ಕಂಪ್ಲಿ: ತುಂಗಭದ್ರ ಜಲಾಶಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಪಟ್ಟಣದ ಕಂಪ್ಲಿ-ಕೋಟೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ನದಿ ಪಾತ್ರದ ಸಾವಿರಾರು ಎಕರೆ ವಿವಿಧ ಬೆಳೆಗಳ ಜಮೀನುಗಳು ಜಲಾವೃತಗೊಂಡಿವೆ. ಕಂಪ್ಲಿ ಭಾಗದ ಸಾರ್ವಜನಿಕರು ಬುಕ್ಕಸಾಗರ ಹಾಗೂ ಹೊಸಪೇಟೆ ಮಾರ್ಗದಲ್ಲಿ ಎರಡು ನಗರಗಳ ಜನರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಕಳೆದ ರಾತ್ರಿಯಿಂದಲೂ ತುಂಗಭದ್ರಾ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿಸಿದ್ದು, ನದಿಗೆ ಬಂದ ಸಾಕಷ್ಟು ಪ್ರಮಾಣದ ನೀರಿನಿಂದ ಸೇತುವೆಗಳು ಮುಳುಗಡೆಯಾಗಿವೆ. ನದಿ ನೀರು ರೈತರ ಹೊಲ-ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಕಂಪ್ಲಿ-ಕೋಟೆ ಭಾಗದ ರಾಮಸಾಗರ ಮಾಗಣಿ ರಸ್ತೆ ಬಳಿಯಲ್ಲಿರುವ ಬಾಳೆ, ಭತ್ತ, ಕಬ್ಬು ಸೇರಿದಂತೆ ರೈತರ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ಕಂಪ್ಲಿ-ಕೋಟೆ, ಸಣಾಪುರ, ಇಟಗಿ, ಮುದ್ದಾಪುರ ಪ್ರದೇಶದ ಸಣ್ಣ ಸೇತುವೆಗಳು ಜಲಾವೃತಗೊಂಡಿವೆ. ಮೋಟರ್‌ಗಳು ನೀರಲ್ಲಿ ಮುಳುಗಡೆಯಾಗಿವೆ. ಇನ್ನು ಕೆಲ ರೈತರು ಮೋಟರ್‌ಗಳನ್ನು ಸ್ಥಳಾಂತರಿಸಿದರು. ಕಂಪ್ಲಿ-ಕೋಟೆಗೆ ನೀರು ನುಗ್ಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತ್ರಸ್ತರಿಗಾಗಿ ಗಂಜಿಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇನ್ನೂ ಹೆಚ್ಚು ನೀರು ನದಿಗೆ ಹರಿದರೆ, ಕಂಪ್ಲಿ-ಕೋಟೆಯ ಕೆಲ ಮನೆಗಳಿಗೆ ನೀರು ನುಗ್ಗುವ ಭೀತಿಯಿದೆ. ಲಕ್ಷಾಂತರ ಕ್ಯೂಸೆಕ್ ನೀರು ಹರಿದಿದ್ದರಿಂದ ಕಂಪ್ಲಿ-ಕೋಟೆಯ ಹೊಳೆ ಆಂಜನೇಯ ದೇವಸ್ಥಾನ ನೀರಿನಿಂದ ತುಂಬಿಕೊಂಡಿದೆ. ಕಂಪ್ಲಿ-ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನ ಬಳಿಯ ತಗ್ಗು ಪ್ರದೇಶ ಜಲಾವೃತವಾಗಿದ್ದು, ರಸ್ತೆ ಮೇಲೆ ನೀರು ಹರಿದ ಪರಿಣಾಮ ರಾಮಸಾಗರ ಮಾಗಣಿ ರಸ್ತೆಯಿಂದ ಕಂಪ್ಲಿ-ಕೋಟೆ ಕಡೆಗೆ ಜನರನ್ನು ತೆಪ್ಪದ ಮೂಲಕ ದಡಕ್ಕೆ ಸಾಗಿಸಲಾಯಿತು.