ಬೆಂಗಳೂರು: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಚಾರವಾಗಿದ್ದ ಹೊಕ್ಕಾಡಿಗೋಳಿ ಕಂಬಳ ಆಯೋಜನೆಯ ಕುರಿತು ಇಂದು ಹೈಕೋರ್ಟ್ ತನ್ನ ತೀರ್ಪು ನೀಡಿದೆ. ಹೊಕ್ಕಾಡಿಗೋಳಿ ಶ್ರೀ ಮಹಿಷಮರ್ದಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಹೊಕ್ಕಾಡಿಗೋಳಿ ಶ್ರೀ ಮಹಿಷಮರ್ದಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ತಡೆ ನೀಡಬೇಕು ಎಂದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದರು.
ಇಂದು ವಿಚಾರಣೆ ನಡೆಸಿದ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು, ಕಂಬಳಗಳಿಗೆ ದಿನಾಂಕ ನಿಗದಿ ಮಾಡಲು ಜಿಲ್ಲಾ ಸಮಿತಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದೆ. ಈ ಬಗ್ಗೆ ಯಾವುದೇ ಸೂಕ್ತ ದಾಖಲೆಗಳು ಕೋರ್ಟ್ ಮುಂದೆ ಇರದ ಕಾರಣ ನಾಳೆ (ಮಾರ್ಚ್ 16) ನಡೆಯುವ ಕಂಬಳ ಕೂಟಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿದೆ.
ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುವುದು ತಪ್ಪು ಎಂದಿರುವ ಪೀಠವು, ಅಧಿಕಾರ ವ್ಯಾಪ್ತಿಯ ಬಗ್ಗೆ ನಿರ್ಧರಿಸಲು ರಿಟ್ ಅರ್ಜಿಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಿದೆ.
ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಪರವಾಗಿ ಅರುಣ್ ಶ್ಯಾಮ್ ಮತ್ತು ರಕ್ಷಿತ್ ಕುಮಾರ್ ನಾರಾವಿ ವಾದ ಮಂಡಿಸಿದ್ದರು.
ಆಗಿದ್ದೇನು?
ಹೊಕ್ಕಾಡಿಗೋಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮಹಿಷಮರ್ದಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ನಡೆಯುತ್ತಿದ್ದು, ಈ ವರ್ಷ ಹಲವು ಕಾರಣಗಳಿಂದ ಅದೇ ಊರಿನಲ್ಲಿ ಮತ್ತೊಂದು ಕಂಬಳ ಕರೆ ನಿರ್ಮಾಣವಾಗಿದೆ. ಇದೀಗ ಒಂದೇ ದಿನ (ಮಾರ್ಚ್ 16) ಒಂದೇ ಊರಿನಲ್ಲಿ ಎರಡು ಕಂಬಳ ಆಯೋಜನೆಯಾಗಿದೆ. ಈ ವಿಚಾರವಾಗಿ ಕಂಬಳ ಸಮಿತಿ ಕೋರ್ಟ್ ಮೆಟ್ಟಿಲೇರಿತ್ತು.