Advertisement

ಸಾಫ್ಟ್ ವೇರ್‌ ತವರೂರಲ್ಲಿ ನಿರುದ್ಯೋಗಿ ಕನ್ನಡಿಗ… 

03:45 AM Feb 03, 2017 | |

ಸಾಫ್ಟ್ ವೇರ್‌ ಕ್ರಾಂತಿ ಭಾರತದಲ್ಲಿ ಪಾದಾರ್ಪಣೆಗೊಂಡ ಬಳಿಕ ಐಟಿ ಕ್ಷೇತ್ರದ ರಾಜಧಾನಿ ಹೊಣೆ ವಹಿಸಿಕೊಂಡಿದ್ದು ನಮ್ಮ ಕರ್ನಾಟಕದ ಬೆಂದಕಾಳೂರು ಅಸ ಬೆಂಗಳೂರು. ಕೆಲವೇ ವರ್ಷಗಳಲ್ಲಿ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಹೆಸರನ್ನು ಕೇಳುವಂತೆ ಮಾಡಿದ್ದು ಇದೇ ಬೆಂಗಳೂರು. ಇಲ್ಲಿನ ವಾತಾವರಣ, ಸೌಲಭ್ಯಗಳ ಪೂರೈಕೆ, ಐಟಿ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸಹಕಾರದಿಂದ ಬಹುಬೇಗ ಅನೇಕ ಕಂಪೆನಿಗಳಿಗೆ ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಕ್ಷೇತ್ರ ಮಾಡಿಕೊಳ್ಳಲು ಸಹಕಾರಿಯಾಯಿತು.

Advertisement

ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿರುವ ಒಟ್ಟು ಐಟಿ ಕಂಪೆನಿಗಳಲ್ಲಿ 35% ಕಂಪೆನಿಗಳು ಬೆಂಗಳೂರಿನಲ್ಲಿವೆ.ಸಣ್ಣಪುಟ್ಟ ಕಂಪೆನಿಗಳು ಸೇರಿ ಒಟ್ಟು 5000 ಕಂಪೆನಿಗಳು ಬೆಂಗಳೂರು ಒಂದರಲ್ಲೆ ಇವೆ ಅನ್ನುವುದು ಇತ್ತೀಚಿನ ಅಂಕಿಅಂಶ. ಐಟಿ ದಿಗ್ಗಜಗಳಾದ ಇನ್ಫೋಸಿಸ್‌, ವಿಪ್ರೋ, ಮೈಂಡ್‌ ಟ್ರೀ, ಎಂಪಸಿಸ್‌ ಇನ್ನೂ ಮುಂತಾದವುಗಳಿಗೆ ಬೆಂಗಳೂರು ಪ್ರಧಾನ ಕಚೇರಿ ಆದರೆ, ವಿದೇಶಿ ಕಂಪೆನಿಗಳಾದ ಇನ್‌ಟೆಲ್‌, ಟೆಕ್ಸಾಸ್‌ ಇನ್ಸಟ್ರಾಮೆಂಟ್ಸ, ಬೋಷ್‌, ಯಾಹೂ, ಸಾಪ್‌ ಲಾಬ್ಸ್ ಅಂತಹವುಗಳಿಗೆ ಭಾರತದ ಪ್ರಧಾನ ಕಚೇರಿ ಬೆಂಗಳೂರು. ಇಷ್ಟೇ ಅಲ್ಲದೇ ಕೆಲವು ಕಂಪೆನಿಗಳು ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲೂ ಕಾರ್ಯ ನಿರ್ವಹಿಸುತ್ತಿವೆ.

