ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಳ್ಳಿ ಮತ್ತು ಶ್ರೀರಾಮರಂಗಾಪುರ ಗ್ರಾಮಗಳ ಮೆಣಸಿನಕಾಯಿ ಜಮೀನುಗಳಿಗೆ ಕಾರ್ಮಿಕ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಲೆ ಬಿಟ್ಟು ಕೃಷಿ ಕೆಲಸದಲ್ಲಿ ನಿರತರಾಗಿದ್ದ 7 ಮಕ್ಕಳನ್ನು ರಕ್ಷಣೆ ಮಾಡಿ, ಶಾಲೆಗೆ ಮಕ್ಕಳನ್ನು ಪುನಃ ದಾಖಲಿಸಿ ಹಾಗೂ ಮಕ್ಕಳ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡ ಘಟನೆ ಮಂಗಳವಾರ ಜರುಗಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳು ಆರಂಭಿಸಿರುವ “ಇ-ಸ್ಪಂದನ’ ಕೋಶದಲ್ಲಿ ಕಂಪ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲೆ ಬಿಟ್ಟ ಅನೇಕ ಮಕ್ಕಳು ಕೃಷಿ ಕೆಲಸಗಳಿಗೆ ಹೋಗುತ್ತಿದ್ದಾರೆಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಮಂಗಳವಾರ ದಾಳಿ ನಡೆಸಿದ್ದು, ಮೆಣಸಿನ ಕಾಯಿ ಕೀಳುವ ಕೃಷಿ ಕೆಲಸದಲ್ಲಿ ನಿರತರಾಗಿದ್ದ 5 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಜೊತೆಗೆ ಹೊನ್ನಳಿ ಗ್ರಾಮದ ಕ್ರಾಸನಲ್ಲಿ ಟ್ರ್ಯಾಕ್ಟರ್‌ನಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಕೃಷಿ ಕೆಲಸದಲ್ಲಿ ತೊಡಗಿದ್ದ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ವಿದ್ಯಾಭ್ಯಾಸ ಮಾಡುವ ಮಕ್ಕಳಾಗಿದ್ದು, ಇವರೆಲ್ಲರೂ ಶಾಲೆಯನ್ನು ಅರ್ಧಕ್ಕೆ ಬಿಟ್ಟವರಾಗಿದ್ದು, ಈ ಬಗ್ಗೆ ಶಾಲೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಪುನಃ ಶಾಲೆಗೆ ಪುನರ್ ದಾಖಲಿಸಲಾಗಿದೆ. ಮಕ್ಕಳನ್ನು ಸಾಗಿಸುತ್ತಿದ್ದ ವಾಹನಗಳ ಚಾಲಕರಿಗೆ, ಮಾಲೀಕರಿಗೆ, ಜಮೀನಿನ ಮಾಲೀಕರಿಗೆ, ಎಚ್ಚರಿಕೆ ನೀಡಿ ಮತ್ತೂಮ್ಮೆ ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಸೂಚಿಸಿದ್ದಾರೆ.
ಹೊಸಪೇಟೆ ತಾ.ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಚಿದಾನಂದ ಮಾತನಾಡಿ, ತಾಲೂಕಿನ ಕಡೆ ಗ್ರಾಮವಾಗಿರುವುದರಿಂದ ಇಲ್ಲಿ ಮಕ್ಕಳ ಬಗ್ಗೆ ಗಮನ ಹರಿಸಿದೇ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದರು.
ದಾಳಿಯಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಭೂಪಾಲ್, ಕುಡುತಿನಿ ಠಾಣೆಯ ಎಎಸ್‌ಐ ವೆಂಕಟೇಶ್, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ, ಮಕ್ಕಳ ಸಹಾಯವಾಣಿಯ ಸಂಯೋಜಕ ಚಿದಾನಂದ, ನೇತ್ರಾ, ಹೊನ್ನಾಳಿ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳಾದ ದ್ಯಾವಣ್ಣ, ಸುಭಾನಿ ಮತ್ತು ಮುಖ್ಯಗುರುಗಳು ಭಾಗವಹಿಸಿದ್ದರು. ನಂತರ ಹೊನ್ನಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಪಾಲಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.