Advertisement

ಕಡಲ ಕಿನಾರೆ ಬಳಿ ಗದ್ದೆ ನಿರ್ಮಿಸಿ ತೆನೆ ಸಿದ್ಧಪಡಿಸಿ ಕದಿರು ಕಟ್ಟಿದ ಪಂಡರಿನಾಥ ಭಜನ ಮಂದಿರ

12:56 PM Oct 18, 2020 | keerthan |

ಕಟಪಾಡಿ: ಕನಕೋಡ ಪಡುಕರೆ ಕಡಲ ಕಿನಾರೆ ಪಕ್ಕದ ಪಂಡರಿನಾಥ ಭಜನ ಮಂದಿರದ ವತಿಯಿಂದ ಸದಸ್ಯರೆಲ್ಲಾ ಸ್ವತಃ ಶ್ರಮವಹಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ನಾಟಿ ಮಾಡುವ ಮೂಲಕ ತೆನೆಯನ್ನು ಸಿದ್ಧ ಪಡಿಸಿ ಕದಿರು ಕಟ್ಟುವ (ತೆನೆ ಕಟ್ಟುವ) ಧಾರ್ಮಿಕ ಕಾರ್ಯಕ್ರಮ ನಡೆದಿದೆ.

Advertisement

ಬೆಳೆದು ನಿಂತ ಪೈರನ್ನು ಭಜನ ಮಂದಿರದ ಆಡಳಿತ ಮಂಡಳಿಯು ಶ್ರದ್ಧಾ ಪೂರ್ವಕವಾಗಿ ಗದ್ದೆಯಿಂದ ತೆಗೆದುಕೊಂಡು ಭಜನ ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಕಾಯಕವನ್ನು ಪೂರೈಸಿದ್ದಾರೆ. ಭಜನ ಮಂದಿರದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೇ ಈ ಬಾರಿ ಕಡಲ ಕಿನಾರೆ ಬಳಿಯಲ್ಲಿ ಸುಮಾರು 200 ಚದರ ಅಡಿ ಪ್ರದೇಶದಲ್ಲಿ ಸಾಕಷ್ಟು ಮಣ್ಣನ್ನು ಹದಗೊಳಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ಸುಮಾರು 70 ದಿನಗಳ ಹಿಂದೆಯೇ ನಾಟಿ ಕೆಲಸವನ್ನು ಪೂರೈಸಲಾಗಿತ್ತು. ಸಮುದ್ರದ ಉಪ್ಪು ನೀರಿನಿಂದ ಬೆಳೆ ಹಾನಿಗೀಡಾಗದಂತೆ ಸಾಕಷ್ಟು ಸುರಕ್ಷತೆ ವಹಿಸಿ ಉತ್ತಮ ಫಸಲು ಭರಿತ ಪೈರನ್ನು ಸಿದ್ಧ ಪಡಿಸಲಾಗಿತ್ತು. ನಾಟಿ ಕೆಲಸಕ್ಕೆ ನುರಿತ ಕೃಷಿ ಕಾರ್ಮಿಕರ ಬಳಕೆಯನ್ನೂ ಮಾಡಲಾಗಿತ್ತು.

ಇದನ್ನೂ ಓದಿ:ಉಡುಪಿಯನ್ನು ಡ್ರಗ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ:ಎಸ್‌ಪಿ

ಸಮುದ್ರ ತೀರ, ಮರಳು ಮತ್ತು ಉಪ್ಪು ನೀರಿನ ಅಂಶ ಹೆಚ್ಚು ಇರುವ ಈ ಸ್ಥಳದಲ್ಲಿ ಭತ್ತದ ಬೆಳೆ ಬೆಳೆಯುವುದೇ ಸಂಶಯವಾಗಿತ್ತು. ಆದರೂ ಪ್ರಯತ್ನಿಸುವ ಇರಾದೆಯಿಂದ ಮಂದಿರದ ಸದಸ್ಯರೆಲ್ಲರೂ ಒಗ್ಗೂಡಿಕೊಂಡು ಮಣ್ಣು ಹದ ಮಾಡಿ ಗದ್ದೆ ನಿರ್ಮಿಸಿ ಭತ್ತದ ಬೆಳೆ ಬೆಳೆಯಲಾಯಿತು. ಧಾರ್ಮಿಕ ಶ್ರದ್ಧೆಯಿಂದ ಗದ್ದೆಯಿಂದ ತೆನೆಯನ್ನು ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಧಾರ್ಮಿಕ ಕೆಲಸಕ್ಕೆ ಈ ಗದ್ದೆಯ ಫಸಲು ಭರಿತ ಪೈರನ್ನು ಬಳಸಲಾಗಿದೆ ಎಂದು ಕೃಷ್ಣ ಜಿ. ಕೋಟ್ಯಾನ್, ಮಾಜಿ ಅಧ್ಯಕ್ಷ, ಪಂಡರಿನಾಥ ಭಜನ ಮಂದಿರ, ಕನಕೋಡ, ಉದ್ಯಾವರ, ಪಡುಕರೆ, ಕುತ್ಪಾಡಿ, ಕನಕೋಡ, ಕಡೆಕಾರು, ಕುದ್ರುಕೆರೆ, ಕಿದಿಯೂರು, ಪಡುಕರೆ, ಮಲ್ಪೆ ಪಡುಕರೆ ಪ್ರದೇಶದ ಸುಮಾರು 60 ಮನೆಗಳಿಗೆ  ಸ್ವತಃ ಸಿದ್ಧ ಪಡಿಸಿದ ಈ ತೆನೆಯನ್ನು ತಮ್ಮ ತೆನೆಕಟ್ಟುವುದಕ್ಕೆ ಬಳಸಿಕೊಂಡಿರುತ್ತಾರೆ ಎಂದು ಭಜನ ಮಂದಿರದ ಆಡಳಿತ ಮಂಡಳಿ ಉದಯವಾಣಿಗೆ ತಿಳಿಸಿದ್ದಾರೆ

Advertisement

Advertisement

Udayavani is now on Telegram. Click here to join our channel and stay updated with the latest news.

Next