Advertisement

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

10:09 AM Nov 08, 2024 | Team Udayavani |

ಕುಂದಾಪುರ: ಕಂಬಳ ಕರಾವಳಿಯ ಕೃಷಿ ಸಂಸ್ಕೃತಿಯ ಪ್ರತೀಕ. ರೈತ-ಜಾನುವಾರುಗಳ ಬದುಕಿನ ನಂಟಿ ನೊಂದಿಗೆ ಆರಂಭವಾದ ಸಂಪ್ರದಾಯ. ಕಾಲ ಕ್ರಮೇಣ ಜಾನಪದ ಆಚರಣೆಯಾಗಿ, ಗ್ರಾಮೀಣ ಕ್ರೀಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಸ್ಪರ್ಧಾತ್ಮಕವಾಗಿ ಆಯೋಜನೆಗೊಂಡರೆ, ಉಡುಪಿ ಜಿಲ್ಲೆಯಲ್ಲಿ ಪಾರಂಪರಿಕ ರೀತಿಯಲ್ಲಿ ಸಾಂಪ್ರದಾಯಿಕ ಕಂಬಳ ನಡೆಯಲಿದೆ.

Advertisement

ಒಂದು ಕಾಲದಲ್ಲಿ ಜಾನಪದ ಆರಾಧನೆಯಾಗಿದ್ದ ಕಂಬಳ ಇಂದು ಆಧುನಿಕತೆಗೆ ತೆರೆದುಕೊಂಡಿದೆ. ಈ ಆಧುನಿಕ ಕಂಬಳದಲ್ಲಿ ತಂತ್ರಜ್ಞಾನಗಳ ಬಳಕೆ, ಸ್ಪರ್ಧೆ, ಪೈಪೋಟಿ ಮುಂತಾದ ಆಯಾಮಗಳಿವೆ. ಸಾಂಪ್ರದಾಯಿಕ (ಪರಂಪರೆ) ಕಂಬಳವೆಂದರೆ ಎಲ್ಲರೂ ಪಾಲ್ಗೊಳ್ಳುವ, ಶ್ರದ್ಧೆಯ ಆಚರಣೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕೃಷಿಗೆ ಮಹತ್ವ ನೀಡುವ, ಮಹಿಷಂದಾಯ (ಕೋಣಗಳು) ಆರಾಧನೆ, ದೈವರಾಧನೆಯ ನೆಲೆಯಲ್ಲೂ ಈ ಕಂಬಳ ನಡೆಸಲಾಗುತ್ತಿದೆ.

ದ.ಕ. ಜಿಲ್ಲೆಯ ಬಹುತೇಕ, ಉಡುಪಿ ಜಿಲ್ಲೆಯ ಕಾರ್ಕಳ, ಕಾಪು ಭಾಗದಲ್ಲಿ ಆಧುನಿಕ (ಜೋಡುಕರೆ) ಕಂಬಳವಾದರೆ, ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಬೈಂದೂರು ಭಾಗದಲ್ಲಿ ಸಾಂಪ್ರದಾಯಿಕ (ಒಂಟಿ ಗದ್ದೆ) ಕಂಬಳ ನಡೆಯತ್ತವೆ.

ಸಾಂಪ್ರದಾಯಿಕ ಕಂಬಳ
ಸಾಂಪ್ರದಾಯಿಕ ಕಂಬಳ ಆರಾಧನೆಯ ರೂಪದ್ದು. ಧಾರ್ಮಿಕ ನೆಲೆಯೇ ಇಲ್ಲಿ ಪ್ರಮುಖ. ಅಂದಾಜು 50ರಿಂದ 60 ಕಂಬಳಗಳಲ್ಲಿ 20-22 ಕೊಂಚ ಹೆಚ್ಚು ವಿಜೃಂಭಣೆ ಯಿಂದ ನಡೆಯುತ್ತವೆ. ಕಂಬಳ ನಡೆಸುವ ಮನೆತನ ದವರೇ ಅರ್ಚಕರಲ್ಲಿ ಕೇಳಿ, ಯಜಮಾನರ ತಾರಾಬಲಕ್ಕೆ ಅನುಕೂಲವಾಗಿ, ದಿನ ನಿಗದಿ ಮಾಡುತ್ತಾರೆ. ಕೆಲವೆಡೆ ಕಂಬಳ ನಡೆಸುವ ಯಜಮಾನ (ಪಟ್ಟದವರು) ಉಪವಾಸ ಇರುತ್ತಾರೆ. ದಿನ ನಿಗದಿಯಾದಂದಿನಿಂದ ಕಂಬಳ ಮುಗಿಯುವವರೆಗೆ ಅವರು ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು. ಹೆಚ್ಚು ತಿರುಗುವಂತಿಲ್ಲ. ಕಂಬಳ ನಡೆಯುವ ದಿನ ಕಂಬಳ ಗದ್ದೆಗೆ ಒಂದು ಸುತ್ತು ಬರುವ ಇತ್ಯಾದಿ ಒಂದೊಂದು ಕಡೆ ಒಂದೊಂದು ಸಂಪ್ರದಾಯವಿದೆ.

