತಿಯ
ಪಪ್ಪಾ…

– ನಾಗರಾಜ್‌ ಮುಕಾರಿ, ಕೈಗಾ

Advertisement

Udayavani is now on Telegram. Click here to join our channel and stay updated with the latest news.

Next