ಕಂಪ್ಲಿ: ಶಾಲೆ ಬಿಟ್ಟು ಕೃಷಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ 15ಕ್ಕೂ ಅಧಿಕ ಬಾಲಕಾರ್ಮಿಕರನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.
ದೇವಲಾಪುರ ಭಾಗದ ಜನಪ್ರತಿನಿಧಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿದ ಹೊಸಪೇಟೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕುಡುತಿನಿ ಪೊಲೀಸ್ ಅಧಿಕಾರಿಗಳು ಮತ್ತು ಹೊಸಪೇಟೆಯ ಚೈಲ್ಡ್ ಲೈನ್ ಸಿಬ್ಬಂದಿ 9ಕ್ಕೂ ಅಧಿಕ ಗೂಡ್ಸ್ ಗಾಡಿ, ಟಾಟಾ ಏಸ್ ಹಾಗೂ ಲಗೇಜ್ ಆಟೋಗಳಲ್ಲಿ ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ ಹಾಗೂ ಕೊಟ್ಟಾಲ್ ಗ್ರಾಮಗಳಿಗೆ ಕೃಷಿಕೂಲಿ ಕೆಲಸಕ್ಕೆ ತೆರಳುತ್ತಿದ್ದ ಬಾಲಕಾರ್ಮಿಕರನ್ನು ತಡೆದಿದ್ದಾರೆ.
ತಾಲಕಿನ ದೇವಲಾಪುರವೂ ಸೇರಿದಂತೆ ಕಾರಿಗನೂರು, ಬೈಲುವದ್ದಿಗೇರಿ, ಧರ್ಮಸಾಗರ ಗ್ರಾಮಗಳ ಶಾಲೆ ಬಿಟ್ಟ ಮಕ್ಕಳು ಹೊಸಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಕೃಷಿ ಕೂಲಿ ಕೆಲಸಗಳಿಗೆ ತೆರಳುತ್ತಿದ್ದಾರೆನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ದಾಳೆಯಲ್ಲಿ ಪಾಲಕರಿಲ್ಲದೆ ಬೇರೆ ಕೂಲಿ ಕಾರ್ಮಿಕರೊಂದಿಗೆ 15 ಮಕ್ಕಳು ಪತ್ತೆಯಾಗಿದ್ದು, ನಂತರ ಈ ಮಕ್ಕಳನ್ನು ಹಾಗೂ ವಾಹನಗಳನ್ನು ಕುಡುತಿನಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಾಹನಗಳ ಮಾಲೀಕರಿಂದ ಮತ್ತು ವಿದ್ಯಾರ್ಥಿಗಳಿಂದ, ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ವಾಹನಗಳಿಗೆ ದಂಡವನ್ನು ವಿಧಿಸಿ ಇನ್ನೊಮ್ಮೆ ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಮತ್ತು ಮಕ್ಕಳನ್ನು ಕರೆದುಕೊಂಡು ಹೋದರೆ ವಾಹನಗಳನ್ನು ದಸ್ತಗೀರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಹುತೇಕ ಮಕ್ಕಳು 7ರಿಂದ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು ಇದರಲ್ಲಿ ಕೇವಲ ಒಬ್ಬ ಬಾಲಕನಿದ್ದು, ಉಳಿದವರು ಬಾಲಕಿರಾಗಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಪಡೆದು ಅವರು ವಿದ್ಯಾಭ್ಯಾಸ ಮಾಡುವ ಶಾಲೆಗೆ ತೆರಳಿ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಕಾರ್ಮಿಕ ಅಧಿಕಾರಿ ಭೂಪಾಲ್ ಮತ್ತು ಚೈಲ್ಡ್‌ಲೈನ್ ಸಿಬ್ಬಂದಿ ಚಿದಾನಂದ ಮತ್ತು ನೇತ್ರಾವತಿ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕುಡುತಿನಿ ಎಎಸ್‌ಐ ಗೋಪಾಲಕೃಷ್ಣ, ಮುಖ್ಯಪೇದೆ ಶಿವಪುತ್ರಪ್ಪ, ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಗಂಗಾಧರ ಇದ್ದರು. ಇನ್ನುಮುಂದೆ ಪ್ರತಿದಿನ ದೇವಲಾಪುರ ವ್ಯಾಪ್ತಿಯಲ್ಲಿ ನಿರಂತರವಾಗಿ ನಿಗಾವಹಿಸಿ ಬಾಲಕಾರ್ಮಿಕರ ಬಗ್ಗೆ ಗಮನ ಹರಿಸಲಾಗುವುದು. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಕ್ತವಾದ ಮಾಹಿತಿ ನೀಡಲಾಗುವುದು ಎಂದು ಕುಡುತಿನಿ ಎಎಸ್‌ಐ ಗೋಪಾಲಕೃಷ್ಣ ತಿಳಿಸಿದರು.