ಕನಕಗಿರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಅಧಿಕಾರಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿಯೇ ನಡೆದಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ 2ಎ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾತಿ ಪ್ರಕಟವಾಗಿದೆ. ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ 17 ಜನ ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷದಿಂದ 9 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 3 ಜನ ಪಕ್ಷೇತರ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಸದಸ್ಯ ಸಂಖ್ಯೆ 12 ಏರಿಕೆಯಾಗಿದೆ. ಬಿಜೆಪಿಯಿಂದ 5 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಆಕಾಂಕ್ಷಿಗಳಿದ್ದು, ಇದರಿಂದ ಅಸಮಾಧಾನ ಉಂಟಾಗುವ ಸಾಧ್ಯತೆಯನ್ನೂ ತಳಿ ಹಾಕುವಂತಿಲ್ಲ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಲು ಹುಸೇನಸಾಬ್ ಸುಳೇಕಲ್, ಹುಲಗಪ್ಪ ವಾಲೇಕಾರ, ಭಾಗ್ಯಲಕ್ಷ್ಮೀ ಕನಕದಾಸರ ಹೆಸರು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ಇದ್ದು, ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯ ರವಿ ಸಜ್ಜನ್ ಅವರು ಒಬ್ಬರೇ ಇದ್ದಾರೆ. ಇದರಿಂದ ಬಿಜೆಪಿಯಲ್ಲಿ ಅವರು ಹೆಸರೂ ಕೇಳಿ ಬರುತ್ತಿದೆ.
ಉಪಾಧ್ಯಕ್ಷ ಸ್ಥಾನ ಖಚಿತ: ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿರುವ ಪರಿಶಿಷ್ಟ ಜಾತಿ (ಮಹಿಳೆ) ಬಿಜೆಪಿ ಪಕ್ಷದಲ್ಲಿ ಮಾತ್ರ ಇದ್ದು, ಇದರಿಂದ ಬಿಜೆಪಿಯ ಸರಸ್ವತಿ ಸಣ್ಣ ಕನಕಪ್ಪ ಬಹುತೇಕ ಉಪಾಧ್ಯಕ್ಷ ಸ್ಥಾನ ಖಚಿತವಾಗಿದೆ. ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಅವಧಿಯಲ್ಲಿಕನಕಗಿರಿಯು ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೆ ಏರಿತ್ತು. ಆಗಿನ ಶಾಸಕರಾಗಿದ್ದ ಶಿವರಾಜ ತಂಗಡಗಿ ಅವರು ಬೆಂಬಲದಿಂದ 9 ಜನ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಇನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದ ಮೂವರು ಸದಸ್ಯರು ಕೂಡಾ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಬೆಂಬಲ ನೀಡಿದ್ದರು. ಪ.ಪಂ ಮೊದಲ ಅವಧಿಗೆ ಅಧ್ಯಕ್ಷರಾಗಿ ರವಿ ಭಜಂತ್ರಿ ಆಯ್ಕೆಯಾಗಿದ್ದರು.
ಆದರೆ ರವಿ ಭಜಂತ್ರಿ ಅವರಿಗೆ ಸ್ವಪಕ್ಷದವರೇ ಆಡಳಿತ ನಡೆಸಲು ಬಿಡದೇ ಇರುವ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕ ಬಸವರಾಜ ದಢೇಸೂಗೂರು ಆಯ್ಕೆಯಾಗಿದ್ದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಪಂ ಬಿಜೆಪಿ ವಶವಾಗಿತು. ಈಗ ಮೀಸಲಾತಿ ಪ್ರಕಟವಾಗಿದ್ದು, ಈಗಾಗಲೇ ಕಾಂಗ್ರೆಸ್‌ದಲ್ಲಿ 12 ಜನ ಸದಸ್ಯರು ಇದ್ದು, ಸಷ್ಟ ಬಹುಮತವಿದೆ. ಮಾಜಿ ಶಾಸಕ ಶಿವರಾಜ ತಂಗಡಗಿ ಕೈಗೊಳ್ಳುವ ನಿರ್ಧಾರದ ಮೇಲೆ ಅಧ್ಯಕ್ಷ ಸ್ಥಾನ ನಿಂತಿದೆ. ಒಂದು ವೇಳೆ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾದರೂ ಕೂಡಾ ಅಚ್ಚರಿ ಪಡುವಂತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಲಿದ್ದು, ಪಪಂ ಯಾರ ವಶವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನ ಅಭಿಪ್ರಾಯಗಳಿಲ್ಲ. ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಶಿಪಾರಸ್ಸು ಮಾಡಿದವರನ್ನು ಪಪಂ ಅಧ್ಯಕ್ಷರನ್ನಾಗಿ ಮಾಡಲಾಗುವುದು. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ವಶವಾಗುವುದು ಖಚಿತ
. -ರೆಡ್ಡಿ ಶ್ರೀನಿವಾಸ, ಅಧ್ಯಕ್ಷರು, ಕನಕಗಿರಿ ಬ್ಲಾಕ್ ಕಾಂಗ್ರೆಸ್
-ಶರಣಪ್ಪ ಗೋಡಿನಾಳ