Advertisement

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

11:40 PM Jan 03, 2025 | Team Udayavani |

ಬಂಟ್ವಾಳ: ಸುಮಾರು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಹಾಗೂ ದೇವರ ಕಂಬಳವೆಂದು ಕರೆಯಲ್ಪಡುತ್ತಿದ್ದ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳವು ಪ್ರಸ್ತುತ ಜಿಲ್ಲೆಯ ಪ್ರಮುಖ ಕಂಬಳವಾಗಿದ್ದು, ಈ ಬಾರಿ ಜ. 4ರಂದು ನಡೆಯಲಿದೆ.

Advertisement

ಹೊಕ್ಕಾಡಿಗೋಳಿ ಕಂಬಳಕ್ಕೂ ಇತಿಹಾಸ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವ ಸ್ಥಾನಕ್ಕೂ ಧಾರ್ಮಿಕ ನಂಟಿದ್ದು, ಗದ್ದೆಯ ಮಣ್ಣಿನಲ್ಲಿ ಒಂಟಿ ಕರೆಯನ್ನು ನಿರ್ಮಿಸಿ ಪಣೆ(ಏತ ನೀರಾವರಿ)ಯಲ್ಲಿ ನೀರು ಹಾಕಿ ಕಂಬಳ ನಡೆಸಲಾಗುತ್ತಿತ್ತು. ಗ್ಯಾಸ್‌ಲೈಟ್‌ ಬೆಳಕಿನಲ್ಲಿ ಪ್ರತಿವರ್ಷ ಎಳ್ಳಮಾವಾಸ್ಯೆಯ ಮುಂಚಿನ ದಿನ ಕಂಬಳ ನಡೆಯುತ್ತಿತ್ತು. ಕಂಬಳದ ಬಳಿಕ ಏಳು ದಿನಗಳ ಕೋಳಿ ಅಂಕ, ಯಕ್ಷಗಾನವೂ ನಡೆಯುತ್ತಿತ್ತು. ಧಾರ್ಮಿಕ ಹಿನ್ನೆಲೆಯಲ್ಲಿ ಪೂಂಜ ದೇವಸ್ಥಾನದಲ್ಲಿ ಕಂಬಳದ ಸಂದರ್ಭ ವಿಶೇಷ ಸೇವೆ, ಎರಡು ವರ್ಷಕ್ಕೊಮ್ಮೆ ಮೃತ್ಯುಂಜಯ ಹೋಮ, ರಂಗಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಜತೆಗೆ ಕಂಬಳ ಕರೆಯ ಬಳಿ ಕಾಣಿಕೆ ಡಬ್ಬವನ್ನೂ ಇಡಲಾಗುತ್ತಿತ್ತು ಎಂದು ಹಿರಿಯರು ನೆನಪಿಸುತ್ತಾರೆ.

35 ವರ್ಷಗಳಿಂದ ಜೋಡುಕರೆ
ಸ್ಥಳೀಯ ಹಿರಿಯರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು ನೇತೃತ್ವದಲ್ಲಿ ಸುಮಾರು 35 ವರ್ಷಗಳ ಹಿಂದೆ 1991-92ರಲ್ಲಿ ಜೋಡುಕರೆಯಲ್ಲಿ ಕಂಬಳ ನಡೆಸಲಾಗಿತ್ತು. ಅದರ ಮೊದಲು ಒಂಟಿಕರೆಯಲ್ಲೇ ನಡೆಯುತ್ತಿತ್ತು. ಜೋಡುಕರೆಗಿಂತ ಹಿಂದೆ ಪದ್ಮ ಪೂಜಾರಿ ಪಾಲ್ಜಾಲ್‌, ರಾಮ ಪೂಜಾರಿ, ಸೀತಾರಾಮ ಶೆಟ್ಟಿ, ಬೆಳ್ಳಿಪ್ಪಾಡಿ ಮಂಜಯ್ಯ ರೈ ಮೊದಲಾದವರು ಕಂಬಳವನ್ನು ನಡೆಸುತ್ತಿದ್ದರು. ಅಜೋಡುಕರೆಯ ಸಂದರ್ಭದಲ್ಲಿ ಕಲಾಯಿದಡ್ಡ ಸಂಜೀವ ಶೆಟ್ಟಿ, ಆನಂದ ಮಾಸ್ಟರ್‌ ಹಿಂಗಾಣಿ, ಪೊಡುಂಬ ಸಂಜೀವ ಶೆಟ್ಟಿ ಮೊದಲಾದವರು ನೇತೃತ್ವ ವಹಿಸಿದ್ದರು.

ಬಳಿಕ ಕೆಲವು ವರ್ಷ ನಿಂತಿದ್ದ ಕಂಬಳವನ್ನು 2010ರಲ್ಲಿ ಸಮಿತಿ ಅಧ್ಯಕ್ಷರಾಗಿದ್ದ ಸಂತೋಷ್‌ಕುಮಾರ್‌ ಭಂಡಾರಿ ಮರು ಆರಂಭಿಸಿದ್ದರು. ಅವರ ನಿಧನದ ಬಳಿಕ ಸುರೇಶ್‌ ಶೆಟ್ಟಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಹಲವು ವರ್ಷಗಳಿಂದ ರಶ್ಮಿತ್‌ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆಯಲ್ಲಿ ಕಂಬಳ ನಡೆಯುತ್ತಿದೆ.

ಈ ಬಾರಿ ವಿಳಂಬ
ಈ ಬಾರಿ ಹೊಕ್ಕಾಡಿಗೋಳಿ ಕಂಬಳಕ್ಕೆ ಜಿಲ್ಲಾ ಕಂಬಳ ಸಮಿತಿಯು ಡಿ. 7ರಂದು ದಿನಾಂಕ ನೀಡಿದ್ದು, ಆದರೆ ಆ ಸಂದರ್ಭದಲ್ಲಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಂಬಳ ನಡೆಸಲು ಸಾಧ್ಯವಾಗದೆ ಮುಂದೂಡಲ್ಪಟ್ಟಿತ್ತು. ಈಗ ಮಿಯಾರು ಕಂಬಳಕ್ಕೆ ನಿಗದಿ ಮಾಡಲಾಗಿದ್ದ ದಿನವನ್ನು ಹೊಕ್ಕಾಡಿಗೊಳಿ ಕಂಬಳಕ್ಕೆ ನೀಡಲಾಗಿದ್ದು, ಜ. 4ರಂದು ನಡೆಯಲಿದೆ. ಕಾರಣಾಂತರಗಳಿಂದ ಮಿಯಾರು ಕಂಬಳ ಮುಂದೂಡಲ್ಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next