ಕಂಪ್ಲಿ: ಮುಂಗಾರು ಮಳೆ ಆರಂಭವಾದರೂ ಸಹಿತ ಇದುವರೆಗೂ ಒಂದೇ ಒಂದು ಮಳೆಯೂ ಬಂದಿಲ್ಲ. ತಾಲೂಕಿನ ರೈತರ ಜೀವನಾಡಿ ತುಂಗಭದ್ರಾ ನದಿಯ ಒಡಲು ಬರಿದಾಗಿದ್ದು, ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ನದಿ ಪಾತ್ರದ ಸುಮಾರು 3.291 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಗೆ ತೀವ್ರ ಹಿನ್ನಡೆಯಾಗಿದ್ದು, ಅನ್ನದಾತರು ಆತಂಕಗೊಂಡಿದ್ದಾರೆ.
ನದಿ ಪಾತ್ರದ ವ್ಯಾಪ್ತಿಯಲ್ಲಿರುವ ಕಂಪ್ಲಿ, ಕಂಪ್ಲಿ-ಕೋಟೆ ಮಾಗಾಣಿ ಪ್ರದೇಶ, ರಾಮಸಾಗರ, ಸಣಾಪುರ, ಇಟಗಿ, ಬೆಳಗೋಡುಹಾಳು ಭಾಗದಲ್ಲಿ ಮುಂಗಾರು ಕೃಷಿ ಚಟುವಟಿಕೆಗೆ ಮಂಕು ಕವಿತದಂತಾಗಿದೆ. ನದಿ ಭಾಗದ ಅಲ್ಲಲ್ಲಿ ಸಣ್ಣ ಪುಟ್ಟ ಕೊಳಗಳಿದ್ದು, ಅಲ್ಲಿಂದ ಪೈಪ್‌ಲೈನ್ ಅಳವಡಿಸಿಕೊಂಡು ಹರಸಾಹಸ ಮಾಡಿ ನೀರು ಹಾಯಿಸಿಕೊಳ್ಳುವ ಮೂಲಕ ಕೆಲವು ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಆದರೆ ಕೊಳಗಳಲ್ಲಿ ನೀರು ಸಂಗ್ರಹ ಕುಸಿದಲ್ಲಿ ನಾಟಿ ಮಾಡಿದ ಭತ್ತವೂ ನೀರಿಲ್ಲದೆ ಒಣಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ನದಿ ಪಾತ್ರದ ಜನ ಜಾನುವಾರುಗಳಿಗೆ ಜಲಚರಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ. ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡಿರುವ ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ, ರಾಮಸಾಗರದ ವಿಠಲಾಪುರ ಮತ್ತು ಗೌರಮ್ಮ ಕೆರೆ ವ್ಯಾಪ್ತಿಯ ರೈತರು ಇಲ್ಲಿಯವರೆಗೂ ಜಮೀನಿನಲ್ಲಿ ಪ್ರಾಥಮಿಕ ಅಂದರೆ ಮಾಗಿ ಉಳುಮೆಯನ್ನಾಗಲಿ, ಭೂಮಿ ಹದಗೊಳಿಸುವ ಕಾರ್ಯವನ್ನು ಸೇರಿದಂತೆ ಕೃಷಿ ಚಟುವಟಿಕೆಯನ್ನೇ ಆರಂಭಿಸಿಲ್ಲ.
ಕಂಪ್ಲಿ ತಾಲೂಕು ಕೃಷಿ ಚಿತ್ರಣ: ಹೆಕ್ಟೇರ್‌ಗಳಲ್ಲಿ- 27673 ಭೌಗೋಳಿಕ ವಿಸ್ತೀರ್ಣ, 19911 ಸಾಗುವಳಿ ಕ್ಷೇತ್ರ, 17804 ನೀರಾವರಿ ಕ್ಷೇತ್ರ, 2061 ಮಳೆಯಾಶ್ರಿತ ಕ್ಷೇತ್ರ, 10 ಹೆಕ್ಟೇರ್ ಇದುವರೆಗೂ ಬಿತ್ತನೆಯಾದ ಪ್ರದೇಶವಾಗಿದೆ.
ಜೂನ್ ಮೊದಲ ವಾರದವರೆಗೆ ಬಿದ್ದ ಮಳೆ: ವಾಡಿಕೆ ಮಳೆ 56.ಮಿಮೀ, 2018ರಲ್ಲಿ ಬಿದ್ದ ಮಳೆ 62 ಮಿಮೀ 2019ರಲ್ಲಿ ಬಿದ್ದ ಮಳೆ 55 ಮಿಮೀ(ತಾಲೂಕಿನ ಕೆಲವು ಭಾಗದಲ್ಲಿ ಮಾತ್ರ) ಮಳೆ.
ಇಟಗಿ ಗ್ರಾಮದಲ್ಲಿ ಒಂದೇ ಕೊಳವೆ ಬಾವಿ: ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಕಾರಣ ಇಟಗಿ ಗ್ರಾಮದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸದ್ಯ ನಮ್ಮ ಕೊಳೆಬಾವಿಯಿಂದಲೇ ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ 2 ಕೈ ಪಂಪ್‌ಗ್ಳಿದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೊಳವೆಬಾವಿ ಯಲ್ಲಿ ನೀರು ಕಡಿಮೆ ಆದರೆ ಇಡೀ ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆ ಎಂದು ಇಟಗಿ ಗ್ರಾಮಕ್ಕೆ ಕಳೆದ ಹಲವು ತಿಂಗಳಿಂದ ನೀರು ಕೊಡುತ್ತಿರುವ ಇಟಗಿ ಬಸವರಾಜಗೌಡ ತಿಳಿಸಿದರು.