Advertisement

ಕಂಬಳ: ಇನ್ನೂ ರಾಷ್ಟ್ರಪತಿ ಅಂಕಿತ ಬಿದ್ದಿಲ್ಲ

12:48 PM Apr 02, 2017 | Team Udayavani |

ಮಂಗಳೂರು: ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ನಿರೀಕ್ಷಿಸುತ್ತಾ ಈ ಬಾರಿಯ ಕಂಬಳ ಸೀಸನ್‌ ಬಹುತೇಕ ಮುಗಿಯುತ್ತಾ ಬಂದಿದೆ. ಕೊನೆಯ ಅವಧಿಯಲ್ಲಾದರೂ ಕೆಲವು ಕಂಬಳಗಳು ಆಯೋಜನೆಗೊಂಡು ಕೋಣಗಳು ಕರೆಗೆ ಇಳಿಯಬಹುದು ಎಂಬ ಕಂಬಳ ಪ್ರೇಮಿಗಳ ನಿರೀಕ್ಷೆ ಈ ಬಾರಿ ಪೂರ್ಣಗೊಳ್ಳಲೇ ಇಲ್ಲ.

Advertisement

ನೋ ಕಮೆಂಟ್ಸ್‌ ಗೊಂದಲ 
ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ ಫೆಬ್ರವರಿ 13ರಂದು ಕರ್ನಾಟಕ ವಿಧಾನಮಂಡಲದಲ್ಲಿ ಅನುಮೋದನೆಗೊಂಡು ರಾಜ್ಯಪಾಲರು ಅಂಕಿತಕ್ಕೆ ರವಾನೆಯಾಗಿತ್ತು. ಮಸೂದೆ ಕೇಂದ್ರ ಸರಕಾರದ ಪ್ರಾಣಿಹಿಂಸೆ ತಡೆ ಕಾಯ್ದೆ 1960ಕ್ಕೆ ತಿದ್ದುಪಡಿಯಾಗಿರುವುದರಿಂದ ರಾಜ್ಯಪಾಲರು ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಇದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರು. ಪ್ರಸ್ತುತ ಕೇಂದ್ರ ಸರಕಾರದ ಬಳಿ ಇದ್ದು ಈಗಾಗಲೇ ಕೇಂದ್ರ ಸಂಸ್ಕೃತಿ ಖಾತೆ, ಕಾನೂನು ಖಾತೆಯಿಂದ ನಿರಾಕ್ಷೇಪಣ ಪತ್ರ ಪಡೆದಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದಿಂದಾದ ಒಂದು ತಾಂತ್ರಿಕ ದೋಷದಿಂದ ಕಾನೂನು ಸಚಿವಾಲಯ ಇದನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸುವಲ್ಲಿ  ವಿಳಂಬಕ್ಕೆ ಕಾರಣವಾಗಿದೆ. ಉಳಿದ 2 ಖಾತೆಗಳು ಮಸೂದೆಗೆ ಅಕ್ಷೇಪಣೆ ಇಲ್ಲ ಎಂದು ದೃಢಪಡಿಸಿದ್ದರೆ ಅರಣ್ಯ ಮತ್ತು ಪರಿಸರ ಸಚಿವಾಲಯ ನೋ ಕಮೆಂಟ್ಸ್‌ ಎಂಬುದಾಗಿ ತಿಳಿಸಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು.

ಇದೀಗ ಈ ಗೊಂದಲ ಬಗೆ ಹರಿದಿದ್ದು ಕಾನೂನು ಸಚಿವಾಲಯದಿಂದ ಗೃಹಸಚಿವಾಲಯಕ್ಕೆ ಬಂದಿದೆ. ಅಲ್ಲಿಂದ ರಾಷ್ಟ್ರಪತಿಯವರ ಅಂಕಿತಕ್ಕೆ ರವಾನೆಯಾಗುತ್ತದೆ. ಪರಿಸರ ಮತ್ತು ಅರಣ್ಯ ಇಲಾಖೆಯಲ್ಲಿ ಆದ ಗೊಂದಲ ಹಾಗೂ 5 ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯಲ್ಲಿ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.

ಸೀಸನ್‌ ಮುಗಿಯಿತು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಕಂಬಳ ಸೀಸನ್‌. ಕಂಬಳ ಸಮಿತಿ ಅಧೀನದಲ್ಲಿ ಜಿಲ್ಲೆಯಲ್ಲಿ 18 ಕಂಬಳಗಳ ಆಯೋಜನೆಗೆ ವೇಳಾಪಟ್ಟಿ ನೀಡಲಾಗುತ್ತಿದ್ದು ಇದರಂತೆ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಂಬಳಗಳು ನಡೆಯುತ್ತವೆ. ಇದಲ್ಲದೆ ಸಾಂಪ್ರದಾಯಿಕ ಹಾಗೂ ದೇವರ ಕಂಬಳಗಳು ಸೇರಿ ಸುಮಾರು 100ಕ್ಕೂ ಅಧಿಕ ಕಂಬಳಗಳು ಉಭಯ ಜಿಲ್ಲೆಗಳಲ್ಲಿ ಜರಗುತ್ತವೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈ ಬಾರಿ ಕಂಬಳಗಳು ಪ್ರಾರಂಭವಾಗಲಿಲ್ಲ. ಫೆ. 13ಕ್ಕೆ ಮಸೂದೆ ಅಂಗೀಕಾರಗೊಂಡ ಬಳಿಕ ರಾಜ್ಯಪಾಲರ ಅಂಗೀಕಾರ ದೊರಕಿ ಜಾರಿಗೆ ಬಂದಿದ್ದರೆ ಕನಿಷ್ಠ ಪಕ್ಷ 4ರಿಂದ 6 ಕಂಬಳಿಗಳಿಗೆ ಅವಕಾಶವಾಗುತ್ತಿತ್ತು. ಆದರೆ ರಾಷ್ಟ್ರಪತಿಗಳಿಗೆ ರವಾನೆಯಾದ ಹಿನ್ನೆಲೆಯಲ್ಲಿ ಈ ನಿರೀಕ್ಷೆ ಸಾಧ್ಯವಾಗಿಲ್ಲ.