ಈ ಕಂಪೆನಿಗಳು ಬಳಸುತ್ತಿರುವುದು ನಮ್ಮ ನಾಡಿನ ನೀರು, ವಿದ್ಯುತ್‌, ನೆಲ ಹಾಗೂ ಇನ್ನು ಅನೇಕ ಸೌಲಭ್ಯಗಳನ್ನು. ಆದರೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಈ ಕಂಪೆನಿಗಳಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು? ಪ್ರತಿವರ್ಷ ಬಂಡವಾಳ ಹೂಡಿಕೆ ಸಮಾವೇಶವನ್ನು ನಮ್ಮ ಘನ ಸರ್ಕಾರ ನಡೆಸುತ್ತಲೇ ಇದೆ, ಹಾಗೆಯೇ ಕರ್ನಾಟಕದಲ್ಲಿ ಬಹುಸಂಖ್ಯೆಯ ಉದ್ಯೋಗವನ್ನು ನಾವು ಸೃಷ್ಟಿಸಿದ್ದೇವೆ ಅನ್ನುವ ಮಾತನ್ನು ಸಹ ಹೇಳುತ್ತಲೇ ಬಂದಿದೆ. ಆದರೆ ತಾವು ಸೃಷ್ಟಿಸಿರುವ ಉದ್ಯೋಗದಲ್ಲಿ ದುಡಿಯುತ್ತಿರುವವರು ನಮ್ಮ ನಾಡಿನವರ ಅಥವಾ ಹೊರಗಿನವರ ಅನ್ನುವ ಗೋಜಿಗೆ ಯಾರು ಹೋಗಿಲ್ಲ. 

ಕರ್ನಾಟಕದಲ್ಲಿ ಪ್ರತಿವರ್ಷ ಹತ್ತಿರ ಹತ್ತಿರ ಎಂಬತ್ತು ಸಾವಿರದಿಂದ ಒಂದು ಲಕ್ಷ ಮಂದಿ ಇಂಜಿನಿಯರ್‌ಗಳಾಗಿ ಹೊರಗೆ ಬರುತ್ತಿ
ದ್ದಾರೆ.ಕರ್ನಾಟಕದ ಯಾವ ಮೂಲೆಯಲ್ಲಿ ಇಂಜಿನಿಯರಿಂಗ್‌ ಪೂರ್ಣ ಮಾಡಿದರೂ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಬೇಕಾದ ಪರಿಸ್ಥಿತಿ ನಮ್ಮ ನಾಡಿನಲ್ಲಿದೆ. ಆದರೆ ಬೆಂಗಳೂರಿಗೆ ಕೆಲಸ ಅರಸಿ ಹೊರಟ ಹುಡುಗರಿಗೆ ಕೈಹಿಡಿದು ಕರೆಯುವುದು ಕನ್ಸಲ್ಟೆಂಸಿ ಮಾಫಿಯಾಗಳು. ನೀವೂ ಇಷ್ಟು ಸಾವಿರ ಕಟ್ಟಿ, ನಾವು ನಿಮಗೆ ಇಂಟರವ್ಯೂ ಅರೆಂಜ್‌ ಮಾಡುತ್ತೆವೆ, ನೀವೂ ಈ ಕೋರ್ಸ್‌ ಮಾಡಿ ನಿಮಗೆ 100% ಕೆಲಸ ಗ್ಯಾರೆಂಟಿ ಇಂತಹ ಮಾತುಗಳನ್ನು ನಂಬಿ ದುಡ್ಡು ಕಟ್ಟಿದವರು ಅವರು ಕೊಡುವ ಸರ್ಟಿಫಿಕೆಟ್‌ಗೆ ಜೇನುತ್ತುಪ್ಪ ಹಾಕಿ ನೆಕ್ಕಬೇಕು ಅಥವಾ ಅವರು ಕಳಿಸುವ ಸಣ್ಣ ಪುಟ್ಟ ಕಂಪೆನಿಗಳಲ್ಲಿ ನಮ್ಮ ಡಿಗ್ರಿಗಿಂತ ಕೆಳಮಟ್ಟದ ಅರ್ಹತೆಯ ಉದ್ಯೋಗದಲ್ಲಿ ದುಡಿಯಬೇಕು. ಬೆಂಗಳೂರಿಗೆ ಹೋಗಿ ಕೆಲಸ ಸಿಗದೇ ಕೈಯಲ್ಲಿರುವ ದುಡ್ಡೆಲ್ಲಾ ಖಾಲಿಯಾಗಿ ಮನೆಯವರ ಬಳಿ ದುಡ್ಡು ಕೇಳಲಿಕ್ಕೂ ಆಗದೇ, ಬ್ಯಾಂಕುಗಳಲ್ಲಿ ಸಾಲಮಾಡಿ ಇಂಜಿನಿಯರಿಂಗ್‌ ಮಾಡಿ, ಬ್ಯಾಂಕುಗಳ ಇಎಮ…ಐ ಕಟ್ಟಲಿಕೋಸ್ಕರ ಅನೇಕ ಪದವೀಧರರು ಬಾರುಗಳಲ್ಲಿ ಸಪ್ಲಯರ್‌ಗಳಾಗಿ ದುಡ್ಡಿಯುತ್ತಿದ್ದಾರೆ ಅನ್ನುವುದು ನಾನು ಕೇಳಿದಂತಹ ಕಟ್ಟು ಸತ್ಯ.

ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಹುಡುಗರಿಗೆ ಎದುರಾಗುವುದು ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದ ಹುಡುಗರೊಂದಿಗೆ ಸ್ಪರ್ಧೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ 1000 ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ತಯಾರಾಗುವ ಇಂಜಿನಿಯರ್‌ಗಳು ಕೆಲಸಕ್ಕಾಗಿ ಬರುವುದು ಬೆಂಗಳೂರಿಗೆ. ಉತ್ತರ ಭಾರತ ಹತ್ತಿರದ ತಮಿಳುನಾಡು, ಕೇರಳಕ್ಕೂ ಐಟಿ ರಾಜಧಾನಿ ಬೆಂಗಳೂರೇ ಆಸರೆ. ಸರ್ಕಾರ ನಡೆಸುವ ಉದ್ಯೋಗ ಮೇಳದಲ್ಲಿ ಅನೇಕ ಕಂಪೆನಿಗಳು ಸರ್ಕಾರಕ್ಕೆ ಒಲ್ಲೆ ಎನ್ನಲು ಮನಸ್ಸಿಲ್ಲದೇ ತಮ್ಮ ಹೆಸರನ್ನು ಕೇವಲ ಆಮಂತ್ರಣ ಪತ್ರಿಕೆಯಲ್ಲಿ ಮಾತ್ರ ಮುದ್ರಿಸಿರುತ್ತವೆಯೇ ವಿನಹಃ ಮೇಳದಲ್ಲಿ ಕಾಣಸಿಗುವುದು ತುಂಬಾ ಕಮ್ಮಿ. ಕೆಲವು ಕಂಪೆನಿಗಳು ಹಾಜರಾದರೂ “ರೆಸ್ಯೂಮ್‌ ಕೊಡಿ ಆಮೇಲೆ ತಿಳಿಸುತ್ತೇವೆ’ ಅಂತಾ ಮಾತು ಕೊಡುವ ದುರ್ಯೋಧನರೇ ಜಾಸ್ತಿ. ಅಷ್ಟೇ ಏಕೆ ಇತ್ತೀಚೆಗಷ್ಟೆ ಕರ್ನಾಟಕದ ಎರಡು ಜಿಲ್ಲೆಗಳು ಧರಣಿ ಮಾಡಿ, ಹೊಡೆದಾಡಿಕೊಂಡು ಗಿಟ್ಟಸಿಕೊಂಡ ಐಐಟಿಯಲ್ಲಿ ಕನ್ನಡಿಗರೆಷ್ಟು, ಕನ್ನಡಿಗರ ಮೀಸಲಾತಿ ಎಷ್ಟು ಅನ್ನುವ ಮಾಹಿತಿ ಹೆಚ್ಚಿನವರಿಗೆ ತಿಳಿದಿಲ್ಲ. ಇದು ಕೇವಲ ಇಂಜಿನಿಯರಿಂಗ್‌ ಕ್ಷೇತ್ರ ಮಾತ್ರವಲ್ಲ ಬಿಎ, ಬಿಕಾಮ…, ಬಿಎಸ್ಸಿ ಡಿಗ್ರಿ ಹೋಲ್ಡರ್‌ಗಳ ಕತೆಯೂ ಇದೆ. ಇದೇ ಪರಿಸ್ಥಿತಿ ಪಕ್ಕದ ತಮಿಳುನಾಡಿನಲ್ಲಿದ್ದರೆ ಅವರು ಸುಮ್ಮನೆ ಕೂರುತ್ತಿದ್ದರಾ?

