Advertisement

ಏಕಕಾಲಕ್ಕೆ 25 ಕೃತಿಗಳಲ್ಲಿ ಕನಕ ಸಾಹಿತ್ಯ ದರ್ಶನ!

11:03 AM Jan 19, 2018 | |

ಹಾವೇರಿ: ಕನಕದಾಸರ ಜೀವನ, ಕೀರ್ತನೆ, ಅವರ ತತ್ವ ಸಂದೇಶಗಳ ಸಾಹಿತ್ಯವನ್ನೊಳಗೊಂಡ 25 ಪುಸ್ತಕಗಳನ್ನು ಪ್ರಕಟಿಸಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಅವುಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯ ಕನಕ ಕಲಾಭವನದಲ್ಲಿ ಜ.20ರಿಂದ 3 ದಿನಗಳ ಕಾಲ ನಡೆಯುವ “ಕನಕ ನಡೆ-ನುಡಿ’ ಕನಕ- ಕನ್ನಡ ಸಮುದಾಯಗಳ ಸಾಂಸ್ಕೃತಿಕ ಮೇಳದಲ್ಲಿ ಈ ಹೊತ್ತಗೆಗಳು ಬಿಡುಗಡೆಗೊಳ್ಳಲಿದ್ದು 25 ಪುಸ್ತಕಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

ಕನಕದಾಸರ ಜನ್ಮಭೂಮಿ ಬಾಡ ಗ್ರಾಮ, ಕರ್ಮಭೂಮಿ ಕಾಗಿನೆಲೆ ಗ್ರಾಮದಲ್ಲಿ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸುತ್ತಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕನಕದಾಸರ ಸಾಹಿತ್ಯ ಸಂಗ್ರಹ ಹಾಗೂ ಪ್ರಚಾರದಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ಕನಕ ಸಾಹಿತ್ಯಕ್ಕೆ ಸಂಬಂಧಿಸಿದ 25 ಪುಸ್ತಕಗಳನ್ನು ಏಕಕಾಲಕ್ಕೆ ಪ್ರಕಟಿಸಿ ಸಾಬೀತುಪಡಿಸಿದೆ.

ಸಾಹಿತ್ಯ ಶ್ರೀಮಂತಿಕೆ ಪರಿಚಯ: ಕನಕರ ಜೀವನ, ಸಾಹಿತ್ಯದ ಬಗ್ಗೆ ರಾಜ್ಯದ ವಿವಿಧ ಭಾಗಗಳ ವಿದ್ವಾಂಸರು,
ಅನುಭವಿ ಲೇಖಕರು ಬರಹಗಳನ್ನು ಬರೆದಿದ್ದು ಎಲ್ಲ ಪುಸ್ತಕಗಳು, ಕನಕ ಸಾಹಿತ್ಯ ಶ್ರೀಮಂತಿಕೆಯನ್ನು ಮುಂದಿನ
ತಲೆಮಾರಿಗೆ ಪರಿಚಯಿಸಲು ಸಜ್ಜಾಗಿವೆ. ಕನಕರ ಸಾಹಿತ್ಯ ಕೇವಲ ಕನ್ನಡಕ್ಕೆ ಮಾತ್ರ ಸೀಮಿತಗೊಳ್ಳದೆ ಇಂಗ್ಲಿಷ್‌, ಹಿಂದಿ, ಮರಾಠಿಗೆ ಅನುವಾದಿತ ಕೃತಿಗಳು ಸಹ ಇದರಲ್ಲಿರುವುದು ವಿಶೇಷ. ಈ ಪುಸ್ತಕಗಳಲ್ಲಿ ಕನಕ ಸಾಹಿತ್ಯದ ವಿಮರ್ಶೆ, ಸಂಶೋಧನೆ, ತೌಲನಿಕತೆ ಹೀಗೆ ಹತ್ತು ಹಲವು ವಿಧಗಳಿದ್ದು ಎಲ್ಲವೂ ವಿದ್ವಾಂಸರಿಂದ ಹಿಡಿದು ಸಾಮಾನ್ಯ ಓದುಗನವರೆಗೆ ಎಲ್ಲರಿಗೂ ಕನಕರ ಸಾಹಿತ್ಯದ ಗಟ್ಟಿತನ ಪ್ರದರ್ಶಿಸುವಂತಿವೆ.

