Advertisement

ಕಾಂಚನ: ಹೀಗೂ ಒಂದು ಭಿಕ್ಷಾಟನೆ…!

10:49 AM Feb 01, 2018 | |

ಪುತ್ತೂರು: ಒಂದಿಷ್ಟು ಜನರು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಹಾಡುಗಳನ್ನು ಹಾಡುತ್ತ ಮನೆಗಳಿಗೆ ಹೋಗುತ್ತಾರೆ. ಇದರೊಂದಿಗೆ ಪಿಟೀಲಿನಂತಹ ಪಕ್ಕವಾದ್ಯಗಳೂ ದನಿಸುತ್ತಿರುತ್ತವೆ. ಮನೆಯವರು ಕೊಟ್ಟ ಧಾನ್ಯಗಳನ್ನು ಮನೆಗೆ ತಂದು ಅಡುಗೆ ಮಾಡಿ ದೇವರಿಗೆ ನಿವೇದಿಸಿ ಮಧ್ಯಾಹ್ನ ಊಟ ಮಾಡುತ್ತಾರೆ. ಇದೊಂದು ಸಾಂಪ್ರದಾಯಿಕ ಪದ್ಧತಿ. ಇದರ ಸಾಂಪ್ರದಾಯಿಕ ಹೆಸರೂ “ಊಂಛ ವೃತ್ತಿ’. ಇಂತಹ ಸನ್ನಿವೇಶ ಪುರಾಣಗಳಲ್ಲಿ ಕಂಡುಬರುತ್ತವೆ. ಚಿತ್ರದಲ್ಲಿ ಕಾಣುತ್ತಿರುವುದು ಪುರಾಣದ್ದಲ್ಲ, ವಾಸ್ತವ ಲೋಕದ್ದು…

Advertisement

ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನ ಸಂಗೀತದ ಇತಿಹಾಸಕ್ಕೆ ಹೆಸರು ತಂದಿತ್ತ ಊರಿನಲ್ಲಿ ಈ ಊಂಛವೃತ್ತಿ ನಡೆಯಿತು. ನೇರಂಕಿ ಅರಸರ ಕಾಲದಲ್ಲಿ ಸುಮಾರು 250 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆನಿಂತ ಈ ಕುಟುಂಬಕ್ಕೆ 115 ವರ್ಷಗಳ ಸಂಗೀತದ ಇತಿಹಾಸವಿದೆ. ಚೆಂಬೈ ವೈದ್ಯನಾಥ ಭಾಗವತರ್‌, ಜಿ.ಎನ್‌.ಬಾಲಸುಬ್ರಹ್ಮಣ್ಯಂ, ಮೈಸೂರು ಚೌಡಯ್ಯನವರ ಸಂಗೀತ ಕಛೇರಿಗಳನ್ನು ಏರ್ಪಡಿಸಿ ಅದೇ ಸಮಯದಲ್ಲಿ ಆಸುಪಾಸಿನ ಮಕ್ಕಳಿಗೆ ಸಂಗೀತದ ಪಾಠವನ್ನು ವ್ಯವಸ್ಥೆಗೊಳಿಸುತ್ತಿದ್ದ ಇತಿಹಾಸವಿದೆ. ಆನಂದಲಕ್ಷ್ಮೀ ಅಮ್ಮಾಳ್‌, ಕಾಂಚನ ವೆಂಕಟಸುಬ್ರಹ್ಮಣ್ಯಂ, ಕಾಂಚನ ಸುಬ್ಬರತ್ನಂ ಈ ಕಾಂಚನ ತ್ರಿಮೂರ್ತಿಗಳಿಂದ ಬೆಳೆದು ನಿಂತ ಕಾಂಚನದ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ಶ್ರೀಲಕ್ಷ್ಮೀನಾರಾಯಣ ಮ್ಯೂಸಿಕ್‌ ಅಕಾಡೆಮಿ ಟ್ರಸ್ಟ್‌ ಆಯೋಜಿಸಿದ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ ಮತ್ತು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ, ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂ ಅವರ ಪುಣ್ಯ ದಿನಾಚರಣೆಯಾದ 64ನೆಯ ಕಾಂಚನೋತ್ಸವವು ಉದ್ಘಾಟನೆ ಗೊಂಡದ್ದೇ ಊಂಛವೃತ್ತಿಯಿಂದ. 

ವಿವಿಧ ಕಲಾವಿದರಿಂದ ಕಾರ್ಯಕ್ರಮ ವೈವಿಧ್ಯಗಳು ಸಂಪನ್ನಗೊಂಡವು. ಈಗ ಕಾಂಚನ ಸುಬ್ಬರತ್ನಂ ಅವರ ಪತ್ನಿ ರೋಹಿಣಿ ಸುಬ್ಬರತ್ನಂ ಟ್ರಸ್ಟ್‌ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಸಂಗೀತಜ್ಞ ಪುತ್ರಿಯರೂ ಊಂಛವೃತ್ತಿಯಿಂದ ಹಿಡಿದು ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next