ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ, ಮುದ್ಯ ಪ್ರದೇಶದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಪುಯಿಲದಲ್ಲಿ 7 ತಿಂಗಳ ಗಬ್ಬದ ದನವೊಂದು ಅಸುನೀಗಿದೆ ಎಂದು ವರದಿಯಾಗಿದೆ. ಜಾನುವಾರುಗಳಿಗೆ ಹರಡುವ ಕಾಲುಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧೆಡೆ ರೋಗ ನಿರೋಧಕ ಲಸಿಕೆ ಹಾಕಲಾಗುತ್ತಿದೆ. ರೋಗ ಕಾಣಿಸಿಕೊಳ್ಳುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಈ ರೋಗ ಬಂದ ಮೇಲೆ ಲಸಿಕೆ ನೀಡಿದರೂ ರೋಗ ಹತೋಟಿಗೆ ತರುವುದು ಕಷ್ಟ.
ಲಸಿಕೆ ನೀಡುವ ಹಂತದಲ್ಲೇ ಬಜತ್ತೂರು ಕಾಂಚನ, ಮುದ್ಯ ಪ್ರದೇಶದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಪುಯಿಲ ನಿವಾಸಿ, ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಡೆನ್ನಿಸ್ ಪಿಂಟೋ ಅವರ ಮನೆಯಲ್ಲಿ 7 ತಿಂಗಳ ಗಬ್ಬದ ದನವೊಂದು ರೋಗ ಉಲ್ಬಣಿಸಿ, ಜೂ. 22ರಂದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಡೆನ್ನಿಸ್ ಪಿಂಟೋ ಅವರ ಮನೆಯಲ್ಲಿ 8 ದನಗಳಿದ್ದು, ಪ್ರತಿದಿನ 45ರಿಂದ 50 ಲೀ. ಹಾಲು ಸಂಗ್ರಹಿಸಿ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪೂರೈಸುತ್ತಿದ್ದರು. ಈ ಪೈಕಿ 7 ತಿಂಗಳ ಗಬ್ಬ ಇದ್ದ ದನ ದಿನಕ್ಕೆ 20 ಲೀ. ಹಾಲು ನೀಡುತ್ತಿತ್ತು ಎಂದು ಪಿಂಟೋ ತಿಳಿಸಿದ್ದಾರೆ. ದನದ ಮೌಲ್ಯ 45ರಿಂದ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪಶುವೈದ್ಯರ ಪ್ರಯತ್ನದ ನಡುವೆಯೂ ದನ ರೋಗಕ್ಕೆ ಬಲಿಯಾಗಿದೆ. ಇತರೇ ಪ್ರದೇಶಗಳಲ್ಲಿ ಕಂಡುಬಂದಿರುವ ಕಾಲುಬಾಯಿ ರೋಗ ಹತೋಟಿಗೆ ಬಂದಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ಕುರಿ ಗೊಬ್ಬರದಿಂದ ಹರಡಿರುವ ಶಂಕೆ
ಕಾಲುಬಾಯಿ ರೋಗದ ಚುಚ್ಚುಮದ್ದನ್ನು ಆರು ತಿಂಗಳಿಗೊಮ್ಮೆ ಕೊಡಬೇಕಾದ್ದು ವಾಡಿಕೆ. ಈ ದನಕ್ಕೂ ರೋಗ ನಿರೋಧಕ ಔಷಧಿ ಕೊಡಲಾಗಿತ್ತು. ಆಸುಪಾಸಿನಲ್ಲಿ ಕೃಷಿಕರು ಕುರಿ ಗೊಬ್ಬರವನ್ನು ಬಳಸಿರುವುದರಿಂದ ಕಾಲುಬಾಯಿ ರೋಗ ಹಬ್ಬಿರಬಹುದೆಂದು ಶಂಕೆ ಇದೆ.
– ಡಾ| ರಾಮಪ್ರಸಾದ್
ಉಪ್ಪಿನಂಗಡಿ ಪಶು ವೈದ್ಯಾಧಿಕಾರಿ