Advertisement

ರಿಯಾಯಿತಿ ದರದ ಬೀಜ ಖರೀದಿಗೆ ಮುಂದಾಗಿ

04:18 PM Jun 14, 2020 | Naveen |

ಕಂಪ್ಲಿ: ವಿವಿಧ ತಳಿಗಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರದ ಮೂಲಕ ವಿತರಿಸಲಾಗುತ್ತಿದ್ದು, ತಾಲ್ಲೂಕಿನ ರೈತರು ರಿಯಾಯಿತಿ ದರದ ಬೀಜಗಳನ್ನು ಖರೀದಿಸುವಲ್ಲಿ ಮುಂದಾಗಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್‌ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ರೈತ ಸಂಪರ್ಕ ಕೇಂದ್ರದಲ್ಲಿ ಬಿಪಿಟಿ 5204 ಸೋನಾ, ಎಂಟಿವಿ 1010, ಆರ್‌ಎನ್‌ಆರ್ 15048 ತಳಿಗಳ ಭತ್ತದ ಬೀಜ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ನವಣೆ ಹಾಗೂ ಹೆಸರು ಬಿತ್ತನೆ ಬೀಜಗಳ ಸಂಗ್ರಹವಿದೆ. ರಿಯಾಯಿತಿ ದರದಲ್ಲಿ ಖರೀದಿಸಲು ರೈತರು ಜಾಗೃತಿ ತೋರಬೇಕು. ಸಜ್ಜೆ, ರಾಗಿ, ಗಂಗಾವತಿ ಸೋನಾ ಭತ್ತದ ಬೀಜಗಳು ಶೀಘ್ರದಲ್ಲೇ ಬರಲಿವೆ. ಕಂಪ್ಲಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 26,671,43 ಹೆಕ್ಟೇರ್‌ ಭೌಗೋಳಿಕ ಪ್ರದೇಶವಿದ್ದು, 19,911 ಹೆಕ್ಟೇರ್‌ ನೀರಾವರಿ ಪ್ರದೇಶವಿದೆ. ಸುಮಾರು 23 ಸಾವಿರ ರೈತರಿದ್ದು, ಮುಂಗಾರು ಹಂಗಾಮಿಗೆ ಅಗತ್ಯವಿರುವ ಬೀಜಗಳ ದಾಸ್ತಾನು ಇದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಎಮ್ಮಿಗನೂರು, ನೆಲ್ಲುಡಿ, ಸಣಾಪುರ, ರಾಮಸಾಗರ, ದೇವಸಮುದ್ರ, ನಂ.10 ಮುದ್ದಾಪುರ ಗ್ರಾಮಗಳ ರೈತರು ಪ್ರತಿದಿನ ಕೇಂದ್ರಕ್ಕೆ ಭೇಟಿ ನೀಡಿ ಬೀಜಗಳನ್ನು ಖರೀದಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ, ಬಸವಣ್ಣೆಪ್ಪ, ರೈತ ಅನುವುಗಾರರಾದ ಅಮರೇಗೌಡ, ಜೆ.ಫಕ್ಕೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next