Advertisement

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

03:37 AM Nov 10, 2024 | Team Udayavani |

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ ತುಳುನಾಡಿನ ಅಸ್ಮಿತೆ. ಕರಾವಳಿಯಾದ್ಯಂತ ಲಕ್ಷಾಂತರ ಮನಸುಗಳ ಮನ ಸೆಳೆದ ಭಕ್ತಿ ಭಾವದ ಕಂಬಳಕ್ಕೆ ಅಗ್ರಸ್ಥಾನ. ಕರಾವಳಿಗರ ಭಾವನೆಗಳ ಜತೆ ಮಿಳಿತವಾದ ಕಂಬಳದ ತುಡಿತವನ್ನು ಸರಕಾರವೂ ಗಮನಹರಿಸಿ ಜಿಲ್ಲಾಡಳಿತದ ನೇತೃತ್ವದಲ್ಲಿ ಆಯೋಜಿಸಿದ ಕಂಬಳವೇ ಪಿಲಿಕುಳ ಕಂಬಳ.

Advertisement

ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿರುವ ಸಂಸ್ಕೃತಿ ಗ್ರಾಮದ ಗುತ್ತುಮನೆಯ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ “ನೇತ್ರಾವತಿ-ಫಲ್ಗುಣಿ’ ಜೋಡುಕರೆ ಕಂಬಳ ಆರಂಭವಾಗಿದ್ದು 2008 ರಲ್ಲಿ. ಬಳಿಕ 2014 ರವರೆಗೆ ಸಾಗಿತ್ತು. ಕಾನೂ ನಾತ್ಮಕ ತೊಡಕು ಎದುರಾಗಿ ಇಲ್ಲಿನ ಜೋಡುಕರೆಯಲ್ಲಿ ಕೋಣಗಳ ಓಟಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಹತ್ತು ವರ್ಷಗಳ ಬಳಿಕ ಇದೀಗ ನ. 17 ಹಾಗೂ ನ.18ರಂದು ಪಿಲಿಕುಳದ ಜೋಡು ಕರೆಯಲ್ಲಿ ಕೋಣಗಳ ಗತ್ತಿನ ಓಟ ಕಣ್ತುಂಬಿ ಕೊಳ್ಳಬಹುದು.

ಪಿಲಿಕುಳ ಕಂಬಳ ಈ ಬಾರಿ ಮರು ಆರಂಭಕ್ಕೆ ಅಣಿಯಾಗುತ್ತಿದ್ದಂತೆ ಇಲ್ಲಿ ಕರೆಗಳ ಮರುಸಜ್ಜುಗೊಳಿಸುವಿಕೆ ಭರ ದಿಂದ ನಡೆದಿದೆ. ಕಂಬಳ ನಡೆಸದೆ ಇರುವ ಕಾರಣ ಕರೆಗಳಲ್ಲಿ ಹೂಳು ತುಂಬಿ, ಗಿಡ-ಗಂಟಿ ಬೆಳೆದು, ಸಂಪೂರ್ಣವಾಗಿ ಪಾಳುಬಿದ್ದ ಸ್ವರೂಪದಲ್ಲಿತ್ತು. ಕರೆಯ ಮರುನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥೆ ಮುಂತಾದ ಕಾರ್ಯ ಭರದಿಂದ ನಡೆಯುತ್ತಿದೆ.

ಸೆ.4 ರಂದು ನೂತನ ಕರೆಗೆ ಮುಹೂರ್ತ ನಡೆದಿತ್ತು. ಈ ಕರೆ 133 ಮೀ. (180 ಕೋಲು) ಉದ್ದವಿದೆ. ಸುಮಾರು 11 ಸಾವಿರ ಕೆಂಪುಕಲ್ಲು 60 ಲೋಡ್‌ ಮರಳು ಹಾಗೂ ಜಲ್ಲಿ ಹುಡಿ ಬಳಸಿ ಕಂಬಳ ಗದ್ದೆ ಸಿದ್ದಪಡಿಸಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಂಬಳ ಸಿದ್ದತೆ ನಡೆಸುತ್ತಿದ್ದಾರೆ. ಗ್ರಾಮೀಣ ಸೊಗಡಿನ ಚಾವಡಿಯನ್ನು ಹೋಲುವ ಶಾಶ್ವತ ವೇದಿಕೆ ಹಾಗೂ ತೀರ್ಪುಗಾರರಿಗೆ ಎರಡು ಕಡೆ ಪ್ರತ್ಯೇಕ ಕೊಠಡಿಗಳನ್ನು ಮುಡಾ ವತಿಯಿಂದ ನಿರ್ಮಿಸಲಾಗುತ್ತಿದೆ. ಕಂಬಳ ಗದ್ದೆಯ ಮುಂಭಾಗ ಕೋಣಗಳ ಓಡಾಟಕ್ಕೆ ಸ್ಥಳ, ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ವಾಹನ ಪಾರ್ಕಿಂಗ್‌ ಹೊಣೆಯನ್ನು ಮಂಗಳೂರು ಪಾಲಿಕೆ ನಿರ್ವಹಿಸಲಿದೆ.

