ಕನಕಗಿರಿ: ಕನಕಗಿರಿ, ಹುಲಿಹೈದರ್ ಹೋಬಳಿ ರೈತರ ಚಿತ್ತ ವಾಣಿಜ್ಯ ಬೆಳೆಯತ್ತ ಕೇಂದ್ರಿಕೃತವಾಗಿದ್ದು, ಇಲ್ಲಿನ ರೈತರು ದ್ರಾಕ್ಷಿ ಬೆಳೆಯಲು ಮಂದಾಗಿದ್ದಾರೆ. ಈ ಭಾಗದಲ್ಲಿ ಕಡಲೆ, ಮೆಕ್ಕೆಜೋಳ, ಸಜ್ಜೆ, ನವಣಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದರು. ಆದರೆ ಈ ಬೆಳೆಯಲ್ಲಿ ಅ ಧಿಕ ಶ್ರಮಪಟ್ಟರೂ ಹೆಚ್ಚು ಲಾಭ ದೊರೆಯದೇ ಇರುವುದರಿಂದ ಬೇಸತ್ತ ರೈತರಿಗೆ ಪರ್ಯಾಯವಾಗಿ ಕೈಗೊಂಡು ಮಾರ್ಗವೇ ದ್ರಾಕ್ಷಿ ಬೆಳೆ ಬೆಳೆಯುವುದು. ಬರಗಾಲದಲ್ಲಿ ಅಂತರ್ಜಲ ಕುಸಿತಗೊಂಡಿದ್ದರೂ ರೈತರು ಕಂಗಾಲಾಗದೇ ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಹನಿ ನೀರಾವರಿ ಮೂಲಕ ದ್ರಾಕ್ಷಿ ಬೆಳೆಯುತ್ತಿದ್ದಾರೆ.
ಪ್ರೇರಣೆ: ಕನಕಗಿರಿ, ಹುಲಿಹೈದರ್ ಹೋಬಳಿಯ ರೈತರು ವಿಜಯಪುರ ರೈತರಿಂದ ಪ್ರೇರಣೆಗೊಂಡು ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. ಇತ್ತೀಚೆಗೆ ಸರ್ಕಾರವೂ ಕೂಡ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ದ್ರಾಕ್ಷಿ ಬೆಳೆಯಲು ರೈತರಿಗೆ ಸಹಾಯಧನ ನೀಡುತ್ತಿತ್ತು, ಆ ಸಹಾಯಧನ ಪಡೆದು ಹೆಚ್ಚಿನ ರೈತರು ದ್ರಾಕ್ಷಿ ಬೆಳೆಯಲು ಮಂದಾಗಿದ್ದಾರೆ. ಕನಕಗಿರಿ ಮತ್ತು ಹುಲಿಹೈದರ್ ಹೋಬಳಿಗಳಲ್ಲಿ ಸುಮಾರು 8 ವರ್ಷಗಳಿಂದ 300 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಲಾಗುತ್ತಿದೆ. ಇಲ್ಲಿ ದ್ರಾಕ್ಷಿ ಬೆಳೆಯುವುದನ್ನು ಕಂಡ ಕೆಲ ರೈತರು ಹೊಸದಾಗಿ ಪ್ರಾರಂಭಿಸಿದ್ದಾರೆ. ಒಟ್ಟಾರೆ ಲಾಭದಾಯಕವಾದ ಕಾರಣ ದ್ರಾಕ್ಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ದ್ರಾಕ್ಷಿ ಹಣ್ಣುಗಳನ್ನು ಒಣಗಿಸಲು ಸಂಸ್ಕರಣ ಘಟಕದ ಅವಶ್ಯಕತೆಯಿದೆ. ಕೂಡಲೇ ಶಾಸಕರು ಮತ್ತು ಅಧಿಕಾರಿಗಳು ಈ ಭಾಗದಲ್ಲಿ ದ್ರಾಕ್ಷಿ ಸಂಸ್ಕರಣ ಘಟಕ ಸ್ಥಾಪನೆ ಮಾಡಬೇಕೆಂಬುವುದು ಈ ಭಾಗದ ದ್ರಾಕ್ಷಿ ಬೆಳೆಗಾರರ ಬೇಡಿಕೆಯಾಗಿದೆ.
ದ್ರಾಕ್ಷಿ ತಳಿಗಳು: ಕೃಷಿಯಲ್ಲಿ ಹೊಸ ಆವಿಷ್ಕಾರಗಳಾಗುತ್ತಿದ್ದು, ಅದರಂತೆ ಈ ಭಾಗದ ರೈತರು ತಾಮಸ್‌ನ, ಮಾಣಿಕಚಮನ್, ಸೂಪರ್ ಸೋನಾಕ್ ಸೇರಿದಂತೆ ವಿವಿಧ ತಳಿಯ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಬೆಳೆಯುವ ವಿಧಾನ: ಕನಕಗಿರಿ ಮತ್ತು ಹುಲಿಹೈದರ್ ಹೋಬಳಿಯಲ್ಲಿ ಇರುವ ಭೂಮಿಯು ದ್ರಾಕ್ಷಿ ಬೆಳೆ ಬೆಳೆಯಲು ಸೂಕ್ತವಾಗಿದ್ದು, ಹನಿ ನೀರಾವರಿ ಪದ್ಧತಿಯಡಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇನ್ನೂ ದ್ರಾಕ್ಷಿ ಸಸಿಗಳನ್ನು ಸಾಲಿನಿಂದ ಸಾಲಿಗೆ 12 ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ನೆಡಬೇಕು. ಇದರಿಂದ ಎಕರೆಗೆ 750 ಸಸಿಗಳನ್ನು ನಾಟಿ ಮಾಡುತ್ತಾರೆ. ಪ್ರತಿ ಬಳ್ಳಿಗೆ ಪ್ರತಿದಿನ 16 ಲೀಟರ್ ನೀರು ಬೇಕಾಗುತ್ತದೆ. ಸಸಿ ನೆಟ್ಟು 26 ತಿಂಗಳಿಗೆ ಫಸಲು ರೈತರು ಕೈ ಸೇರುತ್ತದೆ. ಪ್ರತಿ ಒಂದು ಎಕರೆಗೆ 13-16 ಟನ್ ದ್ರಾಕ್ಷಿ ದೊರೆಯುತ್ತದೆ. ಪ್ರತಿವರ್ಷ ಕೆಜಿಗೆ ಕನಿಷ್ಟ 35-50 ರೂ. ಮಾರುಕಟ್ಟೆ ದರ ಇರುತ್ತದೆ. ಇದರಿಂದ 6 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ. ದ್ರಾಕ್ಷಿ ಬೆಳೆ ಬೆಳೆಯಲು ವಾರ್ಷಿಕ ಖರ್ಚು 1 ಲಕ್ಷ ರೂ. ಬರುತ್ತದೆ. ದ್ರಾಕ್ಷಿ ಬಳ್ಳಿಯನ್ನು ಜೋಪಾನ ಮಾಡಿದರೇ 20 ವರ್ಷದವರಿಗೆ ಬಾಳಿಕೆ ಬರುತ್ತವೆ.
-ಶರಣಪ್ಪ ಗೋಡಿನಾಳ