ಕಂಬಳ ಗದ್ದೆಯನ್ನು ಎರಡು ದಿನ ಮೊದಲು ಉಳುಮೆ ಮಾಡುವ ಕ್ರಮವಿದೆ. ಕಂಬಳದ ದಿನ ಬೆಳಗ್ಗೆ ನಂಬಿದ ದೈವ, ದೇವರಿಗೆ ವಾದ್ಯದೊಂದಿಗೆ ಪೂಜೆ ನೀಡಲಾಗುತ್ತದೆ. ಮುಹೂರ್ತದ ಸಮಯ ನೋಡಿ, ಸಿಂಗರಿಸಲಾದ ಅಡಿಕೆ ಮರದ ಧ್ವಜ ಕಂಬವನ್ನು ಕಂಬಳ ಗದ್ದೆಯ ಮಧ್ಯದಲ್ಲಿ ಹಾಕಿ, ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಸ್ಪರ್ಧೆ. ಈಗ ಹಗ್ಗ ಕಿರಿಯ, ಹಿರಿಯ, ಹಲಗೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಓಟದ ಸಮಯದ ಆಧಾರದಲ್ಲಿ ಫಲಿತಾಂಶ ನಿರ್ಧಾರ. ಬಹುಮಾನ ಪಡೆಯುವುದು ಪ್ರತಿಷ್ಠೆಯೂ ಹೌದು. ಇಲ್ಲಿ ಕೋಣಗಳಿಗೆ ಮರ ಕಟ್ಟುವ ಸಂಪ್ರದಾಯ ಇಲ್ಲ. ಆಡಂಬರವೂ ಇಲ್ಲ. ಕೋಣಗಳಿಗೆ ಅನಾರೋಗ್ಯ ಉಂಟಾದರೆ ಕಂಬಳ ಗದ್ದೆಯ ಸುತ್ತು ಹಾಕುವ ಹರಕೆಯನ್ನು ಆ ಮನೆಯವರು ಕಾಣುವುದೂ ಇದೆ.

Advertisement

ಸಾಂಪ್ರದಾಯಿಕ ಕಂಬಳ ಪುರಾತನ ಆಚರಣೆ. ದೈವ, ದೇವರಿಗೆ ಪೂಜೆ, ಕೆಲವು ಕಟ್ಟುಪಾಡುಗಳನ್ನು ಪಾಲಿಸಬೇಕು. ಸೂತಕದವರು, ಮುಟ್ಟಾದವರು, ಗರ್ಭಿಣಿಯರು ಕಂಬಳ ಗದ್ದೆಗೆ ಇಳಿಯುವಂತಿಲ್ಲ. ಪಟ್ಟದ ಮನೆಯವರು ಪ್ರಥಮವಾಗಿ ಕೋಣಗಳನ್ನು ಗದ್ದೆಗೆ ಇಳಿಸಬೇಕು. ಅನಂತರ ಹೊರಗಿನಿಂದ ಬಂದಂತಹ ಕೋಣಗಳಿಗೆ ವೀಳ್ಯ ಕೊಟ್ಟು, ವಾದ್ಯದೊಂದಿಗೆ ಬರ ಮಾಡಿಕೊಂಡು ಗದ್ದೆಗೆ ಇಳಿಸಲಾಗುತ್ತದೆ ಎನ್ನುತ್ತಾರೆ ಶತಮಾನಗಳ ಇತಿಹಾಸವಿರುವ ತಗ್ಗರ್ಸೆ ಕಂಬಳ ನಡೆಸುವ ಕಂಠದಮನೆಯ ಟಿ. ನಾರಾಯಣ ಹೆಗ್ಡೆ.