Advertisement

ಇತ್ತೀಚೆಗೆ ತುಂಬಾ ಖುಷಿಕೊಟ್ಟ ವಿಚಾರವೇನೆಂದರೆ, ಕರ್ನಾಟಕ ಸರ್ಕಾರ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ 70% ಮೀಸಲಾತಿ ತರಲು ಹೊರಟಿರುವುದು. ಖಾಸಗಿ ಕಂಪೆನಿಗಳ ಲಾಭಿ ಇಲ್ಲೂ ಮುಂದುವರಿಯದೇ, ಈ ಆದೇಶವೇನಾದರೂ ಹೊರಬಿದ್ದರೆ, ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆà ಒಂದು ಮಟ್ಟಿಗೆ ನಿವಾರಣೆ ಆದಂತೆ ಆಗುತ್ತೆ. ಅಷ್ಟೇ ಅಲ್ಲದೇ ಕನ್ನಡ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿ 50%-70% ಮೀಸಲಾತಿ ತಂದರೆ ಬಾಗಿಲು ಹಾಕುತ್ತಿರುವ ಕನ್ನಡ ಶಾಲೆಗಳ ಅಭಿವೃದ್ಧಿ ಸಹ ಆಗುತ್ತದೆ.ಕೇಂದ್ರ ಸರ್ಕಾರ ವರ್ಷಕ್ಕೆ 5000 ನಿರುದ್ಯೋಗ ಭತ್ಯೆ ನೀಡಲು ಹೊರಟಿದೆ, ಅದರ ಬದಲು ಉದ್ಯೋಗ ಸೃಷ್ಟಿಯ ಬಗ್ಗೆ ಗಮನ ಹರಿಸಿದರೆ ತುಂಬಾ ಒಳ್ಳೆಯದು.

ಈ ಎಲ್ಲಾ ವಿಚಾರ ಕಾರ್ಯರೂಪಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಅಣ್ಣಾ ಹಜಾರೆ, ಹಾರ್ಧಿಕ್‌ ಪಟೇಲರಂತಹ ನಾಯಕರ ಉಗಮಕ್ಕೆ ನಾವು ಕಾಯಬೇಕಿಲ್ಲ. ನಮಗೆ ನಾವೇ ನಾಯಕರಾಗೋಣ.ಐಟಿಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಕನ್ನಡಿಗರೇ ನಿಮ್ಮ ಗೆಳೆಯರಿಗೋಸ್ಕರ ಒಂದು ಸಹಾಯ, ನೀವು ನಿಮ್ಮ ಕಂಪೆನಿಗಳಲ್ಲಿ ಕೆಲಸಕ್ಕೆ ಆಯ್ಕೆ ಮಾಡುವಾಗ ಕನ್ನಡಿಗರಿಗೆ ಆದ್ಯತೆಯನ್ನು ನೀಡಿ. ಕೆಲಸಕ್ಕೋಸ್ಕರ ಕಂಪೆನಿಯಿಂದ, ಕಂಪೆನಿಗೆ ಅಲೆಯುತ್ತಿರುವ ಮಿತ್ರರೇ ದಿನದಲ್ಲಿ ಒಂದು ಐದು ನಿಮಿಷ ಬಿಡುವು ಮಾಡಿಕೊಂಡು “#70% SOFTWAREKANNADIGA” ” ಇದನ್ನು ಬಳಸಿಕೊಂಡು FACEBOOK & TWITTER ನಲ್ಲಿ ಸರ್ಕಾರದ ಕಿವಿ ಮುಟ್ಟುವವರೆಗೆ ಕೆಲಸಕ್ಕಾಗಿ ನೀವು ಎದುರಿಸಿದ ಕಷ್ಟವನ್ನು ಬರೆಯಿರಿ. ಕನ್ನಡಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಪರ ಸಂಘಟನೆಗಳಿಂದ ಬೆಂಬಲ ಸಿಕ್ಕಿದರೆ ಇನ್ನೂ ಒಳ್ಳೆಯದು. ಆದಷ್ಟು ಈ ವಿಚಾರವನ್ನು ಶೇರ್‌ ಮಾಡಿ.

–  ಗಣೇಶ ಬರ್ವೆ ಮಣೂರು

Advertisement

Udayavani is now on Telegram. Click here to join our channel and stay updated with the latest news.

Next