Advertisement

ಕನಕಗಿರಿ ಮಾಲೆಕಲ್‌ ವೆಂಕಟರಮಣ 

12:21 PM May 19, 2018 | |

 ಚಿಕ್ಕ ತಿರುಪತಿ ಎಲ್ಲಿದೆ?
 ಅರಸೀಕೆರೆ ಜಂಕ್ಷನ್‌ನಲ್ಲಿ ನಿಂತು ನೀವೇನಾದರೂ ಹೀಗೆ ಕೇಳಿದರೆ. “ತುಂಬಾ ಹತ್ರ ಸಾರ್‌… ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿದೆ ನೋಡಿ’ ಅಂತಾರೆ. ಅದೇ ಕನಕಗಿರಿ ಮಾಲೆಕಲ್‌ ವೆಂಟರಮಣ ದೇವಾಲಯ ಉರುಫ್ ಚಿಕ್ಕತಿರುಪತಿ. ಇದಕ್ಕೆ ಏಕೆ ಚಿಕ್ಕತಿರುಪತಿ ಅಂತ ಹೆಸರು ಬಂತು? ಎಂದು ತಿಳಿಯಲು ಹೊರಟರೆ ಸ್ವಾರಸ್ಯಕರ ಇತಿಹಾಸವೊಂದು ತೆರೆದುಕೊಳ್ಳುತ್ತದೆ.

Advertisement

ಇತಿಹಾಸ ಹೀಗಿದೆ
  ಸುಮಾರು 800 ವರ್ಷಗಳ ಹಿಂದೆ ವಸಿಷ್ಠ ಮುನಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರಂತೆ.  ಆಗ ಒಂದು ದಿನ ಶುದ್ಧ ಆಷಾಢ ದ್ವಾದಶಿಯಂದು ವೆಂಕಟೇಶ್ವರಸ್ವಾಮಿ ಪ್ರತ್ಯಕ್ಷನಾಗಿ ಮುನಿಗಳನ್ನು ಆಶೀರ್ವದಿಸಿದರಂತೆ.   ಆಗ ವಸಿಷ್ಠರು ಇಲ್ಲಿಯೇ ಒಂದು ಆಶ್ರಮ ನಿರ್ಮಿಸಿ, ಭೂಗರ್ಭದಲ್ಲಿ  ದೊರೆತ ಶ್ರೀ ವೆಂಕಟರಮಣಸ್ವಾಮಿಯ ವಿಗ್ರಹವನ್ನು ಪೂಜಿಸುತ್ತಿದ್ದರಂತೆ.  ಕೆಲದಿನಗಳ ನಂತರ ಅವರು ದೇಶಪರ್ಯಟನೆಗೆ ಹೊರಟರು.  ಹೀಗಾಗಿ ವಿಗ್ರಹವು ಕಾಲಗರ್ಭದಲ್ಲಿ ಹುದುಗಿ ಹೋಯಿತಂತೆ. ಒಂದಷ್ಟು ದಶಕಗಳ ನಂತರ  ಈ ಪ್ರದೇಶವು ಚಿತ್ರದುರ್ಗದ ಪಾಳೆಯಗಾರರ  ಸುಪರ್ದಿಗೆ ಬಂದಿತು. ವಿಶೇಷ ಎಂದರೆ  ದುರ್ಗದ ಪಾಳಯಗಾರರಾಗಿದ್ದ ತಿಮ್ಮಪ್ಪ ನಾಯಕರು ತಿರುಪತಿ  ತಿಮ್ಮಪ್ಪನ ಭಕ್ತರಾಗಿದ್ದು, ಆಗಾಗ ತಿಮ್ಮಪ್ಪನ ದರುಶನಕ್ಕೆ ತಿರುಪತಿಗೆ ಹೋಗುತ್ತಿದ್ದರು. 

ಕನಸು ನನಸು
ಒಮ್ಮೆ ಅವರ ಕನಸಿನಲ್ಲಿ ಕಂಡ ತಿಮ್ಮಪ್ಪ-“ನೀನು ಇನ್ನುಮೇಲೆ ತಿರುಪತಿಗೆ ಬರುವುದು ಬೇಡ. ನಿನಗೋಸ್ಕರ ನಾನೇ ನೀನಿರುವಲ್ಲಿಗೆ  ಬಂದು ದರುಶನ ನೀಡುತ್ತೇನೆ’ ಎಂದು ಹೇಳಿದನಂತೆ.   ಒಮ್ಮೆ ಅವರ ತಾವು ಕಂಡ ಕನಸು ಆಕಸ್ಮಿಕವೋ, ಅನಿರೀಕ್ಷಿತವೋ ಎಂಬ ಗೊಂದಲ್ಲಿದ್ದ  ತಿಮ್ಮಪ್ಪನಾಯ್ಕ ತಿಮ್ಮಪ್ಪನನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿಕೊಂಡಾಗ, ಮತ್ತೆ  ಕನಸಿನಲ್ಲಿ  ಕಂಡ ತಿಮ್ಮಪ್ಪ  ”ನಿಮ್ಮ ಊರ ಬಳಿಯ ಬೆಟ್ಟದಲ್ಲಿ ಎಲ್ಲಿ ನಿನಗೆ ತುಳಸಿಮಾಲೆ  ದೊರೆಯುತ್ತದೆಯೋ   ಅದನ್ನು  ಅನುಸರಿಸಿಕೊಂಡು  ಹೋಗು. ಅದು ನಾನಿರುವ ದಾರಿ ತೋರಿಸುತ್ತದೆ’ ಎಂದು ಹೇಳಿದನಂತೆ. ಆಗ ತಿಮ್ಮಪ್ಪನಾಯ್ಕ  ತನ್ನ ಜೊತೆಯವರೊಡಗೂಡಿ  ಬೆಟ್ಟದ  ತಪ್ಪಲಿಗೆ ಹೋದರು. ಅಲ್ಲಿ ಒಂದು ತುಳಸಿಮಾಲೆ  ಕಾಣಿಸುತ್ತಿತ್ತಂತೆ.   ಅದರ ಒಂದೊಂದೆ ಮಣಿಗಳನ್ನು ಅನುಸರಿಸಿಕೊಂಡು  ಹೋದಾಗ  ಬೆಟ್ಟದ ತುತ್ತ ತುದಿಯಲ್ಲಿ  ವೆಂಕಟೇಶ್ವರನ ವಿಗ್ರಹ ದೊರೆಯಿತಂತೆ.  ಆಗ ತಿಮ್ಮಪ್ಪನಾಯ್ಕರು ಭಕ್ತಿಪೂರ್ವಕವಾಗಿ  ಈ ವಿಗ್ರಹವನ್ನು ಅದು ದೊರೆತ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಿದರಂತೆ. ಇತಿಹಾಸ, ಇಷ್ಟು ಕತೆಯನ್ನು ಹೇಳುತ್ತದೆ. 