ಆಧುನಿಕ ಕಂಬಳ
ಆಧುನಿಕ ಕಂಬಳವೆಂದರೆ ಜೋಡುಕರೆ ಕಂಬಳ ಅಥವಾ ಕ್ರೀಡೆಯಾಗಿ ನೋಡಲಾಗುತ್ತಿದೆ. ಇಲ್ಲಿ ಆಚರಣೆಗೆ ಅಷ್ಟೊಂದು ಮಹತ್ವವಿಲ್ಲ. ಐಕಳ, ಮೂಲ್ಕಿ, ಕಟಪಾಡಿ, ವಾಮಂಜೂರು ಕಂಬಳ ಜೋಡುಕರೆಯಾಗಿದ್ದರೂ, ಮೊದಲು ದೇವರ ಆರಾಧನೆ, ಪೂಜೆ ನಡೆಸಿ, ಆರಂಭಿಸುವ ಪದ್ಧತಿ ಇದೆ.
ಸುಮಾರು 25ಕ್ಕೂ ಮಿಕ್ಕಿ ಕಡೆಗಳಲ್ಲಿ ಜೋಡುಕರೆ ಕಂಬಳಗಳನ್ನು ನಡೆಸಲಾಗುತ್ತಿದೆ. ಇಲ್ಲಿ ವಿಜೃಂಭಣೆಗೆ ಆದ¤ಯೆ. ಇಲ್ಲಿ ಕಂಬಳವನ್ನು ಕ್ರೀಡೆಯಾಗಿಯೇ ನೋಡುವುದರಿಂದ ಸ್ಪರ್ಧೆಗೆ ಹೆಚ್ಚಿನ ಪ್ರಾಶಸ್ತÂ. ಗೆಲ್ಲುವುದು ಪ್ರತಿಷ್ಠೆಯ ಸಂಗತಿ. ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಓಡಿಸಿದವರು ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ, ಬಹಮಾನಗಳನ್ನು ನೀಡಲಾಗುತ್ತದೆ. ಇಲ್ಲಿ ಎಲ್ಲ ಕೋಣಗಳಿಗೆ ಮರ ಕಟ್ಟುವುದು ಖಾಯಂ.

ವೃಶ್ಚಿಕದಿಂದ ಧನು ಸಂಕ್ರಾಂತಿಯವರೆಗೆ
ಆಧುನಿಕ ಕಂಬಳಗಳು ನ.9ರಿಂದ ಆರಂಭಗೊಂಡು ಎ.19ರ ವರೆಗೆ ನಿಗದಿಯಾಗಿವೆ. ಆದರೆ ಸಾಂಪ್ರದಾಯಿಕ ಕಂಬಳಗಳು ವೃಶ್ಚಿಕ ಸಂಕ್ರಮಣ(ನ.16)ದಿಂದ ಆರಂಭಗೊಂಡು, ಧನು ಸಂಕ್ರಮಣ(ಡಿ.15)ದೊಳಗೆ ಮುಗಿಯಬೇಕು. ಬಹುತೇಕ ಮನೆತನಗಳು ವೃಶ್ಚಿಕ ಸಂಕ್ರಮಣ ದಿನದಂದು ಅರ್ಚಕರ ಮನೆಗೆ ತೆರಳಿ, ಕಂಬಳದ ದಿನ ನಿಗದಿಪಡಿಸುವುದು ವಾಡಿಕೆ. ಕೆರಾಡಿ, ಹೆಗ್ಗುಂಜೆ, ಕಡ್ರಿ, ಕೆಂಜೂರು, ಯಡ್ತಾಡಿ, ಉಳ್ಳೂರು, ಬಿಲ್ಲಾಡಿ, ತಲ್ಲೂರು, ಹೊಸ್ಮಠ, ಮುದ್ದುಮನೆ, ಕೊಡವೂರು, ತೋನ್ಸೆ, ಮೊಳಹಳ್ಳಿ, ಹೊರ್ಲಾಳಿ, ಕುಚ್ಚಾರು, ಗುಲ್ವಾಡಿ, ಆತ್ರಾಡಿ, ಮೂಡ್ಲಕಟ್ಟೆ, ವಂಡಾರು, ಹಂದಾಡಿ, ಚೇರ್ಕಾಡಿ, ಬಾರಕೂರು, ಚೋರಾಡಿ, ಕೊರ್ಗಿ, ತೆಗ್ಗರ್ಸೆ, ನಾವುಂದ ಮಸ್ಕಿ, ಗಂಗನಾಡು, ಕೊಡೇರಿ, ನಡೂರು, ವಡ್ಡಂಬೆಟ್ಟು, ಹೆರಂಜೆ, ಬನ್ನಾಡಿ, ಹೊಂಬಾಡಿ -ಮಂಡಾಡಿ ಇವು ಪ್ರಮುಖ ಸಾಂಪ್ರದಾಯಿಕ ಕಂಬಳಗಳು.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next