ಕನಕಪುರ: ತಾಲೂಕಿನ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಮಿಸಿದ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಣ್ಣ ಪುಟ್ಟ ಲೋಪ ದೋಷಗಳನ್ನು ಹೊರತು ಪಡಿಸಿದರೆ ಬಹುತೇಕವಾಗಿ ಉತ್ತಮವಾಗಿದೆ.
ನಗರಕ್ಕೆ ಸಮೀಪವಿರುವ ಬೂದಿಗುಪ್ಪೆ ತಾಲೂಕಿನ ಅರಕೆರೆ, ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ, ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಕೋನಸಂದ್ರ, ಗುಂಡನ ಗೊಲ್ಲಹಳ್ಳಿ, ಅತ್ತಿಗುಪ್ಪೆ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಾಗಿಲ್ಲ.
ತಾಲೂಕಿನಲ್ಲಿ ಪ್ರಸ್ತುತ ಇರುವ ಶುದ್ಧ ನೀರಿನ ಘಟಕಗಳಲ್ಲಿ ಟೊಯೋಟಾ ಖಾಸಗಿ ಸಂಸ್ಥೆ ಹಾರೋಹಳ್ಳಿಯಲ್ಲಿ ನಿರ್ಮಿಸಿದ ಘಟಕ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾರೋ ಹಳ್ಳಿಯಲ್ಲಿ ನಿರ್ಮಿಸಿರುವ ಘಟಕ, ಹರೋ ಹಳ್ಳಿ ವ್ಯಾಪ್ತಿಯ ಗಾಣಾಳು ದೊಡ್ಡಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಿರುವ ಈ ಮೂರು ಘಟಕಗಳು ಸಣ್ಣ ಪುಟ್ಟ ಲೋಪ ದೋಷಗಳಿಂದ ಸ್ಥಗಿತಗೊಂಡಿದ್ದವು ಈಗಾಗಲೇ ದುರಸ್ತಿ ಗೊಳಿಸಲಾಗಿದೆ.
ಸಮರ್ಪಕ ಸೇವೆ: ತಾಲೂಕಿನಲ್ಲಿ ನಿರ್ಮಾಣವಾಗಿರುವ 132ಕ್ಕೂ ಹೆಚ್ಚು ಶುದ್ಧ ಕುಡಿವ ನೀರು ಘಟಕಗಳಲ್ಲಿ 50 ಘಟಕಗಳ ನಿರ್ವಹಣಾ ಅವಧಿ ಮುಕ್ತಾಯಗೊಂಡಿದೆ. ಉಳಿದಂತೆ 82 ಘಟಕಗಳು ಐದು ವರ್ಷದ ನಿರ್ವಾಹಣೆ ಒಳಪಟ್ಟಿದ್ದು, ಈಗಾಗಲೇ
ತಾಲೂಕಿನಲ್ಲಿ ನಿರ್ಮಾಣವಾಗಿರುವ ಎಲ್ಲ ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಅನುಷ್ಠಾನಗೊಳಿಸಿದ ಸರ್ಕಾರದ ವಿವಿಧ ಇಲಾಖೆಗಳು ಖಾಸಗಿ ಸಂಸ್ಥೆಗಳು ವಹಿಸಿಕೊಂಡಿದ್ದವು. ಅನುಷ್ಠಾನಗೊಳಿಸಿದ ಇಲಾಖೆಗಳೆ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದರಿಂದ ಈವರೆಗೆ ತಾಲೂಕಿನಲ್ಲಿ ಬಹುತೇಕ ಶುದ್ಧ ನೀರಿನ ಘಟಕಗಳು ಚಾಲ್ತಿಯಲ್ಲಿವೆ. ಕೆಲವು ಸಣ್ಣಪುಟ್ಟ ಲೋಪದೋಷಗಳಿಂದ ಸ್ಥಗಿತಗೊಂಡಿರುವ ಘಟಕಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸಮರ್ಪಕವಾಗಿ ನಿರ್ವಹಣೆಯನ್ನು ಮಾಡಿಕೊಂಡು ಬಂದಿದ್ದಾರೆ.
ಉತ್ತಮವಾಗಿ ನಿರ್ವಹಿಸುವುದೇ: ಸರ್ಕಾರ ಇನ್ನೂ ಮುಂದೆ ತಾಲೂಕಿನ ಎಲ್ಲ ಶುದ್ಧ ನೀರಿನ ಘಟಕಗಳ ನಿರ್ವಹಣಾ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲು ಐದು ವರ್ಷಗಳಿಗೆ ಟೆಂಡರ್ ಕರೆದಿದ್ದು, ತುಮಕೂರಿನ ಜಲಶ್ರೀ ಸಂಸ್ಥೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಂದಿದೆ. ಕೆಲವೇ ದಿನಗಳಲ್ಲಿ ತಾಲೂಕಿನ ಎಲ್ಲ ಶುದ್ಧ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಜನಶ್ರೀ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ. ಈವರೆಗೆ ತಾಲೂಕಿನ ಯಾವುದೇ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತರೆ ಶೀಘ್ರವಾಗಿ ದುರಸ್ತಿ ಮಾಡಲಾಗುತ್ತಿತ್ತು. ಇನ್ನು ಮುಂದೆ ನಿರ್ವಹಣೆ ಜವಾಬ್ದಾರಿ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದ್ದು ಎಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.