ಬೆಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳದ ಓಟ ಆಯೋಜನೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಂಬಳ ಸಮಿತಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಆರ್.ಬಿ.ಬೂದಿಹಾಳ್ ಅವರಿರುವ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಲಿದೆ.
ಕಂಬಳ ಓಟವನ್ನು ಕಾನೂನುಬದ್ಧ ಗೊಳಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಕಂಬಳ ಕ್ರೀಡೆ ಆಯೋಜನೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯು ವಿಚಾರಣೆ ಸಾಕಷ್ಟು ಕುತೂಹಲ ಹಾಗೂ ಗಮನ ಸೆಳೆದಿದೆ.
ಪ್ರಕರಣವೇನು?: ರಾಜ್ಯದಲ್ಲಿ ಕಂಬಳ ಕ್ರೀಡೆಗೆ ನಿಷೇಧ ಹೇರುವಂತೆ ಕೋರಿ “ಪೀಪಲ್ ಫಾರ್ ಎಥಿಕಲ್ ಟ್ರೀಟೆoಟ್ ಆಫ್ ಅನಿಮಲ್ಸ್ (ಪೆಟಾ)’ 2016ರ ಫೆ.16ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ಮುಗಿಯುವವರೆಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು 2016ರ ನ.22ರಂದು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಸದ್ಯ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಕಂಬಳಕ್ಕೆ ಅನುಮತಿ ನೀಡುವಂತೆ ಕೋರಲಾಗಿದೆ. ಈ ಮಧ್ಯೆ ಜನವರಿ 20ರಂದು ಅರ್ಜಿ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾ.ಮುದಗಲ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆ ಪೀಠವು ಮತ್ತೂಂದು ಪೀಠಕ್ಕೆ ಅರ್ಜಿ ವಿಚಾರಣೆ ನಡೆಸಿತ್ತು. ಅದರಿಂದ ಜ.20ರಂದು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು.
ಆದರೆ, ಈ ಪ್ರಕರಣ ಕುರಿತು ಮೂಲ ಅರ್ಜಿ ಯನ್ನು ಈವರೆಗೂ ವಿಚಾರಣೆ ನಡೆಸಿ, ಕಂಬಳ ಕ್ರೀಡೆ ಆಯೋಜನೆಗೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿ ರುವ ಕಾರಣ ಆ ಪೀಠವೇ ಈ ಮಧ್ಯಂತರ ಅರ್ಜಿ ವಿಚಾರಣೆಯನ್ನೂ ನಡೆಸಲಿ ಎಂದು ತಿಳಿಸಿ ಜ.30ಕ್ಕೆ ವಿಚಾರಣೆಯನ್ನು ಮುಂದೂಡಿತು. ಹೀಗಾಗಿ, ಮಧ್ಯಂತರ ಅರ್ಜಿ ಸೋಮವಾರ ಮುಖ್ಯ ನ್ಯಾಯ ಮೂರ್ತಿ ಮುಖರ್ಜಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.