Advertisement
ಕಂಬಳ, ಹೋರಿ ಓಟ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗೆ ಅವಕಾಶವಾಗುವಂತೆ ಪ್ರಾಣಿಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ 2017 ವಿಧಾನಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್‌ಗೆ ಹೋಗಿದ್ದು ಅಲ್ಲಿ ಮಂಗಳವಾರ ಅಂಗೀಕೃತಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಸಾಮಾನ್ಯವಾಗಿ ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ನವೆಂಬರ್ ತಿಂಗಳ ಕೊನೆಯ ವಾರದಿಂದ ಮಾರ್ಚ್ ಹಾಗೂ ಎಪ್ರಿಲ್ ತಿಂಗಳ ಪ್ರಥಮಾರ್ಧದವರೆಗೆ ಕಂಬಳಗಳು ಆಯೋಜನೆಗೊಳ್ಳುತ್ತವೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈಗಾಗಲೇ ಹಲಧಿವಾರು ಕಂಬಳಗಳ ದಿನಾಂಕಗಳು ಮುಗಿದಿವೆ. ಪ್ರಸ್ತುತದ ಕಂಬಳ ಮಸೂದೆ ಫೆಬ್ರವರಿ ತಿಂಗಳ ಅಂತ್ಯಕ್ಕೆ ಅನುಷ್ಠಾನವಾಗಬಹುದು. ಒಂದು ಕಂಬಳಕ್ಕೆ ಸಿದ್ಧತೆ ಮಾಡಲು ಕನಿಷ್ಠ 10 ದಿನಗಳು ಬೇಕಾಗುತ್ತವೆ. ಆದುದರಿಂದ ವಾರಕ್ಕೆ ಒಂದು ಕಂಬಳವಷ್ಟೇ ಆಯೋಜಿಸಲು ಸಾಧ್ಯ. ಆದುದರಿಂದ ಈ ಬಾರಿ ಕೆಲವು ಕಂಬಳಗಳು ಮಾತ್ರ ನಡೆಯಬಹುದು ಎಂದು ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Related Articles
ದ.ಕ.ಜಿಲ್ಲೆಯಲ್ಲಿ ಕಂಬಳ ಸೀಸನ್ ಇನ್ನು ಒಂದೂವರೆ ತಿಂಗಳು ಮಾತ್ರ ಉಳಿದಿವೆ. ಮೂಡಬಿದಿರೆ, ಮಿಯಾರು, ಪುತ್ತೂರು, ಉಪ್ಪಿನಂಗಡಿ, ಅಡ್ವೆ ನಂದಿಕೂರು, ತಲಪಾಡಿ, ಜಪ್ಪಿನಮೊಗರು, ವೇಣೂರು, ಬಂಗಾಡಿ ಕಂಬಳಗಳು ಆಯೋಜನೆಗೊಳ್ಳುವ ಸಾಧ್ಯತೆಗಳಿವೆ ಎಂದು ಕಂಬಳ ಸಂಘಟಕರ ಅಭಿಪ್ರಾಯವಾಗಿದೆ.
Advertisement