ಬಿಸಿಲಿನ ತೀವ್ರತೆ ಅಡ್ಡಿ 
ಮಾರ್ಚ್‌ ಅಂತ್ಯದ ಬಳಿಕ ಬಿಸಿಲಿನ ತೀವ್ರತೆ ಜಾಸ್ತಿ ಇರುವುದರಿಂದ ಕೋಣಗಳಿಗೆ ಓಡಲು ಕಷ್ಟವಾಗುತ್ತದೆ. ಇದಲ್ಲದೆ ಅವುಗಳ ಆರೋಗ್ಯದ ಮೇಲೂ ಪರಿಣಾಮಗಳಾಗುತ್ತವೆ. ಇದರ ಜತೆಗೆ ಕಂಬಳ ಆಯೋಜನೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಮಾರ್ಚ್‌ ಅಂತ್ಯದ ಬಳಿಕ ನೀರಿನ ಸಮಸ್ಯೆ ತೀವ್ರವಾಗುವುದರಿಂದ ಆಯೋಜನೆಗೆ ಸಮಸ್ಯೆ ಎದುರಾಗುತ್ತದೆ ಎಂದು ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯ ಕುಮಾರ್‌ ಕಂಗೀನಮನೆ.

Advertisement

ಜಾರಿಗೆ ಬಂದರೆ 3 ಕಂಬಳಗಳ ಸಾಧ್ಯತೆ
ಎಪ್ರಿಲ್‌ 10ರೊಳಗೆ ರಾಷ್ಟ್ರಪತಿಯವರ ಅಂಗೀಕಾರ ದೊರೆತು ಮಸೂದೆ ಜಾರಿಗೆ ಬಂದರೆ ನೀರು ಸೌಲಭ್ಯ ಇರುವ ಉಪ್ಪಿನಂಗಡಿ, ವೇಣೂರು ಹಾಗೂ ಬಂಗಾಡಿ ಕಂಬಳಗಳನ್ನು ಆಯೋಜಿಸಲು ಅವಕಾಶಗಳಿವೆ. ಶೀಘ್ರ ಅಂಗೀಕಾರ ಲಭಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಿವೆ ಎಂದು ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ  ಹೇಳಿದ್ದಾರೆ.

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಲಭ್ಯತೆ ಇರುವ ಕಾರಣ ಇಲ್ಲಿ ಎಪ್ರಿಲ್‌ ಕೊನೆ ವರೆಗೆ ಕಂಬಳ ಆಯೋಜನೆಗೆ ಅವಕಾಶಧಿವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಅಂಗೀಕಾರ ಪಡೆದು ಮಸೂದೆ ಜಾರಿಗೆ ಬಂದರೆ ಎಪ್ರಿಲ್‌ ಮಧ್ಯಭಾಗದ ವರೆಗೆ ಇಲ್ಲಿ ಕಂಬಳ ಆಯೋಜನೆಗೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಕಂಬಳದ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ಈಗಾಗಲೇ ಮಸೂದೆ ಕಾನೂನು ಸಚಿವಾಲಯದಿಂದ ಅನುಮೋದನೆ ಪಡೆದು ಗೃಹಸಚಿವಾಲಯಕ್ಕೆ ಹೋಗಿದ್ದು ಅಲ್ಲಿಂದ ರಾಷ್ಟ್ರಪತಿಯವರಿಗೆ ಹೋಗಲಿದೆ ಎಂಬುದಾಗಿ ಮಾಹಿತಿ ಬಂದಿದೆ. ಕರ್ನಾಟಕದ ರಾಜ್ಯಪಾಲ ವಜೂಭಾç ರುಡಾಭಾç ವಾಲಾ ಅವರನ್ನು ಭೇಟಿಯಾಗಿ ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಗೀಕಾರ ಶೀಘ್ರ ದೊರೆಯುವ ನಿಟ್ಟಿನಲ್ಲಿ ಪೂರಕ ಅಭಿಪ್ರಾಯಗಳನ್ನು ನೀಡುವಂತೆ ಮನವಿ ಮಾಡಿದ್ದೇನೆ. 
– ಅಶೋಕ್‌ ಕುಮಾರ್‌ ರೈ, ಕಂಬಳ ಕಾನೂನು ಹೋರಾಟಗಾರ 

Advertisement

Udayavani is now on Telegram. Click here to join our channel and stay updated with the latest news.

Next