Advertisement

ಕಂಬಾನೂರ ಹತ್ಯೆ ಪ್ರಕರಣ; ತೀವ್ರ ಕಾರ್ಯಾಚರಣೆ

02:42 PM Jul 13, 2022 | Team Udayavani |

ಶಹಾಬಾದ: ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಅವರನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಇಶಾಪಂತ್‌ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಕೊಲೆಗೆ ಸಂಬಂಧಿ ಸಿದಂತೆ ಕೊಲೆಗೆ ಬಳಸಿದ ಒಂದು ಆಟೋ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ಜಾಲಾಡಿದ್ದಾರೆ. ಪೊಲೀಸರ ಎರಡು ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಆರೋಪಿಗಳನ್ನು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಆರೋಪಿಗಳ ಮನೆಗೆ ಹೋಗಿ ಪರಿಶೀಲಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಎನ್ನಲಾಗಿದೆ. ಈ ಹಿಂದೆ ಮಾರಾಣಾಂತಿಕ ಹಲ್ಲೆ ನಡೆಸಿದ ವಿಜಯಕುಮಾರ ಹಳ್ಳಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಅವರನ್ನು ಹಿಡಿಯಲು ಬಲೆ ಬೀಸಲಾಗಿದೆ.

ಹಿಂದಿನ ಘಟನೆ: ಕಳೆದ ಮೂರು ವರ್ಷದ ಹಿಂದೆ ನಡೆದ ಘಟನೆಯ ಆರೋಪಿಯಾದ ವಿಜಯಕುಮಾರ ಹಳ್ಳಿ ಎನ್ನುವಾತ ಗಿರೀಶ ಕಂಬಾನೂರ ಅವರಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಲ್ಲದೆ ಎರಡು ವರ್ಷದ ಹಿಂದಷ್ಟೇ ಗಿರೀಶನ ಸಹೋದರ ಸತೀಶ ಕಂಬಾನೂರ ಅವರನ್ನು ಸಹಚರರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದ. ಆಗ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಆನಂತರ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಈ ಘಟನೆಗೆ ಹಳೆ ದ್ವೇಷವೇ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.

ಗಣ್ಯರಿಂದ ಅಂತಿಮ ದರ್ಶನ: ಗಿರೀಶ ಕಂಬಾನೂರ ಅವರ ಅಂತಿಮ ದರ್ಶನವನ್ನು ನಗರದ ಮಡ್ಡಿ ಪ್ರದೇಶದ ಅಂಬೇಡ್ಕರ್‌ ಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್‌ ಮುಖಂಡ ವಿಜಯಕುಮಾರ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಕಮಿಟಿಯ ಜಗದೇವ ಗುತ್ತೇದಾರ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ, ಕಮಲಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್‌, ಮುಖಂಡರಾದ ಮೃತ್ಯುಂಜಯ ಹಿರೇಮಠ, ರವಿ ಚವ್ಹಾಣ, ಸುರೇಶ ಮೆಂಗನ್‌, ಕೃಷ್ಣಪ್ಪ ಕರಣಿಕ್‌, ಅಜಿತ್‌ಕುಮಾರ ಪಾಟೀಲ, ಮಾಣಿಕ್‌ಗೌಡ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹಾಗೂ ಕಾಂಗ್ರೆಸ್‌ ಮುಖಂಡರು, ನಗರಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾವಿರಾರು ಜನರು ಅಂತಿಮ ದರ್ಶನ ಪಡೆದರು.

Advertisement

ಮುಗಿಲು ಮುಟ್ಟಿದ ಅಕ್ರಂದನ ಪತಿಯ ಶವ ಇಟ್ಟುಕೊಂಡು ಕಣ್ಣೀರಿಡುತ್ತಿದ್ದ ಪತ್ನಿ ಅಂಜಲಿ ಗಿರೀಶ ಕಂಬಾನೂರ ಹಾಗೂ ಸಹೋದರ ಅವಿನಾಶ ಕಂಬಾನೂರ, ತಾಯಿ, ಕುಟಂಬಸ್ಥರು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ನನ್ನ ಗಂಡನನ್ನು ಕೊಲೆ ಮಾಡಿದ ಆ ಪಾಪಿನ ಸುಮ್ನೆ ಬಿಡಬ್ಯಾಡ್ರಿ, ಅವಂಗ ಕಠಿಣ ಶಿಕ್ಷೆ ಕೊಡಸ್ರಿ. ನಮಗ ನ್ಯಾಯ ನೀಡ್ರಿ ಎಂದು ಅಂಜಲಿ ಕಂಬಾನೂರ ಮತ್ತು ರೈಲ್ವೆ ನಿಲ್ದಾಣದಾಗ ನೂರಾರು ಜನರಿದ್ರು ನನ್‌ ಮಗನಿಗಿ ಯಾರು ಉಳಿಸಿಲ್ಲ ಎಂದು ಗಿರೀಶನ ತಾಯಿ ಪೊಲೀಸರ ಎದುರು ಭಾವುಕರಾಗಿ ನುಡಿದರು. ಅಲ್ಲದೇ ಗಿರೀಶ ಅವರ ಓರ್ವ ಪುತ್ರ, ಇಬ್ಬರು ಪುತ್ರಿಯರಿಗೆ ನೆರೆದವರು ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next