Advertisement

ಕಂಬಳ 24 ತಾಸಿನೊಳಗೆ ಮುಕ್ತಾಯ ನಿಯಮ ಕಟ್ಟುನಿಟ್ಟಿಗೆ ಚಿಂತನೆ

09:08 AM Mar 05, 2020 | mahesh |

ಮಂಗಳೂರು: ಕಂಬಳವನ್ನು 24 ತಾಸಿನೊಳಗೆ ಮುಕ್ತಾಯ ಗೊಳಿಸಬೇಕು ಎನ್ನುವ ಸರಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಕಂಬಳ ಸಮಿತಿ ತೀರ್ಮಾನಿಸಿದೆ.

Advertisement

ಫೆ. 29ರಂದು ಆಯೋಜನೆ ಗೊಂಡಿದ್ದ ಉಪ್ಪಿನಂಗಡಿ ಕಂಬಳ ಮತ್ತು ಇದಕ್ಕೂ ಮುನ್ನ ಒಂದೆರಡು ಕಂಬಳಗಳು ನಿಗದಿಗಿಂತ ಹೆಚ್ಚು ಕಾಲ ನಡೆದಿವೆ ಎನ್ನಲಾಗಿದೆ. ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆಯ ಮೂಲಕ ಕಂಬಳ ಆಯೋಜನೆಗೆ ಅನುವು ಮಾಡಿಕೊಟ್ಟ ಸಂದರ್ಭದಲ್ಲಿ ಸರಕಾರವು ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿತ್ತು. ಅವುಗಳಲ್ಲಿ ಕಂಬಳವನ್ನು 24 ತಾಸುಗಳೊಳಗೆ ಮುಕ್ತಾಯಗೊಳಿಸಬೇಕು ಮತ್ತು ಬಿಸಿಲಿನಲ್ಲಿ ಕೋಣಗಳನ್ನು ಓಡಿಸಬಾ ರದು ಎಂಬುದು ಪ್ರಮುಖ.

ಮಸೂದೆ ವಿರುದ್ಧ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಕಂಬಳವನ್ನು ನಿಗದಿತ ಅವಧಿಯೊಳಗೆ ಮುಗಿಸುವುದಿಲ್ಲ; ಕೋಣಗಳನ್ನು ಬಿಸಿಲಿನಲ್ಲಿ ಓಡಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ ಎಂಬ ಅಂಶಗಳನ್ನು ಉಲ್ಲೇಖೀಸಿದೆ. ಅರ್ಜಿ ಪ್ರಸ್ತುತ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದಲ್ಲಿದೆ. ಹೀಗಾಗಿ ನಿಯಮ ಪಾಲನೆಯಾ ಗುವಂತೆ ಮತ್ತು ಗೊಂದಲಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಲು ಸಮಿತಿ ನಿರ್ಧರಿಸಿದೆ.

ವಿಳಂಬ ಮುಂದುವರಿದರೆ ಕಂಬಳಕ್ಕೆ ತೊಡಕಾಗುವ ಸಾಧ್ಯತೆ ಮನಗಂಡಿ ರುವ ಕಂಬಳ ಸಮಿತಿಯು ಈ ಹಿಂದೆ ಭಾಸ್ಕರ ಎಸ್‌. ಕೋಟ್ಯಾನ್‌ ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ ರೂಪಿಸಿದ್ದ ನಿಯಮಗಳನ್ನು ಮುಂದಿನ ಋತುವಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚಿಂತಿಸಿದೆ.

ನಿಯಮಗಳು
ಭಾಸ್ಕರ ಎಸ್‌. ಕೋಟ್ಯಾನ್‌ ಅಧ್ಯಕ್ಷತೆ, ಸುರೇಶ್‌ ಪೂಜಾರಿ ಅವರ ಕಾರ್ಯದರ್ಶಿತ್ವ ಮತ್ತು ಸೀತಾರಾಮ ಶೆಟ್ಟಿ ಅವರ ಸಂಚಾಲಕತ್ವದ ವೇಳೆ 2014 ಫೆ. 27ರಂದು ಮೂಡುಬಿದಿರೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಕಂಬಳ ಸಮಿತಿ ಸದಸ್ಯರು ಕೆಲವು ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಬೆಳಗ್ಗೆ 9 ಗಂಟೆಯೊಳಗೆ ಎಲ್ಲ ಕೋಣಗಳು ಕಂಬಳ ತಾಣಕ್ಕೆ ಬರಬೇಕು, 10 ಗಂಟೆಗೆ ಕಂಬಳ ಕರೆಗೆ ಇಳಿಯಬೇಕು, ಗಂತಿನಲ್ಲಿ ಪ್ರತಿಯೊಂದು ಕೋಣಕ್ಕೆ ಓಟಕ್ಕೆ ಸಮಯಮಿತಿ, ಪ್ರತೀ ವಿಭಾಗದ ಕೋಣಗಳು ಕರೆಗೆ ಇಳಿಯಲು ನಿರ್ದಿಷ್ಟ ವೇಳಾಪಟ್ಟಿ ನಿಗದಿ ಮುಂತಾದ ಅಂಶಗಳು ನಿರ್ಣಯದಲ್ಲಿವೆ.

Advertisement

ಸಭಾ ಕಾರ್ಯಕ್ರಮದ ಅಡಚಣೆ‌
ವಿಳಂಬ ಪ್ರಾರಂಭ ಒಂದೆಡೆಯಾದರೆ ಸುದೀರ್ಘ‌ ಸಭೆಯಿಂದಾಗಿ ನಿಗದಿತ ಅವಧಿಯೊಳಗೆ ಕಂಬಳ ಮುಗಿಸಲು ಅಡಚಣೆಯಾಗುತ್ತಿದೆ. ಸಭೆಯನ್ನು 30 ನಿಮಿಷದಿಂದ 1 ತಾಸಿಗೆ ಸೀಮಿತ ಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ಇದೆ.

ಕಂಬಳವನ್ನು 24 ತಾಸುಗಳೊಳಗೆ ಮುಕ್ತಾಯಗೊಳಿಸಲು ಈ ಹಿಂದೆ ಕಂಬಳ ಸಮಿತಿ ಅಂಗೀಕರಿಸಿದ್ದ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಗಂತಿನಲ್ಲಿ ಕೋಣಗಳನ್ನು ಬಿಡುವ ಮತ್ತು ಮಂಜೊಟ್ಟಿಯಲ್ಲಿ ಕೋಣಗಳು ತಲುಪುವ ಸಮಯ ದಾಖಲಾತಿಗೂ ಈಗಿರುವ ವ್ಯವಸ್ಥೆಯನ್ನು ಉತ್ತಮಪಡಿಸುವ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ.
– ಪಿ.ಆರ್‌. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷರು

ನಾನು ಅಧ್ಯಕ್ಷನಾಗಿದ್ದ ವೇಳೆ ವಿಶೇಷ ಸಭೆ ನಡೆಸಿ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಕೋಣಗಳ ಯಜಮಾನರು, ಆಯೋಜಕರು, ತೀರ್ಪು ಗಾರರು, ಕೋಣ ಬಿಡಿಸುವವರ ಸಹಕಾರದಿಂದ ಇದು ಯಶಸ್ವಿಯಾಗಿತ್ತು. ಕಂಬಳ 16ರಿಂದ 18 ತಾಸುಗಳೊಳಗೆ ಮುಕ್ತಾಯಗೊಂಡಿರುವ ನಿದರ್ಶನಗಳಿವೆ.
– ಭಾಸ್ಕರ ಎಸ್‌. ಕೋಟ್ಯಾನ್‌ ಇರ್ವತ್ತೂರು, ಕಂಬಳ ಸಮಿತಿ ಮಾಜಿ ಅಧ್ಯಕ್ಷರು

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next