ಪ್ರಬುದ್ಧ ಬರಹಗಳು: ಶಿವಮೊಗ್ಗದ ಎಂ.ಆರ್‌. ಸತ್ಯನಾರಾಯಣ “ವರ ಮೋಹನತರಂಗಿಣಿ’ (ವ್ಯಾಖ್ಯಾನ
ಮತ್ತು ವಿಶ್ಲೇಷಣೆ)ಸಂಪುಟ-1 ಹಾಗೂ 2 ಹೀಗೆ ಎರಡು ಪುಸ್ತಕ ಬರೆದಿದ್ದಾರೆ. ಬೆಂಗಳೂರಿನ ಡಾ.ಲಕ್ಷ್ಮೀಕಾಂತ ಪಾಟೀಲ “ಕನಕದಾಸರ ಅಪ್ರಕಟಿತ ಕೃತಿ ರತ್ನಗಳು’ (ಹಸ್ತಪ್ರತಿ ಸಮೇತ, ಸಂಪೂರ್ಣ ಸಂಶೋಧನಾ ಸಂಪುಟ) ಬರೆದಿದ್ದಾರೆ. ಗದಗಿನ ಟಿ.ವಿ. ಮಾಗಳದ “ದಾಸ ಶ್ರೇಷ್ಠ ಸಂತಶ್ರೀ ಕನಕದಾಸರು’ (ಇಂಗ್ಲಿಷ್‌ ಗೆ ಅನುವಾದ) ಪುಸ್ತಕ ಬರೆದಿದ್ದಾರೆ.

ಗದಗಿನ ಡಾ.ಸಿದ್ದಣ್ಣ ಎಫ್‌. ಜಕಬಾಳ “ಕನಕದಾಸರ ಮುಂಡಿಗೆಗಳು ಅರ್ಥ ವಿವೇಚನೆ’ ಪುಸ್ತಕ ಬರೆದಿದ್ದಾರೆ.
ಬೆಳಗಾವಿಯ ಡಾ.ರಾಮಕೃಷ್ಣ ಮರಾಠೆ “ಕನಕದಾಸರು ಮತ್ತು ಮಹಾರಾಷ್ಟ್ರದ ಸಂತರು’, ಶಿರಾದ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಕನಕದಾಸ- ಅಂಬಿಗರ ಚೌಡಯ್ಯ (ಸಮಾಜೋ ಸಾಂಸ್ಕೃತಿಕ ಚಿಂತನೆ), ಬೆಂಗಳೂರಿನ ಡಾ.ಕೆ. ಗೋಕುಲನಾಥ್‌ “ಲೋಕಪಾವನ ನಳಚರಿತ್ರೆ’, ಕಾಗಿನೆಲೆಯ ಹೊರಟೇಟೆ ಮಲ್ಲೇಶಪ್ಪ “ದಾಸಶ್ರೇಷ್ಠ ಸಂತಶ್ರೀ ಕನಕದಾಸರು’ (ಜೀವನ ಮತ್ತು ಸಾಹಿತ್ಯ) ಪುಸ್ತಕ ಬರೆದಿದ್ದಾರೆ.

Advertisement

ಬೆಂಗಳೂರಿನ ಡಾ.ಜಿ. ಕೃಷ್ಣಪ್ಪ “ಸಂತಕವಿ ಕನಕದಾಸರ ನಳದಮಯಂತಿ ಪ್ರೇಮಕಥೆ’, ಮುಂಬೈನ ಡಾ.ಮೇಧಾ
ಕುಲಕರ್ಣಿ “ಕನಕದಾಸರು ಹಾಗೂ ಏಕನಾಥ’ (ತೌಲನಿಕ ಅಧ್ಯಯನ), ಧಾರವಾಡದ ಡಾ.ನದಾಫ್‌ ಎಚ್‌.ಎಚ್‌. “ಕನಕದಾಸರ ಕೃತಿಗಳು ಜಾನಪದೀಯ ಅಧ್ಯಯನ’, ಬೆಂಗಳೂರಿನ ಡಾ.ಶಿವಪ್ರಸಾದ್‌ ವೈ.ಎಸ್‌. “ಕನಕ ಪುರಂದರ’ (ಇಹ- ಪರಗಳ ಮುಖಾಮುಖೀ), ಬಳ್ಳಾರಿಯ ಡಾ.ಲಿಂಗದಹಳ್ಳಿ ಹಾಲಪ್ಪ “ಕನಕದಾಸರು ಮತ್ತು ಸರ್ವಜ್ಞ’ (ತೌಲನಿಕ ಅಧ್ಯಯನ), ಬೆಂಗಳೂರಿನ ಡಾ.ಸುರೇಶ ನಾಗಲಮಡಿಕೆ “ಮುತ್ತು ಬಂದಿದೆ ಕೇರಿಗೆ’ (ಕನಕದಾಸರು: ಸಾಂಸ್ಕೃತಿಕ ಅಧ್ಯಯನ) ಪುಸ್ತಕ ಬರೆದಿದ್ದಾರೆ.

