Advertisement

ಕಂಪ್ಲಿ ಪುರಸಭೆಯಲ್ಲಿ 67 ಹುದ್ದೆಗಳು ಖಾಲಿ ಖಾಲಿ!

11:23 AM May 20, 2019 | Naveen |

ಕಂಪ್ಲಿ: ಪಟ್ಟಣದಲ್ಲಿ ಪುರಸಭೆ ಹೆಸರಿಗೆ ಎಂಬಂತಾಗಿದೆ. ಪುರಸಭೆಯಲ್ಲಿ ಸಿಬ್ಬಂದಿಗಳೇ ಇಲ್ಲದಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪುರಸಭೆಗೆ ಅಲೆದಾಡುವುದು ಸಾಮಾನ್ಯವಾಗಿದೆ.

Advertisement

ಸರ್ಕಾರ ಸಕಾಲ ಯೋಜನೆ ಜಾರಿ ಮಾಡಿ ಸಾರ್ವಜನಿಕರ ಕೆಲಸಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ ವೇಗ ನೀಡಿದೆ. ಆದರೆ ಪಟ್ಟಣದ ಪುರಸಭೆಯಲ್ಲಿ ಯಾವುದೇ ಕೆಲಸಕ್ಕೆ ಹೋದರೂ ಸಿಬ್ಬಂದಿ ಇಲ್ಲದೆ ತಡವಾಗುತ್ತಿದ್ದು, ನಾಳೆ ಬನ್ನಿ ಎನ್ನುವ ಮಾತುಗಳು ಸಾಮಾನ್ಯವಾಗಿವೆ.

ಈ ಹಿಂದೆ ಜಿಲ್ಲೆಯಲ್ಲಿಯೇ ಏಕೈಕ ಪುರಸಭೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಂಪ್ಲಿ ಪುರಸಭೆಗೆ ಮಂಜೂರಾದ 125 ಹುದ್ದೆಗಳಲ್ಲಿ ಸದ್ಯ ಇದೀಗ 58 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ 67 ಹುದ್ದೆಗಳು ಖಾಲಿ ಇರುವುದರಿಂದ ಪಟ್ಟಣದ ಸ್ವಚ್ಛತೆ, ನಾಗರಿಕ ಸೌಲಭ್ಯ ಸೇರಿದಂತೆ ಇತರೆ ಕೆಲಸಗಳಿಗೆ ತೀವ್ರ ಹಿನ್ನಡೆಯಾಗಿದೆ.

ಪುರಸಭೆಯಲ್ಲಿ ಹುದ್ದೆಗಳು ಖಾಲಿ: ಪುರಸಭೆಯಲ್ಲಿ ಸುಮಾರು 67 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಲೆಕ್ಕಿಗ, ಕಿರಿಯ ಅಭಿಯಂತರ, ಪ್ರಥಮ ದರ್ಜೆ ಸಹಾಯಕ, ಹಿರಿಯ ಆರೋಗ್ಯ ನಿರೀಕ್ಷಕ, ಸ್ಟೇನೋಗ್ರಾಫರ್‌, ಸಮುದಾಯ ಸಂಘಟಕ, ಕಿರಿಯ ಕಾರ್ಯಕ್ರಮ ನಿರ್ವಾಹಕ, ಕಿರಿಯ ಆರೋಗ್ಯ ಸಹಾಯಕ, ಕರ ವಸೂಲಿಗಾರ, ಪ್ಲಂಬರ್‌, ತೋಟಗಾರ, ನೀರು ಸರಬರಾಜು ವಾಲ್ವಮನ್‌ ತಲಾ ಒಂದು ಹುದ್ದೆ, ಹಿರಿಯ ವಾಲ್ವಮನ್‌ 2 ಮತ್ತು ನೀರು ಸರಬರಾಜು ಆಪರೇಟರ್‌ 4, ಗಣಕಯಂತ್ರ ನಿರ್ವಾಹಕ 2, ವಾಹನ ಚಾಲಕ 3, ನೀರು ಸರಬರಾಜು ಸಹಾಯಕ 4, ಪೌರ ಕಾರ್ಮಿಕರು 30 ಲೋಡರ್ಸ್‌ 8, ಕ್ಲೀನರ್ 2 ಹುದ್ದೆಗಳು ಸೇರಿದಂತೆ ಒಟ್ಟು 67 ಹುದ್ದೆಗಳು ಖಾಲಿ ಇವೆ.

ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಕೆಪಿಎಸ್‌ಸಿ ಮೂಲಕ ಶೀಘ್ರದಲ್ಲಿ ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ ಎನ್ನುವ ಮಾಹಿತಿ ದೊರೆತಿದ್ದು, ಅಲ್ಲಿಯವರೆಗೂ ಇರುವ ಸಿಬ್ಬಂದಿಗಳಿಂದಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗುತ್ತದೆ. ಪುರಸಭೆಗೆ ಸಿಬ್ಬಂದಿ ನೇಮಕವಾಗುವವರೆಗೂ ನಾಗರಿಕರು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷ ಎಂ.ಸುಧೀರ್‌ ಮತ್ತು ಮುಖ್ಯಾಧಿಕಾರಿ ಎನ್‌.ಶಿವಲಿಂಗಪ್ಪ ತಿಳಿಸಿದರು.

Advertisement

ಕಳೆದ ಅನೇಕ ವರ್ಷಗಳಿಂದ ಪುರಸಭೆಗೆ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಸಿಬ್ಬಂದಿ ನೇಮಕ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕೂಡಲೇ ಪುರಸಭೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು.
ಎಂ.ಸುಧೀರ್‌,
ಪುರಸಭೆ ಅಧ್ಯಕ್ಷರು.

ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆಯಲ್ಲಿ ಖಾಲಿ ಇರುವ ಸಿಬ್ಬಂದಿ ಹುದ್ದೆಗಳನ್ನು ತುಂಬಬೇಕಾಗಿದೆ. ಇರುವ ಸಿಬ್ಬಂದಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಕೆಪಿಎಸ್‌ಸಿ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ಅಗತ್ಯ.
ಎನ್‌.ಶಿವಲಿಂಗಪ್ಪ,
ಪುರಸಭೆ ಮುಖ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next