Advertisement

ಬೊಂಬೆನಗರಿಯಲ್ಲಿ ಕಾಮನಹಬ್ಬ ಸೊಗಸು!

02:28 PM Mar 07, 2023 | Team Udayavani |

ಚನ್ನಪಟ್ಟಣ: ಬೊಂಬೆನಗರಿ ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಆಚರಿಸುವ ಕಾಮನ ಹಬ್ಬ ಬಲು ವಿಶಿಷ್ಟವಾದುದು.

Advertisement

ಶಿವರಾತ್ರಿ ಅಮಾವಾಸ್ಯೆಯಂದು ಹೊರಗೆ ಕಾಮಣ್ಣನ ಪ್ರತಿಷ್ಠಾಪನೆಯ ಮೂಲಕ ಹಬ್ಬದ ಆಚರಣೆ ಶುರುವಾಗುತ್ತದೆ. ಈ ಕಾಮಣ್ಣನ ಮೂರ್ತಿಯನ್ನು ಪೊರಕೆ ಕಾಮಣ್ಣನೆಂದೂ ಕರೆಯುತ್ತಾರೆ. ಈ ಕಾಮಣ್ಣನ ಮೂರ್ತಿಯು ಪೊರಕೆ, ಬಿದಿರಿನ ಮೊರ, ಪುರಿ ಉಂಡೆ, ಬೆರಣಿ ಹಾಗೂ ಹೂವಿನಿಂದ ತಯಾರಿಸುತ್ತಾರೆ.

ಪೊರಕೆ ಕಾಮಣ್ಣನ ಪ್ರತಿಷ್ಠಾಪನೆಯ ನಂತರ ಹೋಳಿ ಹುಣ್ಣಿಮೆವರೆಗೆ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ದಿನಕ್ಕೊಂದು ವೇಷಭೂಷಣದಿಂದ ಅಲಂಕರಿಸಲಾಗುತ್ತದೆ. ಉತ್ಸವದ ಪ್ರತಿದಿನವೂ ಹಬ್ಬದ ಕಳೆ ರಂಗೇರುವಂತೆ ಆಚರಣೆಗಳು ನಡೆಯುತ್ತವೆ.

ಉತ್ಸವ: ಹುಣ್ಣಿಮೆ ದಿನದ ಹಿಂದಿನ ಸಂಜೆ ಕಾಮದೇವನು ಶಿವನಿಗೆ ಹೂಬಾಣ ಬಿಡುವ ಸ್ತಬ್ಧಚಿತ್ರವನ್ನು ವೇದಿಕೆಯಲ್ಲಿ ಸಿದ್ಧಪಡಿಸಿ ಪುರಾಣದ ಸನ್ನಿವೇಶ ಮರುಕಳಿಸುವಂತೆ ಪ್ರತಿವರ್ಷವೂ ಸೃಷ್ಟಿಸುವುದು ವಿಶೇಷ. ಅದೇ ದಿನ ಸಂಜೆ ಮೈಸೂರಿನ ದಸರಾ ಜಂಬೂಸವಾರಿ ಹೋಲುವ ರೀತಿಯಲ್ಲಿ ದೇಶೀಯ ಜಂಬೂ ಸವಾರಿಯನ್ನು ಕಾಮದೇವನ ಮೂರ್ತಿಯೊಂದಿಗೆ ಮಾಡಲಾಗುತ್ತದೆ. ಪಟಾವಳಿ ಕಾಮಣ್ಣನ ಚಿತ್ರವೂ ಜತೆಗಿರುತ್ತದೆ. ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕರಗ, ಪೌರಾಣಿಕ ವೇಷಭೂಷಣ, ಕತ್ತಿವರಸೆ, ದೊಣ್ಣೆ ವರಸೆ ಮೊದಲಾದ ಮೇಳಗಳೊಂದಿಗೆ ನಗರದ ತುಂಬಾ ನಡೆಯುತ್ತದೆ.

ಕಾಮದಹನ: ಉತ್ಸವ ಸಾಗುತ್ತ ಮುಂದೆ ಹೋದಂತೆ ರಸ್ತೆಯುದ್ದಕ್ಕೂ ಮಜ್ಜಿಗೆ ಪಾನಕ ಸಿಹಿತಿಂಡಿ ಪ್ರಸಾದಗಳನ್ನು ತಮ್ಮ ತಮ್ಮ ಮನೆಗಳ ಮುಂದೆ ವಿತರಿಸಿ ಜನರ ದಣಿವು ನಿವಾರಿಸುತ್ತಾರೆ. ಹೀಗೆ ಕಾಮರತಿಯ ಉತ್ಸವದ ಮೆರವಣಿಗೆ ಮುಗಿಸಿ ಸ್ಥಳಕ್ಕೆ ಬಂದ ನಂತರ ದಹನ ಮಾಡುವ ಜಾಗದಲ್ಲಿ ಕೊರಕಿ ಕಾಮಣ್ಣನನ್ನು ನಿಲ್ಲಿಸಿ ಅದಕ್ಕೆ ಕಟ್ಟಿಗೆ ಸೌದೆ, ಬೆರಣಿ, ಹಳೆ ಚಾಪೆ, ಒಣಗರಿ ಹಾಕಿ ಕಾಮದಹನಕ್ಕೆ ಜಾಗ ಸಿದ್ಧಪಡಿಸುತ್ತಾರೆ. ಕಾಮನ ಉತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಿ ಕಾಮನ ಶಿರವನ್ನು ತಕ್ಷಣ ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಅನಂತರ ಪಟಾವಳಿ ಕಾಮಣ್ಣನ ಚಿತ್ರವನ್ನು ಉತ್ಸವ ಮಂಟಪದಿಂದ ತೆಗೆದು ದಹನಕ್ಕೆ ಸಿದ್ಧಪಡಿಸಿರುವ ಜಾಗದ ಸುತ್ತ ಸುತ್ತು ಹಾಕಿ ಅದನ್ನು ದಹನ ಜಾಗಕ್ಕೆ ಸೇರಿಸುತ್ತಾರೆ. ಅದೇ ಸಮಯಕ್ಕೆ ಕಾಮನ ಅಣಕು ಶವಯಾತ್ರೆ ಮಾಡಿ ದಹನ ಮಾಡುವ ಮುನ್ನ ಶಾಸ್ತ್ರಾನುಸಾರ ಚಟ್ಟ ಸಿದ್ಧಪಡಿಸುತ್ತಾರೆ. ದಹನದ ಜಾಗದಲ್ಲಿ ಪೊರಕೆ ಕಾಮಣ್ಣ ಹಾಗೂ ಪಟಾವಳಿ ಕಾಮಣ್ಣನ ಚಿತ್ರಪಟವನ್ನು ಕಾಮನ ಪ್ರತಿರೂಪವಾಗಿ ಇಟ್ಟು ಅದಕ್ಕೆ ಬೆಂಕಿ ಹಚ್ಚಿ ದಹಿಸುತ್ತಾರೆ. ಇದು ಕಾಮದಹನದ ಸಂಕೇತ.

Advertisement

ಮರುಜನ್ಮ ತಾಳುವ ಪ್ರತೀಕ: ಹುಣ್ಣಿಮೆ ಚಂದ್ರನ ಬೆಳಕಲ್ಲಿ ರತಿ ತನ್ನ ಪತಿ ಕಾಮದೇವನನ್ನು ಕಳೆದುಕೊಂಡು ದುಖಃಭರಿತಳಾಗಿ ತನ್ನ ಪತಿಗೆ ಮರುಜನ್ಮ ನೀಡಿ ಎಂದು ಶಿವನಲ್ಲಿ ಬೇಡುವ ಹಾಗೆ ಬಿಳಿ ಸೀರೆ ಉಡಿಸಿ, ತಮಟೆ, ಬ್ಯಾಂಡ್‌, ಭಜಂತ್ರಿಗಳ ಸದ್ದಿನ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಶಿವನ ಅನುಗ್ರಹ ಪಡೆದು ಕಾಮದೇವನು ಮರುಜನ್ಮ ತಾಳುವ ಕಥೆಯ ಪ್ರತೀಕವಾಗಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವ ಆಚರಿಸುವ ಪದ್ಧತಿ ಇಲ್ಲಿದೆ. ಈ ದಿನ ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಉತ್ಸವ ಆಚರಿಸುತ್ತಾರೆ.

15ದಿನ ಇರುವಾಗಲೇ ಸಿದ್ಧತೆ : ಪ್ರತಿವರ್ಷ ಆಚರಿಸುವ ಕಾಮನಹಬ್ಬದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ವರನಿಗೆ ಕಚ್ಚೆ ಪಂಚೆ, ಕೋಟು, ವಧುವಿಗೆ ಸೀರೆ, ತೋಳುಬಂದಿ, ಬೈತಲೆಬೊಟ್ಟು, ಸರ, ಕಿವಿಯೋಲೆ, ನಡುವಿನ ಡಾಬು, ಒಡವೆ, ಮೊಗ್ಗಿನ ಜಡೆ ಮುಂತಾದವುಗಳ ಅಲಂಕಾರ. ಪ್ರತಿದಿನವೂ ಸಂಜೆಯ ವೇಳೆ ವಿವಿಧ ರೀತಿಯ ಆಚರಣೆಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ ನಿಶ್ಚಿತಾರ್ಥ ಪ್ರಸಂಗ, ವೈವಾಹಿಕ ಪ್ರಸಂಗ, ವಿವಾಹದ ನಂತರ ಸತ್ಯನಾರಾಯಣ ಪೂಜೆಯ ಸನ್ನಿವೇಶ ಹೀಗೆ. ನಿಶ್ಚಿತಾರ್ಥ ಹಾಗೂ ಮದುವೆ ಶಾಸ್ತ್ರ ಸಂಪ್ರದಾಯಗಳನ್ನು ವಿಧಿವತ್ತಾಗಿ ನಾದಸ್ವರ ಮತ್ತು ಮಂಗಳ ವಾದ್ಯಗಳೊಂದಿಗೆ ನಡೆಸಲಾಗುತ್ತದೆ. 15 ದಿನ ನಡೆಯುವ ಈ ಉತ್ಸವಕ್ಕೆ ಒಂದೂವರೆ ತಿಂಗಳಿನಿಂದಲೇ ಸಿದ್ಧತೆ ನಡೆಯುತ್ತವೆ.

ಶಿವ ಪರಮಾತ್ಮನ ಅನುಗ್ರಹ ಪಡೆದು ಕಾಮದೇವ ಮನ್ಮಥನು ಮರುಜನ್ಮ ತಾಳುವ ಕಥೆಯ ಪ್ರತೀಕವಾಗಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವ ಆಚರಿಸಲಾಗುತ್ತದೆ. ಅಂದು ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಉತ್ಸವ ಆಚರಿಸುತ್ತಾರೆ. -ಜಿತೇಂದ್ರ ಗೌತಮ್‌, ಮಂಡಿಪೇಟೆ ನಿವಾಸಿ, ಚನ್ನಪಟ್ಟಣ

– ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next