ಬೆಳಗಾವಿ ಡಾ.ಟಿ.ಆರ್‌. ಜೋಡಟ್ಟಿ “ದಾಸಶ್ರೇಷ್ಠ ಸಂತಶ್ರೀ ಕನಕದಾಸರು’ (ಹಿಂದಿಗೆ ಅನುವಾದ), ಬೆಡಕಿಹಾಳದ
ಡಾ.ಗೋಪಾಲ ಮಹಾಮುನಿ “ದಾಸಶ್ರೇಷ್ಠ ಸಂತಶ್ರೀ ಕನಕದಾಸರು’ (ಮರಾಠಿಗೆ ಅನುವಾದ), ಶಿವಮೊಗ್ಗದ
ಡಾ.ಶ್ರೀರಾಮ ಅಚನೂರ “ಕನಕದಾಸರ ಚಿಂತನೆಯ ನೆಲೆ ಮತ್ತು ದರ್ಶನ’, ಧಾರವಾಡದ ಡಾ.ಟಿ.ಎಂ. ಭಾಸ್ಕರ
“ಕನಕದಾಸರು ಮತ್ತು ಬುದ್ಧ’, ಮುಳಥಳ್ಳಿಯ ಡಾ.ಪ್ರಕಾಶ ಅಮರದ “ಕನಕದಾಸರ: ಸಾಹಿತ್ಯದಲ್ಲಿ ಮಹಿಳಾ
ನೆಲೆಗಳು’, ಬೆಂಗಳೂರಿನ ಡಾ.ಎನ್‌. ದೇವರಾಜ “ಕನಕದಾಸರು ಮತ್ತು ಸೂರದಾಸರ ತಾತ್ವಿಕ ನೆಲೆಗಳು’,
ಕಾಗಿನೆಲೆಯ ಡಾ.ಜಗನ್ನಾಥ್‌ ಗೇನಣ್ಣವರ “ಸಂತಶ್ರೀ ಕನಕದಾಸರಜೀವನ ಸಂದೇಶ’, “ಆತ್ಮ ಯಾವ ಕುಲ’, “ಕನಕ ಕೀರ್ತನ ಕೌಸ್ತುಭ’ ಹಾಗೂ “ತಲ್ಲಣಿಸದಿರು’ ಎಂಬ ನಾಲ್ಕು ಪುಸ್ತಕ ಬರೆದಿದ್ದಾರೆ. 

ಕನಕದಾಸರ ಸಾಹಿತ್ಯ ಒಂದಿಷ್ಟು ಕ್ಲಿಷ್ಟಕರ ಪದಗಳನ್ನು ಹೊಂದಿದ್ದು, ಕಬ್ಬಿಣದ ಕಡಲೆಯಂತೆ ಭಾಸವಾಗುತ್ತದೆ. ಇಂತಹ ಸಾಹಿತ್ಯವನ್ನು ಸಾಮಾನ್ಯ ಓದುಗನಿಗೂ ಅರ್ಥವಾಗಿಸುವ ರೀತಿಯಲ್ಲಿ ವಿಶ್ಲೇಷಿಸಿ, ವಿಮರ್ಶಿಸಿ, ಅನುವಾದಿಸಿ, ಅವಲೋಕಿಸುವ ಪ್ರಯತ್ನ ಪುಸ್ತಕದ ಮೂಲಕ ಮಾಡಲಾಗಿದೆ. ರಾಜ್ಯದ ವಿವಿಧ ಭಾಗದ ಲೇಖಕರಿಂದ ಬರೆಸಿ, ಏಕಕಾಲಕ್ಕೆ 25 ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಜ.20ರಂದು ಮುಖ್ಯಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ.  
 ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

ಕನಕರು ಧಾರ್ಮಿಕ, ವೈಚಾರಿಕ, ಸಾಮಾಜಿಕ ನ್ಯಾಯ ಹೀಗೆ ಹಲವು ರೀತಿಯಲ್ಲಿ ವಿಶ್ಲೇಷಿಸಬಹುದು. ಪ್ರತಿಬಾರಿ ಅವರ ಸಾಹಿತ್ಯ ಓದಿದಾಗಲೂ ಮಗದೊಂದು ಹೊಸತು ವಿಚಾರ ಹೊಳೆಯುತ್ತದೆ. ಹೀಗಿರುವಾಗ ವಿದ್ವಾಂಸರು, ವಿಮರ್ಶಕರು, ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿರಿಸಿಕೊಂಡು ಪುಸ್ತಕಗಳನ್ನು ಬರೆಯಲಾಗಿದ್ದು, ಕನಕರ ಸಾಹಿತ್ಯ ಜನರ ಮನೆ, ಮನಕ್ಕೆ ಮುಟ್ಟಲಿ ಎಂಬುದು ನಮ್ಮ ಆಶಯ. 
ಜಗನ್ನಾಥ ಗೇನಣ್ಣನವರ, ಲೇಖಕರು, ಹಾವೇರಿ

 ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next