ಲಕ್ನೋ: ಹಿಂದೂ ಮಹಾಸಭಾದ ಮಾಜಿ ನಾಯಕ, ಉತ್ತರಪ್ರದೇಶ ಸ್ಥಳೀಯ ಪಕ್ಷದ ಹಿಂದೂ ಸಮಾಜ್ ಪಾರ್ಟಿಯ ಅಧ್ಯಕ್ಷ ಕಮಲೇಶ್ ತಿವಾರಿ(45ವರ್ಷ)ಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಮ್ಮಿ ಪಠಾಣ್, ಫೈಝಾನ್ ಪಠಾಣ್ ಮತ್ತು ಮೌಲ್ವಿ ಮೋಹ್ಸಿನ್ ಶೇಕ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಶೂಟರ್ ಗಳನ್ನು ಫರೀದ್ ಉದ್ ದೀನ್ ಶೇಕ್ ಮತ್ತು ಅಶ್ಪಾಕ್ ಶೇಕ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ತಿವಾರಿ ಹತ್ಯೆಯ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಶುಕ್ರವಾರ ಮಧ್ಯಾಹ್ನ ಲಕ್ನೋದ ಖುರ್ಷಿದ್ ಬಾಗ್ ನಲ್ಲಿ ಹಿಂದೂ ಸಮಾಜ್ ಪಾರ್ಟಿಯ ಕಮಲೇಶ್ ತಿವಾರಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ತಿವಾರಿ ಹತ್ಯೆ ಹೊಣೆ ಹೊತ್ತ ಅಲ್ ಹಿಂದ್ ಬ್ರಿಗೇಡ್?
ಕಮಲೇಶ್ ತಿವಾರಿ ಹತ್ಯೆಯ ಹೊಣೆಯನ್ನು ಅಲ್ ಹಿಂದ್ ಬ್ರಿಗೇಡ್ ಹೊತ್ತುಕೊಂಡಿದೆ. ಈ ಬಗ್ಗೆ ಇನ್ನಷ್ಟೇ ಖಚಿತಗೊಳ್ಳಬೇಕಾಗಿದೆ ಎಂದು ವರದಿ ವಿವರಿಸಿದೆ. ಇಸ್ಲಾಂ ಹಾಗೂ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿದ್ದ ತಿವಾರಿಯನ್ನು ಹತ್ಯೆಗೈದಿರುವುದಾಗಿ ಎಲ್ಲೆಡೆ ಹರಿದಾಡುತ್ತಿರುವ ವಾಟ್ಸಪ್ ಸಂದೇಶದಲ್ಲಿ ಹೇಳಿದೆ.