Advertisement
ವಿಜಯನಗರವಿಜಯನಗರ ಸಾಮಾನ್ಯ ಕ್ಷೇತ್ರದ ಚುನಾವಣ ಕಣ ಭರ್ಜರಿ ರಂಗು ಪಡೆದಿದ್ದು, ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ನೇರ ಫೈಟ್ ಏರ್ಪಟ್ಟಿದೆ. ಹಾಲಿ ಶಾಸಕ ಆನಂದ್‌ಸಿಂಗ್ ಕ್ಷೇತ್ರಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಯುವ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮತ್ತೂಮ್ಮೆ ತೊಡೆ ತಟ್ಟಿದ್ದಾರೆ. ಬಿಜೆಪಿಯ ಸಿದ್ಧಾರ್ಥ್ ಸಿಂಗ್‌ಗೆ ಅನುಭವದ ಕೊರತೆಯೊಂದಿಗೆ ಅಸಮಾಧಾನಗೊಂಡಿರುವ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಪûಾಂತರವಾಗಿರುವುದು ಒಂದಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಆನಂದ್ ಸಿಂಗ್ ವಿರುದ್ಧ 2008, 2018ರಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪಗೆ ಈ ಬಾರಿ ಅನುಕಂಪದ ಅಲೆಯ ಲಾಭ ಸಿಕ್ಕಿದರೂ ಆಶ್ಚರ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್ ರಜಪೂತ ಸಮುದಾಯಕ್ಕೆ ಸೇರಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗವಿಯಪ್ಪ ಈಡಿಗ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಮುದಾಯದ ಮತಗಳು ಹೆಚ್ಚಾಗಿಲ್ಲ. ಎಸ್‌ಸಿ, ಎಸ್‌ಟಿ, ಲಿಂಗಾಯತ, ಕುರುಬ, ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಸಚಿವ ಆನಂದ್ ಸಿಂಗ್ ಹಾಲಿ ಶಾಸಕ. ಉಭಯ ಪಕ್ಷಗಳ ರಾಜ್ಯ ನಾಯಕರು ಸಕ್ಕರೆ ಕಾರ್ಖಾನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
ಪಾಳೆಗಾರರ ನಾಡು ಹರಪನಹಳ್ಳಿ ಸಾಮಾನ್ಯ ಕ್ಷೇತ್ರದಲ್ಲೂ ಕದನ ಕುತೂಹಲ ತೀವ್ರಗೊಂಡಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಗೆ ಸಡ್ಡು ಹೊಡೆಯಲು ಪಕ್ಷೇತರ ಮಹಿಳಾ ಅಭ್ಯರ್ಥಿ ಯೊಬ್ಬರು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ. ಕರುಣಾಕರ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಅರಸೀಕೆರೆ ಎನ್.ಕೊಟ್ರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ದಿ| ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ್ ಅಖಾಡಕ್ಕಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯಿಂದಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿರುವ ಪಕ್ಷೇತರ ಅಭ್ಯರ್ಥಿ ಲತಾ ಅವರಿಗೆ ಎಂ.ಪಿ.ಪ್ರಕಾಶ್ ಪುತ್ರಿ ಎಂಬ ಅನುಕಂಪದ ಅಲೆಯಿದೆ. ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಅವರು ರೆಡ್ಡಿ ಸಮುದಾ ಯದವರು. ಕಾಂಗ್ರೆಸ್ ಅಭ್ಯರ್ಥಿ ಎನ್. ಕೊಟ್ರೇಶ್ ಪಂಚಮಸಾಲಿ ಸಮುದಾಯ, ಎಂ.ಪಿ.ಲತಾ ಮಲಿ ಕಾ ರ್ಜುನ್ ವೀರಶೈವ ಜಂಗಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಸ್‌ಟಿ, ಲಿಂಗಾಯತ, ಎಸ್‌ಸಿ, ಕುರುಬ ಮತಗಳು ನಿರ್ಣಾ ಯಕವಾಗಿವೆ. ಜಿ. ಕರುಣಾಕರ ರೆಡ್ಡಿ ಹಾಲಿ ಶಾಸಕ. ಹಗರಿಬೊಮ್ಮನಹಳ್ಳಿ
ಕ್ಷೇತ್ರ ಮರು ವಿಂಗಡಣೆಯಿಂದ 2008ರಲ್ಲಿ ಹೊಸದಾಗಿ ರಚನೆಯಾದ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರ ಈಗ 2023ರಲ್ಲಿ ನಾಲ್ಕನೇ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ಭೀಮಾ ನಾಯ್ಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧಿ ಸಲು ಸಜ್ಜಾಗಿದ್ದಾರೆ. ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ವಲಸೆ ಬಂದ ಮಾಜಿ ಶಾಸಕ ನೇಮಿರಾಜ್ ಜೆಡಿಎಸ್ ಅಭ್ಯರ್ಥಿ ಯಾಗಿದ್ದಾರೆ. ಇನ್ನು ಸಾಮಾಜಿಕ ನ್ಯಾಯದಡಿ ಬಿಜೆಪಿ ಟಿಕೆಟ್ ದಕ್ಕಿಸಿಕೊಂಡಿರುವ ಬಲ್ಲಹುಣಸೆ ರಾಮಣ್ಣ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕದನ ಕಣ ಕುತೂಹಲ ಮೂಡಿಸಿದೆ. ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ ಅವರೇ ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ಮುಟ್ಟಿಸುವುದರ ಜತೆಗೆ 2013, 2018ರಲ್ಲಿ ಹಾಲಿ ಶಾಸಕರ ವಿರುದ್ಧ ಸೋತಿರುವ ಅನುಕಂಪದ ಅಲೆಯೂ ಕ್ಷೇತ್ರದ ಮತದಾರರಿಂದ ಲಭಿಸುವ ಸಾಧ್ಯತೆಯೂ ಇದೆ. ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರವಾದ್ದರಿಂದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಯಲ್ಲಿನ ಲಂಬಾಣಿ ಸಮುದಾಯಕ್ಕೆ ಸೇರಿದ್ದರೆ, ಬಿಜೆಪಿ ಅಭ್ಯರ್ಥಿ ಮಾದಿಗ ಸಮುದಾಯಕ್ಕೆ ಸೇರಿದ್ದಾರೆ. ಈ ಕ್ಷೇತ್ರದಲ್ಲೂ ಎಸ್‌ಟಿ, ಎಸ್‌ಸಿ, ಲಿಂಗಾಯತ, ಕುರುಬ ಮತಗಳು ನಿರ್ಣಾಯಕವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಭೀಮಾ ನಾಯ್ಕ ಕ್ಷೇತ್ರದಲ್ಲಿ ಹಾಲಿ ಶಾಸಕ.
