ಕಂಪ್ಲಿ: ಮಳೆಯಾಶ್ರಿತ ಪ್ರದೇಶ ಹಾಗೂ ಅಲ್ಪ ಪ್ರಮಾಣದ ನೀರು ಹೊಂದಿರುವ ಕೊಳವೆ ಬಾವಿಗಳ ರೈತರಿಗೆ ಕೃಷಿ ಹೊಂಡಗಳು ಅತ್ಯಂತ ಪ್ರಧಾನವಾಗುತ್ತಿದ್ದು, ಕೃಷಿ ಹೊಂಡಗಳು ರೈತರಿಗೆ ವರದಾನವಾಗುತ್ತಿರುವುದರಿಂದ ತಾಲೂಕಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ.
ಕಳೆದ ವರ್ಷ ಮನರೇಗಾ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ 10 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿತ್ತು. ಈ ವರ್ಷ 15ಕ್ಕೂ ಅಧಿಕ ರೈತರು ಕೃಷಿ ಹೊಂಡಗಳ ನಿರ್ಮಾಣಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಪೈಕಿ ಈಗಾಗಲೇ 5 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಇನ್ನು ಮೂರು ಪ್ರಗತಿಯಲ್ಲಿವೆ. ಈ ಯೋಜನೆಯಡಿಯಲ್ಲಿ 5 ಸಾವಿರಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಹಲವು ರೈತರು ಕೃಷಿ ಹೊಂಡ ನಿರ್ಮಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.
ಈ ಪೈಕಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಹತ್ತಿರದಲ್ಲಿ ರೈತ ಕೆ. ಭೀಮಪ್ಪ 2.40 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದು, ಹೊಲದಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದು, ಮಳೆ ಅಥವಾ ಕೊಳವೆ ಬಾವಿ ನೀರನ್ನು ಸಂಗ್ರಹಿಸಿಕೊಂಡು ನವಣೆಯನ್ನು ಬೆಳೆಯುತ್ತಿದ್ದಾರೆ. ಕಳೆದ 90 ದಿನಗಳ ಕೆಳಗೆ ನವಣೆಯನ್ನು ಬಿತ್ತನೆ ಮಾಡಿದ್ದು, ಇದೀಗ ಕಟಾವಿಗೆ ಬಂದಿದೆ. ಎಕರೆಗೆ 6-7 ಸಾವಿರ ರೂ. ಖರ್ಚು ಮಾಡಿದ್ದು, 10 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ.ಮಾರುಕಟ್ಟೆಯಲ್ಲಿ ನವಣೆ ಕ್ವಿಂಟಲ್ ಗೆ ಸುಮಾರು 2200 ರೂಗಳ ಬೆಲೆ ಇದ್ದು, ಬೆಳೆಯ ಖರ್ಚು ತೆಗೆದು ಲಾಭವಾಗುವ ನಿರೀಕ್ಷೆ ಇದೆ ಎಂದು ರೈತ ಕೆ. ಭೀಮಪ್ಪ ತಿಳಿಸಿದರು.
ಕೃಷಿ ಹೊಂಡಗಳಿಂದ ಬೆಳೆಗಳಿಗೆ ಸಕಾಲದಲ್ಲಿ ನೀರು ದೊರೆಯಲಿದ್ದು, ಮಳೆಯಾಶ್ರಿತ ಹಾಗೂ ಅಲ್ಪ ಪ್ರಮಾಣದ ಕೊಳವೆ ಬಾವಿ ನೀರಿರುವ ರೈತರಿಗೆ ಅನುಕೂಲವಾಗಿದೆ. ಪ್ರಸಕ್ತ ಸಾಲಿನಲ್ಲಿ 5 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದು, ಇನ್ನು 10 ಪ್ರಗತಿಯಲ್ಲಿವೆ. ಇದರಿಂದ ಕೂಲಿ ಕಾರ್ಮಿಕರಿಗೂ ನಿರಂತರವಾಗಿ ಕೆಲಸ ಸಿಗುತ್ತಿರುವುದರ ಜೊತೆಗೆ ರೈತರಿಗೂ ಅನುಕೂಲವಾಗುತ್ತಿರುವುದರಿಂದ ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಆಸಕ್ತಿ ತೋರಬೇಕು.
ಶ್ರೀಧರ,
ಕೃಷಿ ಅಧಿಕಾರಿ, ಕಂಪ್ಲಿ
ಜಿ.ಚಂದ್ರಶೇಖರಗೌಡ