ಕಂಪ್ಲಿ: ತಾಲೂಕಿನ ಚಿಕ್ಕಜಾಯಿಗನೂರು ಮತ್ತು ಬಳ್ಳಾಪುರ ರೈತರ ಜಮೀನಿಗೆ ಹರಿಯುವ ನೀರಿನ ವಿತರಣಾ ನಾಲೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಎರಡನೇ ನೀರಿನ ತೂಬನ್ನು ತೆರವುಗೊಳಿಸುವ ಮೂಲಕ ರೈತರ ಜಮೀನಿಗೆ ಸಮರ್ಪಕವಾಗಿ ನೀರೊದಗಿಸಬೇಕು ಹಾಗೂ ಅಕ್ರಮ ತೂಬನ್ನು ತೆರವುಗೊಳಿಸುವವರೆಗೂ ಕರ್ನಾಟಕ ನೀರಾವರಿ ನಿಗಮದ ಉಪವಿಭಾಗದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸು ತ್ತೇವೆ ಎಂದು ಎಚ್.ಕರಿಯಪ್ಪ ತಿಳಿಸಿದರು. ನಂತರ ಅಧಿಕಾರಿಗಳ ಭರವಸೆ ಮೇರೆಗೆ ಮುಷ್ಕರ ಕೈಬಿಟ್ಟರು.
ಅವರು ಗುರುವಾರ ಬೆಳಗ್ಗೆ ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಉಪ ವಿಭಾಗದ ಕಚೇರಿ ಮುಂಭಾಗದಲ್ಲಿ ಅರ್ನಿಷ್ಟಾವಧಿ ಮುಷ್ಕರವನ್ನು ಆರಂಭಿಸಿ ಮಾತನಾಡಿ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯ ಡಿಪಿ 3ರಲ್ಲಿ 48 ಎಕರೆ ಜಮೀನಿಗೆ ಹಲವಾರು ವರ್ಷಗಳ ಹಿಂದೆಯೇ ತೂಬನ್ನು ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಅಧಿಕಾರಿಗಳು ಕೆಲವು ದೊಡ್ಡ ರೈತರ ಮಾತಿಗೆ ಮರುಳಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಇರುವ ತೂಬಿನಲ್ಲಿ ಮತ್ತೂಂದು ತೂಬನ್ನು ನಿರ್ಮಿಸಿ ಅನಾದಿ ಕಾಲದಿಂದಲೂ ನೀರನ್ನು ಪಡೆಯುವ ರೈತರಿಗೆ ಅನ್ಯಾಯವನ್ನು ಮಾಡಿದ್ದಾರೆ.
ಅಧಿಕಾರಿಗಳು ನಿರ್ಮಿಸಿದ ತೂಬಿನ ಬಗ್ಗೆ ಇಲಾಖೆಯ ಸ್ಕೆಚ್‌ನಲ್ಲಿ ಯಾವ ದಾಖಲೆ ಇಲ್ಲದಿದ್ದರೂ ಸಹಿತ ಭ್ರಷ್ಟಾಚಾರದಿಂದ ಮತ್ತೂಂದು ತೂಬನ್ನು ನಿರ್ಮಿಸಿದ್ದಾರೆ. ಇದರಿಂದ ಸುಮಾರು 48 ಎಕರೆ ಜಮೀನುಗಳಿಗೆ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ನೀರು ದೊರೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಯ ಮುಂಭಾಗದಲ್ಲಿ ಹೋರಾಟವನ್ನು ಹಮ್ಮಿಕೊಂಡಿದ್ದು, ಇಲಾಖೆ ಅಧಿಕಾರಿಗಳು ಕೂಡಲೇ ಅಕ್ರಮವಾಗಿ ನಿರ್ಮಿಸಿರುವ ಎರಡನೇ ತೂಬನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಹಾಗೂ ಅನಾಹುತಗಳಿಗೆ ನೀರಾವರಿ ನಿಗಮದ ಅಧಿಕಾರಿಗಳೇ ಹೊಣೆಯಾಗಲಿದ್ದಾರೆಂದು ಎಚ್ಚರಿಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಂ. ವಿ.