ವೇಣೂರು: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ ಅವರು ಹೊಸ ದಾಖಲೆ ಬರೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದ ಸೂರ್ಯ – ಚಂದ್ರ ಜೋಡುಕರೆ ಕಂಬಳದಲ್ಲಿ ಈ ಹಿಂದಿನ ಎಲ್ಲಾ ದಾಖಲೆಯನ್ನು ಪುಡಿ ಮಾಡಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು ಓಡಿಸಿದ ಶ್ರೀನಿವಾಸ ಗೌಡ ಕೇವಲ 11.21 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದರು. 100 ಮೀಟರ್ ಗೆ ಹೋಲಿಸಿದಾಗ 8.96 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದಂತಾಗಿದ್ದು, ಇದು ಹೊಸ ದಾಖಲೆಯಾಗಿದೆ.
ಇದನ್ನೂ ಓದಿ:ಬೆಟ್ಟದಿಂದ ಬೆಟ್ಟಕ್ಕೆ ನೆಗೆಯುವ ಪರ್ವತ ಮೇಕೆಗಳ ಬಗ್ಗೆ ನಿಮಗೆಷ್ಟು ಗೊತ್ತು..!
ಕಳೆದ ಫೆ.6ರಂದು ನಡೆದ ಐಕಳ ಕಂಬಳದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿಯವರ ಕೋಣಗಳನ್ನು ಓಡಿಸಿದ್ದ ಬೈಂದೂರು ವಿಶ್ವನಾಥ 9.15 ಸೆಕೆಂಡ್ ನಲ್ಲಿ (100 ಮೀಟರ್ ಗೆ) ಓಡಿಸಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇಂದು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅಳಿಸಿ ಹಾಕಿದ್ದಾರೆ.
2020ರಲ್ಲಿ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 9.55 ಸೆಕೆಂಡ್ಸ್ ಗೆ ಗುರಿ ತಲುಪಿ ದಾಖಲೆ ಬರೆದಿದ್ದರು. ನಂತರ ಅಕ್ಕೇರಿ ಸುರೇಶ್ ಶೆಟ್ಟಿ 9.37 ಸೆಕೆಂಡ್, ಇರ್ವತ್ತೂರು ಆನಂದ 9.57 ಸೆಕೆಂಡ್ ನಲ್ಲಿ ಓಡಿಸಿ ದಾಖಲೆ ಮಾಡಿದ್ದರು. ಇದೀಗ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಅಂದಹಾಗೆ ವಿಶ್ವಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಇರುವುದು 9.58 ಸೆಕೆಂಡ್ಸ್.