ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣೆ ಕಾವೇರಿದ್ದು, ಹಳೇ ಹುಲಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಮಣಿಸಲು ಎದುರಾಳಿಗಳು ರಣತಂತ್ರ ಹೆಣೆಯುತ್ತಿದ್ದಾರೆ.
1994ರಿಂದ ಚುನಾವಣ ರಾಜಕಾರಣದಲ್ಲಿರುವ ಜಿ.ಎಚ್.ತಿಪ್ಪಾರೆಡ್ಡಿ ಸ್ಪರ್ಧೆ ಮಾಡಿರುವ 6 ಚುನಾವಣೆಗಳ ಪೈಕಿ 5ರಲ್ಲಿ ಗೆದ್ದಿದ್ದಾರೆ. 2008ರಲ್ಲಿ ತಿಪ್ಪಾರೆಡ್ಡಿ ವಿರುದ್ಧ ಎಸ್.ಕೆ. ಬಸವರಾಜನ್ ಗೆದ್ದಿದ್ದರು. ಈಗ 7ನೇ ಚುನಾವಣೆಗೆ ಅಣಿಯಾಗಿರುವ ಜಿ.ಎಚ್. ತಿಪ್ಪಾರೆಡ್ಡಿ 75 ವರ್ಷ ದಾಟಿದ್ದರೂ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ ಮೋದಿ ನೇತೃತ್ವ, ರಾಜ್ಯದ ಬಿಜೆಪಿ ಸರಕಾರದ ಕೊಡುಗೆಗಳನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ.
ರೆಡ್ಡಿ ಸಮುದಾಯಕ್ಕೆ ಸೇರಿರುವ ತಿಪ್ಪಾರೆಡ್ಡಿಗೆ ಸ್ವಜಾತಿಯ ಮತಗಳ ಪ್ರಮಾಣ ಕಡಿಮೆ ಇದ್ದರೂ ಅಹಿಂದ ಮತಗಳು ಕೈ ಹಿಡಿಯುತ್ತಿವೆ. ಲಿಂಗಾಯತರ ಬೆಂಬಲ ನೆಚ್ಚಿಕೊಂಡಿದ್ದಾರೆ. ಸತತವಾಗಿ ಅಧಿಕಾರದಲ್ಲಿದ್ದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಆಗಿಲ್ಲ ಎನ್ನುವುದು ಮೈನಸ್. ಜಿಲ್ಲೆಗೆ ಮಂಜೂರಾದ ಸರಕಾರಿ ಮೆಡಿಕಲ್ ಕಾಲೇಜು ಕಾರ್ಯಾರಂಭಕ್ಕೆ ಮೀನಮೇಷ ಎಣಿಸುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.
ಕಾಂಗ್ರೆಸ್‌ನಿಂದ ಪ್ರತಿತಂತ್ರ: ಕಾಂಗ್ರೆಸ್‌ನಿಂದ ಈ ಬಾರಿ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆ.ಸಿ.ವೀರೇಂದ್ರ (ಪಪ್ಪಿ) ಕಣಕ್ಕಿಳಿದಿದ್ದು, ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಚಳ್ಳಕೆರೆ ಮೂಲದ ವೀರೇಂದ್ರ ಚಿತ್ರನಟ ದೊಡ್ಡಣ್ಣ ಅವರ ಅಳಿಯ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇವರು ಗಣನೀಯ ಮತ ಪಡೆದು 2ನೇ ಸ್ಥಾನಕ್ಕೇರಿದ್ದರು. ಈ ಬಾರಿ ವೀರೇಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಅವರ ಪತ್ನಿ ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ತೊಡಕಾಗಿದೆ. ಈಗಲೂ ಲಿಂಗಾಯತ ಮತ ವಿಭಜನೆ ಆತಂಕ ಮನೆ ಮಾಡಿದೆ.
ರಘು ಆಚಾರ್ ಮಗ್ಗುಲುಮುಳ್ಳು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ಸಿ ಜಿ. ರಘು ಆಚಾರ್, ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಇವರು ಕಾಂಗ್ರೆಸ್ ಮತ ಕೀಳುವ ಸಾಧ್ಯತೆಗಳಿವೆ. ಎಎಪಿ ಅಭ್ಯರ್ಥಿ ಭೀಮಸಮುದ್ರದ ಜಗದೀಶ್ ಬೆಂಬಲಕ್ಕೆ ಪಂಜಾಬ್ ಸಿಎಂ ಭಗವಂತ ಮಾನ್ ಪ್ರಚಾರಕ್ಕೆ ಬಂದಿದ್ದು, ಇವರು ಎಷ್ಟು ಮತ ಸೆಳೆಯುತ್ತಾರೆ ನೋಡಬೇಕಾಗಿದೆ.
~ ತಿಪ್ಪೇಸ್ವಾಮಿ ನಾಕೀಕೆರೆ