ಸರ್ವ ತಯಾರಿ
ಪ್ರಾರಂಭಿಕ ಸಿದ್ಧತೆ ನಡೆಸಲಾಗುತ್ತಿದೆ. ಕೋಣಗಳ ಓಟಕ್ಕೆ ಪರಿಪಕ್ವವಾಗುವ ನೆಲೆಯಲ್ಲಿ ಕರೆ ನಿರ್ಮಿಸಲಾಗಿದೆ. ಬಹುನಿರೀಕ್ಷಿತ ಪಿಲಿಕುಳ ಕಂಬಳದ ಬಗ್ಗೆ ಸರ್ವರಿಗೂ ಬಹಳ ಕುತೂಹಲವಿದೆ ಎನ್ನುತ್ತಾರೆ ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ನವೀನ್‌ ಚಂದ್ರ ಆಳ್ವ.

Advertisement

ನ.13ರಂದು ಪಿಲಿಕುಳ ಕುದಿ
“ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸ್ಪೀಕರ್‌ ಯು.ಟಿ. ಖಾದರ್‌, ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವಿ. ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಉಮಾನಾಥ ಕೋಟ್ಯಾನ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಡಾ|ಎಂ. ಮೋಹನ್‌ ಆಳ್ವ ಸಹಿತ ಹಲವು ಪ್ರಮುಖರು ಸಹಕರಿಸಿದ್ದಾರೆ. ನ.13 ರಂದು ಕಂಬಳದ ಪೂರ್ವಭಾವಿ ಕುದಿ ನಡೆಯಲಿದೆ. ಆ ದಿನ ಪ್ರಾಯೋಗಿಕವಾಗಿ ಕೆಲವು ಜೋಡಿ ಕೋಣಗಳನ್ನು ಓಡಿಸಲಾ ಗುವುದು. ಕಂಬಳ ಸಮಿತಿಗೆ 2 ಎಕ್ರೆ ಜಾಗ ನಿರೀಕ್ಷಿಸಿದ್ದು, ಕಂಬಳ ಭವನ, ತರಬೇತಿ ಕೇಂದ್ರವನ್ನು ನಡೆಸಲು ಸರಕಾರದಿಂದ ಅವಕಾಶ ಕೋರಲಾಗಿದೆ’ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

2008 ಮೊದಲ ಕಂಬಳ!
“ಪಿಲಿಕುಳ ಕಂಬಳ 2008ರಲ್ಲಿ ಆರಂಭವಾಗಿತ್ತು. ನಮ್ಮ ನೆಲದ ಸಂಸ್ಕೃತಿಯನ್ನು ಜೀವಂತವಾಗಿಡುವ ನೆಲೆಯಿಂದ ಈ ಪರಿಕಲ್ಪನೆ ನಡೆದಿತ್ತು. ಗುಡ್ಡದಂತಹ ಜಾಗವನ್ನು ಸಮತಟ್ಟು ಮಾಡಿ ಕಂಬಳ ಗದ್ದೆಯಾಗಿ ಅಂದಿನ ಕಾಲದಲ್ಲಿ ನಡೆಸಲಾಗಿತ್ತು. ಹಲವು ಮಂದಿ ಸಹಕರಿಸಿದ್ದರು. ಬಳಿಕ ಕಂಬಳ 2014ರವರೆಗೆ ನಿಯಮಿತವಾಗಿ ನಡೆಯುತ್ತ ಬಂದಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಪಿಲಿಕುಳದಲ್ಲಿ ಕಾರ್ಯಕಾರಿ ನಿರ್ದೇಶಕರಾಗಿದ್ದ ಮಾಜಿ ಶಾಸಕ ಜೆ.ಆರ್‌.ಲೋಬೋ.

2014ರಲ್ಲಿ ನಡೆದಿತ್ತು ಕೊನೆಯ ಕಂಬಳ!
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನ ಮನೆಯ ಮುಂಭಾಗದಲ್ಲಿರುವ “ನೇತ್ರಾವತಿ-ಫಲ್ಗುಣಿ’ ಜೋಡುಕರೆಯಲ್ಲಿ ಕಂಬಳ ವಿಜೃಂಭಣೆಯಿಂದ ನಡೆದಿದ್ದು 85 ಜತೆ ಕೋಣಗಳು ಪಾಲ್ಗೊಂಡಿದ್ದವು. ಆದರೆ ಆ ಬಳಿಕ ಕಂಬಳದ ವಿರುದ್ಧ ಪೆಟಾ ಸಂಸೆœ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಬಳಿಕ ಕಾನೂನಿಗೆ ತಿದ್ದುಪಡಿ ತಂದು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಆದರೂ ಪಿಲಿಕುಳ ಕಂಬಳಕ್ಕೆ ಕಾಲ ಕೂಡಿಬಂದಿರಲಿಲ್ಲ. ಬಳಿಕ ಜಿಲ್ಲಾಡಳಿತ ಕಂಬಳ ನಡೆಸಲು ನಿರ್ಧರಿಸಿದ್ದರೂ ಅನುದಾನ ದೊರೆಯದೆ ಬಾಕಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next