Advertisement

ಅಧ್ಯಾದೇಶ ವಜಾಕ್ಕೆ ಆಗ್ರಹ: ಕಂಬಳಕ್ಕೆ ಮತ್ತೆ ಕಂಟಕ?

06:00 AM Nov 13, 2017 | Harsha Rao |

ಮಂಗಳೂರು: ವರ್ಷದ ಬಳಿಕ ಮೂಡಬಿದಿರೆಯಲ್ಲಿ ಶನಿವಾರ ನಡೆದ ಕಂಬಳದಲ್ಲಿ ಕೋಣಗಳಿಗೆ ಹಿಂಸಾತ್ಮಕವಾಗಿ ಹೊಡೆಯಲಾಗಿದೆ ಎಂದು ಆರೋಪಿಸಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್ಸ್‌) ಸಂಘಟನೆ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಲು ನಿರ್ಧರಿಸಿದ್ದು, ಇದರಿಂದ ಕಂಬಳಕ್ಕೆ ಮತ್ತೂಮ್ಮೆ ವಿಘ್ನ ಎದುರಾಗುವ ಸಾಧ್ಯತೆ ಇದೆ. 

Advertisement

ಶನಿವಾರ ಮೂಡಬಿದಿರೆಯ ಕಡಲಕೆರೆ ನಿಸರ್ಗಧಾಮದ ಬಳಿ ನಡೆದ ಕೋಟಿ-ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳದ ಸಮಗ್ರ ದೃಶ್ಯಾವಳಿಯನ್ನು ಪೆಟಾ ಸಂಘಟನೆ ವೀಡಿಯೋ ಮತ್ತು ಫೋಟೊ ಮೂಲಕ ಚಿತ್ರೀಕರಿಸಿದ್ದು, ಕೋಣಗಳನ್ನು ಓಡಿಸುವಾಗ ಕ್ರೂರವಾಗಿ ಹೊಡೆಯಲಾಗಿದೆ ಎನ್ನಲಾದ 5 ಫೋಟೊಗಳನ್ನು  ಸುಪ್ರೀಂ ಕೋರ್ಟಿಗೆ ಸಲ್ಲಿಸಲು ನಿರ್ಧರಿಸಿದೆ.

ಈ ನಡುವೆ ಕಂಬಳಕ್ಕೆ ಅನುಮತಿ ನೀಡಿ ಕರ್ನಾಟಕ ಸರಕಾರ ಹೊರಡಿಸಿದ ಅಧ್ಯಾದೇಶ ವಜಾಗೊಳಿಸಬೇಕೆಂದು ಕೋರಿ ಪೆಟಾ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಪೆಟಾದ ಈ ಅರ್ಜಿಯನ್ನು ನ. 6ರಂದು ಸ್ವೀಕರಿಸಿದ್ದ ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ, ರಾಜ್ಯ (ಕರ್ನಾಟಕ) ಸರಕಾರಗಳಿಗೆ ನೋಟಿಸ್‌ ಜಾರಿ ಮಾಡಿತ್ತು. 

ನ. 11ರಂದು ನಡೆದ ಕಂಬಳ ದಲ್ಲಿ  ಕೋಣಗಳನ್ನು ಹೊಡೆದು ಹಿಂಸೆ ನೀಡಿರುವುದು ಮನದಟ್ಟಾಗಿದೆ ಎಂದು ಪೆಟಾ ಸಂಘಟನೆಯ ಮುಖಂಡ ನಿಕುಂಜ್‌ ಶರ್ಮ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೂರರಷ್ಟು ಕೋಣಗಳನ್ನು ಭಾಗವಹಿಸು ವಂತೆ ಬಲವಂತಪಡಿಸಲಾಗಿದೆ. ಅವುಗಳಿಗೆ ಬೆತ್ತದಿಂದ ಹೊಡೆದು ಬಾಲ ಎಳೆಯಲಾಗಿದೆ. ಕೆಲವು ಕೋಣಗಳಿಗೆ ಓಟದಲ್ಲಿ ಭಾಗವಹಿಸುವ ಮೊದಲೇ ಹೊಡೆದಿರುವುದು ಅವುಗಳ ಶರೀರದ ಮೇಲೆ ಕಂಡು ಬಂದ ಗಾಯದ ಕಲೆಗಳು ಸೂಚಿಸುತ್ತವೆ. 

Advertisement

ಗಾಯಗೊಂಡಿದ್ದ ಕೋಣಗಳನ್ನು ಕೂಡ ಓಟಕ್ಕೆ ಬಳಸಲಾಗಿದೆ. ಓಟ ಮುಗಿಸಿದ ಕೋಣಗಳು ಉಸಿರಾಟಕ್ಕೂ ಕಷ್ಟಪಡುವ ಸ್ಥಿತಿಯಲ್ಲಿದ್ದವು. ಐದಾರು ಜನ ಕೋಣಗಳನ್ನು ಹೊಡೆದು, ಅವುಗಳ ಮೂಗುದಾರ ಹಿಡಿದೆಳೆದು ತಮ್ಮ ನಿಯಂತ್ರಣಕ್ಕೆ ತರಲು ಯತ್ನಿಸಿದ್ದು, ಇದರಿಂದ ಅವುಗಳು ತೀವ್ರ ಒತ್ತಡದಲ್ಲಿ ಸಿಲುಕಿದಂತೆ ಕಂಡು ಬಂದಿವೆ.

ಕೋಣಗಳನ್ನು ಬಲವಂತವಾಗಿ ಎಳೆದು ಕೆಸರಿನ ಗದ್ದೆಗೆ ಇಳಿಸಲಾಗಿದೆ. ಕೆಲವು ಕೋಣಗಳಿಗೆ 2- 2.5 ದಪ್ಪದ ಎರಡು ಮೂರು ಸುತ್ತು ಗಟ್ಟಿಯಾಗಿ ಬಿಗಿದ ದಾರಗಳನ್ನು ಮೂಗಿನ ಹೊಳ್ಳೆಗಳಿಗೆ ತುರುಕಿ ಅಧಿಕ ನೋವು ಉಂಟು ಮಾಡಲಾಗಿದೆ. ಕೋಣಗಳಿಗೆ ಸುಪ್ರೀಂ ಕೋರ್ಟ್‌ ನಿಂದ ಸಂಪೂರ್ಣ ರಕ್ಷಣೆಗೆ ಆವಶ್ಯಕತೆ ಇದೆ ಎಂದು ಪೆಟಾ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next