ದರ್ಶನ ಸುಲಭವಲ್ಲ
 ಇನ್ನು, ಈ ವೆಂಕಟೇಶ್ವರನ ದರ್ಶನ ಅಷ್ಟು ಸುಲಭಸಾಧ್ಯವಾದ ವಿಚಾರವಲ್ಲ. ಏಕೆಂದರೆ, ಇಲ್ಲಿಗೆ  ಬರುವ ಭಕ್ತಾದಿಗಳು  1,500 ಮೆಟ್ಟಿಲುಗಳನ್ನು ಕ್ರಮಿಸಬೇಕು. ಬೆಟ್ಟದ ಮೇಲಿರುವ ವೆಂಕಟರಮಣನ ದರ್ಶನಕ್ಕೆ ಹೋಗಲು ಸಾಧ್ಯವಾಗಿದ್ದರೆ ಬೆಟ್ಟದ ತಳ ಭಾಗದಲ್ಲಿರುವ ಇನ್ನೊಂದು ವೆಂಕಟರಮಣಸ್ವಾಮಿಯ  ದೇಗುಲಕ್ಕೆ  ಭೇಟಿ ನೀಡಬಹುದು.   ಈ ದೇವಾಲಯದಲ್ಲಿ ವೆಂಕಟರಮಣಸ್ವಾಮಿಯ ವಿಗ್ರಹ ನಿದ್ರಾಭಂಗಿಯಲ್ಲಿದೆ ಅನ್ನೋದು ವಿಶೇಷ.  

Advertisement

ದೇವಸ್ಥಾನದ ಮುಂದೆ ಪುಷ್ಕರಣಿ ಇದೆ. ಇದನ್ನು ತಿಮ್ಮಪ್ಪನಾಯ್ಕನ ಕಾಲಾವಧಿಯಲ್ಲಿ ರಾಣಿಯರು  ನಿರ್ಮಿಸಿ, ದೇವಸ್ಥಾನಕ್ಕೆ ಅರ್ಪಿಸಿದರು ಎನ್ನುತ್ತದೆ ಇತಿಹಾಸ.   ಈ  ಪುಷ್ಕರಣಿಯಲ್ಲಿ ಮಿಂದು,  ದೇವರ ದರ್ಶನ ಪಡೆದರೆ ನಾವು ಮಾಡಿದ ಪಾಪಗಳು ಪರಿಹಾರವಾಗುತ್ತದೆ. ಕಷ್ಟಗಳು ಕರಗಿಹೋಗುತ್ತದೆ ಎಂಬುದು ಇಲ್ಲಿಗೆ  ಬರುವ  ಭಕ್ತಾದಿಗಳ ನಂಬಿಕೆ.  ಈ ದೇವಸ್ಥಾನದಲ್ಲಿ  ವೆಂಕಟರಮಣಸ್ವಾಮಿಯ ಜೊತೆಗೆ ಸೂರ್ಯನಾರಾಯಣ, ಲಕ್ಷ್ಮೀ  ವಿಗ್ರಹಗಳನ್ನೂ  ಪ್ರತಿಷ್ಠಾಪಿಸಲಾಗಿದೆ. 

ಬೆಂಗಳೂರಿನಿಂದ  ದೇವಾಲಯಕ್ಕೆ 194 ಕಿ.ಮೀ. ದೂರ ಅರಸೀಕೆರೆ ತನಕ ಬಸ್‌ ಹಾಗೂ ರೈಲು ಸೌಕರ್ಯವಿದೆ. ರೈಲಿನಲ್ಲಿ ಬಂದರೆ ಅರಸೀಕೆರೆ ಜಂಕ್ಷನ್‌ನಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿ ಕನಕಗಿರಿ ಮಾಲೆಕಲ್‌ ವೆಂಕಟರಮಣ ದೇವಸ್ಥಾನವಿದೆ. 

ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next