ಎಸ್. ಶಿವಶಂಕರ್ ಮಾತನಾಡಿ, ಅಧಿಕಾರಿಗಳು ಬಲಹೀನ ರೈತರನ್ನು ಹಾಳು ಮಾಡುವ ಉದ್ದೇಶದಿಂದ ಬೃಹತ್ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಅಕ್ರಮವಾಗಿ ಒಂದೇ ವಿತರಣಾ ನಾಲೆಯಲ್ಲಿ ಮತ್ತೂಂದು ತೂಬನ್ನು ನಿರ್ಮಿಸುವ ಮೂಲಕ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಸರ್ವೆ ನಂ 177ರ ಪೈಕಿ 48 ಎಕರೆಗೆ ನೀರು ಸಿಗದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಕ್ರಮವಾಗಿ ನಿರ್ಮಿಸಿರುವ ತೂಬನ್ನು ತೆರವುಗೊಳಿಸಬೇಕು. ಅಲ್ಲಿಯವರೆಗೂ ರೈತರು ಹಾಗೂ ರೈತ ಮಹಿಳೆಯರು ಅರ್ನಿಷ್ಟಾವಧಿ ಮುಷ್ಕರವನ್ನು ನಡೆಸಲಿದ್ದಾರೆಂದು ಸ್ಪಷ್ಟ ಪಡಿಸಿದರು. ಮುಷ್ಕರದಲ್ಲಿ ರೈತರಾದ ಎಚ್. ಲಿಂಗಪ್ಪ, ಸಣ್ಣ ಮಾರೆಪ್ಪ, ಗೂಳಿ ತಿಪ್ಪಣ್ಣ, ವೀರೇಶ್, ಟೈಲರ್ ಸಿದ್ದಪ್ಪ, ಎಚ್. ಹುಲುಗಪ್ಪ, ಮುನಿಸ್ವಾಮಿ, ಎಚ್.ಲಿಂಗಮ್ಮ, ಗಂಗಮ್ಮ, ಹನುಮಂತಮ್ಮ, ಎಚ್.ಬಸಮ್ಮ, ಎಚ್.ಚಂದ್ರಮ್ಮ,ಎಚ್ ಪಾರ್ವತೆಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುಷ್ಕರ ವಾಪಸ್
ನೀರಾವರಿ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ 1ಎನ್ ತೂಬಿನಲ್ಲಿ ಕಂಟ್ರೋಲ್ ಪಾಯಿಂಟ್ ಇದ್ದು ಈ ಕಟ್ಟಡವನ್ನು ಸುಮಾರು ವರ್ಷಗಳ ಹಿಂದೆ ಕಾಡಾ ಇಲಾಖೆ ನಿರ್ಮಿಸಿದ್ದು ರೈತರ ಸಮಸ್ಯೆ ಹೊರ ಕಾಲುವೆಗೆ ಸಂಬಂಧಿಸಿದ್ದು ಕಾಡಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜು. 25ರೊಳಗೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖೀತ ರೂಪದಲ್ಲಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಮುಷ್ಕರವನ್ನು ಹಿಂಪಡೆಯಲಾಯಿತು.
ಅಧಿಕಾರಿಗಳ ತಪ್ಪಿಲ್ಲ
ರೈತರ ಸಮಸ್ಯೆ ಬಗ್ಗೆ ಮಾತನಾಡಿದ ಕರ್ನಾಟಕ ನೀರಾವರಿ ನಿಗಮದ ಎಇಇ ಪುರುಷೋತ್ತಮ ಬಾಗವಾಡಿ, ಎಇ ಯಲ್ಲಪ್ಪ ಅವರು ನಾವು ಯಾವುದೇ ರೀತಿಯ ಅಕ್ರಮವಾಗಿ ತೂಬನ್ನು ನಿರ್ಮಿಸಿಲ್ಲ. ಅಲ್ಲಿದ್ದ ತೂಬನ್ನು ಕೆಲವು ರೈತರೇ ಒಡೆದು ಹಾಕಿದ್ದರಿಂದ ಉಳಿದ ರೈತರಿಗೆ ತೊಂದರೆಯಾಗಬಾರದೆಂದು ಒಡೆದು ಹಾಕಿದ ತೂಬನ್ನು ದುರಸ್ತಿ ಮಾಡಿಸಲಾಗಿದ್ದು, ಇದಕ್ಕೆ ಸ್ಥಳೀಯ ರೈತರಲ್ಲಿನ ಗಲಾಟೆಯೇ ಕಾರಣವಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ.