ನವಲಗುಂದ: ಇಷ್ಟಾರ್ಥಗಳನ್ನು ಈಡೇರಿಸುವ ಮತ್ತು ಈ ಭಾಗದ ಭಕ್ತರ ಆರಾಧ್ಯದೈವ, ಐತಿಹಾಸಿಕ ಹಿನ್ನೆಲೆಯ ಕಾಮಣ್ಣನ ಮೂರ್ತಿ ರಾಮಲಿಂಗ ಕಾಮ ದೇವರ ಪ್ರತಿಷ್ಠಾಪನೆ ಮಾ.9ರಂದು ಪಟ್ಟಣದಲ್ಲಿ ನಡೆಯಲಿದೆ. ಐದು ದಿನ ಕಾಮಣ್ಣನ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಮಾ.8ರಂದು (ಏಕಾದಶಿ) ರಾಮಲಿಂಗ ಕಾಮಣ್ಣ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಆರಂಭವಾಗಲಿದ್ದು, ಮಾ.9ರಂದು (ದ್ವಾದಶಿ) ಪೂರ್ಣಗೊಳ್ಳಲಿದೆ. ನಂತರ ಕಾಮಣ್ಣ ದೇವರು ದರ್ಶನಕ್ಕೆ ಲಭ್ಯವಾಗುತ್ತಾನೆ. ಮಾ.12ರಂದು ಹೋಳಿ ಹುಣ್ಣಿಮೆ, ಮಾ.13ರಂದು ಬಣ್ಣದ ಓಕುಳಿ, ಸಂಜೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ.
ಮಾ.14ರಂದು ಬೆಳಗಿನ ಜಾವ ಕಾಮದಹನ ಜರುಗಲಿದೆ. ಪ್ರತಿವರ್ಷ ಪಟ್ಟಣದ ಹೋಳಿ ಹಬ್ಬ ಐದು ದಿನ ಬೃಹತ್ ಜಾತ್ರೆಯಂತೆ ನಡೆಯುತ್ತದೆ. ಈ ಐದು ದಿನದ ವೇಳೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಸುಮಾರು ಎರಡು ಕಿ.ಮೀ. ನಷ್ಟು ಉದ್ದದ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ.
ಪೂಜಾರಿಯಲ್ಲದ ದೇವರು: ಜಗದೆಲ್ಲೆಡೆ ಇರುವ ದೇವಸ್ಥಾನಗಳಲ್ಲಿ ದೇವರ ಪೂಜೆಗಾಗಿ ಒಬ್ಬ ಪುರೋಹಿತ ಅಥವಾ ಪೂಜಾರಿಗಳು ಇರುವುದು ಸರ್ವೇ ಸಾಮಾನ್ಯ. ಆದರೆ ಈ ದೇವಸ್ಥಾನಕ್ಕೆ ಸೀಮಿತವಾಗಿ ಯಾವುದೇ ಪೂಜಾರಿಗಳು ಇಲ್ಲದಿರುವುದು ವಿಶೇಷ.
ಇನ್ನು ಹೋಳಿಹುಣ್ಣಿಮೆಯಂದು ಜರುಗುವ ಪೂಜಾ ಕೈಕಂರ್ಯಗಳಿಂದಲೂ ಪೂಜಾರಿಗಳು ದೂರ. ಆದರೆ ಇಲ್ಲಿಗೆ ಬರುವ ಭಕ್ತರೇ ಪೂಜೆಸಲ್ಲಿಸಿ ಹರಕೆ ಹೊರುವುದು ಸಂಪ್ರದಾಯವಿದೆ. ಹಿಂದೂ-ಮುಸ್ಲಿಂ ಅಲ್ಲದೇ ಎಲ್ಲ ವರ್ಗದ ಜನತೆ ಈ ಕಾಮಣ್ಣನಿಗೆ ಭಕ್ತಿಯಿಂದ ಸೇವೆ ಸಲ್ಲಿಸುತ್ತಿರುವುದು ಇನ್ನೊಂದು ವಿಶೇಷ.