ಕಂಪ್ಲಿ: ವಿಶ್ವದೆಲ್ಲೆಡೆ ಹಬ್ಬಿರುವ ಕೊರೊನಾ ವೈರಸ್ ಜನರಲ್ಲಿ ಭಯ ಭೀತಿ ಹುಟ್ಟಿಸಿದೆ. ಈ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹಬ್ಬುವ ರೋಗವಾಗಿದೆ ಎಂದು ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ರವೀಂದ್ರ ಕನಿಕೇರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಡೆಡ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೊರೊನಾ ಜಾಗೃತಿ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಗಟ್ಟಲು ಜನರು ಮಾಸ್ಕ್ ಗಳನ್ನು ಧರಿಸಬೇಕು. ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸುವ ಮೂಲಕ ಕೊರೊನಾ ವೈರಸ್ ತಡೆಗಟ್ಟಬೇಕು. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ತಹಶೀಲ್ದಾರ್ ಎಂ.ರೇಣುಕಾ ಮಾತನಾಡಿ, ಕೊರೊನಾ ಎಂಬ ಮಹಾಮಾರಿಯಿಂದ ದೂರವಿರಲು ಪ್ರತಿಯೊಬ್ಬರು ಜಾಗೃತಿ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮುಂಜಾಗ್ರತ ಕ್ರಮವಾಗಿ ಸ್ವಚ್ಛತೆ ಕಾಪಾಡಬೇಕು. ಮಾಸ್ಕ್ಗಳನ್ನು ಬಳಸಲು ಮುಂದಾಗಬೇಕು. ಜಾತ್ರೆ, ಉತ್ಸವ, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪ್ರತಿಯೊಬ್ಬರೂ ಸರ್ಕಾರದ ಆದೇಶ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸಿಪಿಐ ಡಿ.ಹುಲುಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಬೇರೆ ದೇಶಗಳಿಂದ ಬರುವ ಪ್ರವಾಸಿಗಳಿಂದ ಕೊರೊನಾ ವೈರಸ್ ಹರಡುವಂತಾಗಿದೆ. ಇಂತಹ ಮಹಾಮಾರಿ ವೈರಸ್‌ಗೆ ಮದ್ದು ಇಲ್ಲ. ಹೀಗಾಗಿ ಪ್ರತಿಯೊಬ್ಬರು ಮುಂಜಾಗೃತವಾಗಿ ಆರೋಗ್ಯ ಕಡೆ ಗಮನ ಹರಿಸಬೇಕು. ಕೊರೊನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು. ಹೊರ ದೇಶ, ರಾಜ್ಯಗಳಿಂದ ಪಟ್ಟಣಕ್ಕೆ ಯಾರಾದರೂ ಆಗಮಿಸಿದರೆ, ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಎಂದರು.
ಪಿಎಸ್‌ಐ ಮೌನೇಶ್ ಉ.ರಾಥೋಡ್, ಅಪರಾಧ ವಿಭಾಗದ ಪಿಎಸ್‌ಐ ಬಸಣ್ಣ ಲಂಬಾಣಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಪುರಸಭೆ ಸದಸ್ಯ ಲೊಡ್ಡು ಹೊನ್ನೂರವಲಿ, ಮುಖಂಡರಾದ ಸತ್ಯನಾರಾಯಣಬಾಬು, ಸುಧಾಕರ, ಜಾಫರ್, ಮೆಹಬೂಬ್, ಆರ್.ಇಮಾಮ್‌ಸಾಬ್, ಹಣ್ಣಿನ ನಾಗರಾಜ, ರಮೇಶ್, ಪ್ರಸನ್ನ, ನವಾಬ್, ರಾಮಾಂಜಿನಿ, ಮಾರುತಿ ಹಾಗೂ ಮಾಲ್, ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಅನೇಕರಿದ್ದರು.