ಬೆಂಗಳೂರು: ದಾಸಶ್ರೇಷ್ಠ ಕನಕದಾಸರನ್ನು ವಿಭಿನ್ನ ನೆಲೆಯಲ್ಲಿ ಅಧ್ಯಯನ ಮಾಡುವ ಹಾಗೂ ಅವರ ಕಾವ್ಯದರ್ಶನ, ಜೀವನ ದರ್ಶನವನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಮಕ್ಕಳಿಗೆಂದೇ ವಿಶೇಷವಾಗಿ ಕನಕದಾಸರ ಸಚಿತ್ರ ಕಥಾ ಮಾಲಿಕೆ ಸಿದ್ಧಪಡಿಸಿದ್ದು, ನ.9ರಂದು ಬಿಡುಗಡೆಯಾಗಲಿದೆ.
ಕನಕದಾಸರ ಜೀವನ, ಅವರ ನಾಲ್ಕು ಕಾವ್ಯಗಳನ್ನು ಒಳಗೊಂಡ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಹಾಗೂ ಕೀರ್ತನೆಗಳನ್ನು ಚಿತ್ರಗಳೊಂದಿಗೆ ಕಥಾನಕದ ರೂಪದಲ್ಲಿ ಮಾಲಿಕೆ ರೂಪುಗೊಂಡಿದೆ.
ಜೀವನ ಸಾಹಿತ್ಯ ಹಾಗೂ ಐದು ಗ್ರಂಥಗಳನ್ನು ಪರಿಚಯಿಸುವ ನೆಲೆಯಲ್ಲಿ ಸಂಭಾಷಣಾ ರೂಪದಲ್ಲಿ ಒಬ್ಬೊಬ್ಬ ವಿದ್ವಾಂಸರಿಂದ ಸಾಹಿತ್ಯ ಸಿದ್ಧಪಡಿಸಲಾಗಿದೆ. ಈ ಸಂಭಾಷಣಾ ಸಾಹಿತ್ಯಕ್ಕೆ ಹಿರಿಯ ಚಿತ್ರಕಲಾವಿದರಾದ ಬಿ.ಜಿ.ಗುಜ್ಜಾರಪ್ಪ ಮತ್ತು ತಂಡ ಚಿತ್ರಗಳನ್ನು ರೂಪಿಸಿದೆ ಎಂದು ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿತ್ರ ಕಥಾಮಾಲೆಯ ಆರು ಗ್ರಂಥಗಳನ್ನು ಒಬ್ಬೊಬ್ಬ ವಿದ್ಯಾರ್ಥಿ ಬಿಡುಗಡೆ ಮಾಡಿ ತಾನು ಗ್ರಹಿಸಿದ್ದನ್ನು 10 ನಿಮಿಷಗಳಲ್ಲಿ ವಿವರಿಸಲಿದ್ದಾರೆ. ಹೀಗೆ ಒಟ್ಟು ಆರು ಕೃತಿಗಳನ್ನು ಒಬ್ಬೊಬ್ಬ ವಿದ್ಯಾರ್ಥಿ ಬಿಡುಗಡೆಗೊಳಿಸಿದ ಬಳಿಕ ಇತರೆ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ನ.9ರಂದು ಬೆಳಗ್ಗೆ 10.30ಕ್ಕೆ ನಗರದ ನಯನ ಸಭಾಂಗಣದಲ್ಲಿ “ಕನಕದಾಸರ ಸಚಿತ್ರ ಕಥಾಮಾಲಿಕೆ’ ಬಿಡುಗಡೆಯಾಗಲಿದೆ. ಹಿರಿಯ ಲೇಖಕ ಬೊಳುವಾರ ಮಹಮದ್ ಕುಂಞ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಮಕ್ಕಳಿಂದ ವಿಶೇಷ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ, ಬಿಬಿಎಂಪಿ ಪ್ರೌಢಶಾಲೆ ಹಾಗೂ ಖಾಸಗಿ ಪ್ರೌಢಶಾಲೆ ಒಳಗೊಂಂತೆ 12 ಶಾಲೆಗಳಿಂದ 145 ವಿದ್ಯಾರ್ಥೀಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.