Related Articles
ಕಳೆದೆರಡು ದಶಕಗಳಿಂದ ಹೊರಗಿನವರೇ ಶಾಸಕರಾಗಿದ್ದ ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳಾದ ಹೊರಗಿನವರು – ಸ್ಥಳೀಯರ ನಡುವಿನ ಚುನಾವಣ ಕದನ ಕುತೂಹಲ ಮೂಡಿಸಿದೆ. ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ಲೋಕೇಶ್ ನಾಯಕ ಬಿಜೆಪಿ ಅಭ್ಯರ್ಥಿಯಾಗಿ ದ್ದಾರೆ. ಸ್ಥಳೀಯ ಮಾಜಿ ಶಾಸಕ ದಿ| ಎನ್.ಟಿ. ಬೊಮ್ಮಣ್ಣರ ಪುತ್ರ ಡಾ| ಎನ್.ಟಿ. ಶ್ರೀನಿವಾಸ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಕೋಡಿಹಳ್ಳಿ ಭೀಮಣ್ಣ ಜೆಡಿಎಸ್ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಪûಾಂತರದ ಪರಿ ಣಾಮ ಬೀರದಿದ್ದರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು 29 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಹಾಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ನಾಯಕಗೆ ಈ ಬಾರಿ ಅನುಕಂಪದ ಅಲೆ ಸಿಗುವ ಸಾಧ್ಯತೆಯಿದೆ. ಅಲ್ಲದೇ, ಸ್ಥಳೀಯ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಈಚೆಗಷ್ಟೆ ನಿಧನ ಹೊಂದಿದ್ದು, ಅವರ ಪುತ್ರ ಡಾ| ಎನ್.ಟಿ.ಶ್ರೀನಿವಾಸ್ ಅವರಿಗೂ ಸ್ಥಳೀಯರೆಂಬ ಕಾರಣಕ್ಕೆ ಅನುಕಂಪದ ಅಲೆ ನೆಚ್ಚಿ ಕೊಂಡಿದ್ದಾರೆ. ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರವಾದ್ದರಿಂದ ಮೂವರು ಅಭ್ಯರ್ಥಿಗಳು ಎಸ್‌ಟಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಸ್‌ಟಿ, ಎಸ್‌ಸಿ, ಲಿಂಗಾಯತ, ಕುರುಬ ಮತಗಳು ನಿರ್ಣಾಯಕವಾಗಿವೆ. ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.
Advertisement
ಹೂವಿನಹಡಗಲಿಮಲ್ಲಿಗೆನಾಡು ಹೂವಿನಹಡಗಲಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣ ಅಖಾಡ ಸಿದ್ಧಗೊಂಡಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಎದುರಾಗಿದೆ. ಹಾಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಲು ಮುಂದಾಗಿದ್ದಾರೆ. ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್‌ನಿಂದ ವಲಸೆ ಬಂದ ಕೃಷ್ಣ ನಾಯ್ಕ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ತಪ್ಪಿದ ಮಾಜಿ ಶಾಸಕ ಚಂದ್ರ ನಾಯ್ಕ, ಓದೊ ಗಂಗಪ್ಪ ಬಂಡಾಯದ ಸುಳಿವು ನೀಡಿದರಾದರೂ ಈಗ ಸ್ವಪಕ್ಷದ ಅಭ್ಯರ್ಥಿ ಬೆಂಬಲಕ್ಕೆ ನಿಂತಿದ್ದು ಬಂಡಾಯ ಶಮನಗೊಂಡಂತಾಗಿದೆ. ಜೆಡಿಎಸ್‌ನಿಂದ ಪುತ್ರೇಶ್ ಕಣದಲ್ಲಿ ಉಳಿದಿದ್ದರಾದರೂ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಹಡಗಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದರಿಂದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಬ್ಬರೂ ಪರಿಶಿಷ್ಟ ಜಾತಿಯಲ್ಲಿ ಬರುವ ಲಂಬಾಣಿ ಸಮುದಾಯದವರಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾಗಳ ಸಂಖ್ಯೆ ಹೆಚ್ಚಿದೆ. ಲಿಂಗಾಯತ, ಎಸ್‌ಸಿ, ಕುರುಬ, ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ~ ವೆಂಕೋಬಿ ಸಂಗನಕಲ್ಲು