Advertisement

ಕಮಲಶಿಲೆ –ಚೋನಮನೆ ಸಂಪರ್ಕ ರಸ್ತೆ ಡಾಮರು ಕಾಮಗಾರಿಗೆ ಬೇಡಿಕೆ

12:24 AM Mar 03, 2020 | Sriram |

ಆಜ್ರಿ: ಕಮಲಶಿಲೆಯಿಂದ ಮುತ್ತಬೇರು – ಬ್ಯಾಗಿಮನೆ – ಚೋನಮನೆ – ಆಜ್ರಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಗೆ ಡಾಮರೀಕರಣಕ್ಕೆ ಗ್ರಾಮಸ್ಥರಿಂದ ಬೇಡಿಕೆ ಕೇಳಿ ಬಂದಿದೆ. ಕಮಲಶಿಲೆಯಿಂದ ಆಜ್ರಿಗೂ ಕೂಡ ಇದು ಹತ್ತಿರದ ಮಾರ್ಗವಾಗಿದೆ.

Advertisement

ಎರಡು ಪ್ರಮುಖ ಯಾತ್ರ ಸ್ಥಳಗಳಾದ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಚೋನಮನೆಯ ಶ್ರೀ ಶನೀಶ್ವರ ದೇವಸ್ಥಾನಗಳನ್ನು ಸಂಪರ್ಕಿಸುವ ಹತ್ತಿರದ ಮಾರ್ಗ ಇದಾಗಿದೆ. ಈ ಮಾರ್ಗವಾಗಿ ಈ ಎರಡು ದೇವಸ್ಥಾನಗಳಿಗಿರುವ ಅಂತರ ಕೇವಲ 2 ಕಿ.ಮೀ. ಅಷ್ಟೇ. ಇಲ್ಲದಿದ್ದರೆ ಸುತ್ತು ಬಳಸಿ ಸುಮಾರು 4 ಕಿ.ಮೀ. ದೂರವಾಗುತ್ತದೆ.

ದಶಕದ ಬೇಡಿಕೆ
ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು, ಸುಮಾರು 2 ಕಿ.ಮೀ. ದೂರದ ಮಣ್ಣಿನ ರಸ್ತೆಗೆ ಡಾಮರೀಕರಣಗೊಳಿಸಬೇಕು ಎನ್ನುವ ಬೇಡಿಕೆಯನ್ನು ಇಲ್ಲಿನ ಗ್ರಾಮಸ್ಥರು ಕಳೆದ ಒಂದು ದಶಕದಿಂದಲೂ ಇಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರಿಗೂ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಅನ್ನುವುದು ಊರವರ ಆರೋಪ.

ಯಾವೆಲ್ಲ ಊರಿಗೆ ಅನುಕೂಲ
ಈ ರಸ್ತೆಗೆ ಡಾಮರೀಕರಣವಾದರೆ ಕಮಲಶಿಲೆಯಿಂದ ಚೋನಮನೆಗೆ ಸಂಪರ್ಕ ಕಲ್ಪಿಸುವ ಜತೆಗೆ ಯಳಬೇರು, ಆಜ್ರಿ, ತಗ್ಗುಂಜೆಗೆ ಕೂಡ ಹತ್ತಿರದ ಸಂಪರ್ಕ ಸಾಧ್ಯವಾಗಲಿದೆ. ಇದ ಲ್ಲದೆ ಚೋನಮನೆಯಿಂದ ಸಿದ್ದಾಪುರಕ್ಕೂ ಇದು ಹತ್ತಿರವಾಗಲಿದೆ. ಈ ಮಾರ್ಗದ ಆಸುಪಾಸಿನಲ್ಲಿ ಸುಮಾರು 500ಕ್ಕೂ ಮಿಕ್ಕಿ ಮನೆಗಳಿವೆ. ಚೋನಮನೆಯಲ್ಲಿ ಈಗ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣವಾಗಿರುವುದರಿಂದ ಈ ರಸ್ತೆಗೆ ಡಾಮರೀಕರಣ ಮಾಡಿದರೆ ನೂರಾರು ಮಂದಿಗೆ ಪ್ರಯೋಜನವಾಗಲಿದೆ.

10 ವರ್ಷಗಳಿಂದ ಬೇಡಿಕೆ
ಈ ರಸ್ತೆಯನ್ನು ಡಾಮರೀಕರಣಗೊಳಿಸಬೇಕು ಎನ್ನುವ ಕುರಿತಂತೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಸ್ಥಳೀಯ ಪಂಚಾಯತ್‌ಗೂ ಮನವಿ ಸಲ್ಲಿಸಲಾಗಿದೆ. ಕಳೆದ 10 ವರ್ಷಗಳಿಂದಲೂ ಬೇಡಿಕೆ ಇದೆ. ಆದರೆ ಡಾಮರೀಕರಣ ಮಾಡಲು ಮಾತ್ರ ಮುಂದಾಗಿಲ್ಲ. ಈ ಬಾರಿಯಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಲಿ.
-ಅಶೋಕ್‌ ಕುಮಾರ್‌ ಶೆಟ್ಟಿ, ಆಡಳಿತ ಸಮಿತಿ ಅಧ್ಯಕ್ಷರು, ಶ್ರೀ ಶನೀಶ್ವರ ದೇವಸ್ಥಾನ ಚೋನಮನೆ

Advertisement

ಮನವಿ ಸಲ್ಲಿಸಲಾಗಿದೆ
ಈ ರಸ್ತೆಗೆ ಪ್ರಸ್ತುತ ಜಿ.ಪಂ.ನಿಂದ ಮಂಜೂರಾದ 1.50 ಲಕ್ಷ ರೂ. ವೆಚ್ಚದಲ್ಲಿ ಜಲ್ಲಿ ಕಲ್ಲು ಹಾಕಲಾಗಿದೆ. ಸದ್ಯಕ್ಕೆ ಯಾವುದೇ ಅನುದಾನ ಇಲ್ಲದಿರುವುದರಿಂದ ಡಾಮರೀಕರಣ ಕಷ್ಟ. ಆದರೆ ಈ ಬಗ್ಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ. ಈಗ ಆಜ್ರಿ ಪಂಚಾಯತ್‌ ವ್ಯಾಪ್ತಿಯಲ್ಲಿ ಈಗಾಗಲೇ ಎರಡು ರಸ್ತೆಗಳಗೆ ಶಾಸಕರು ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಗೆ ಅನುದಾನ ನೀಡುವ ಭರವಸೆ ಕೊಟ್ಟಿದ್ದಾರೆ.
– ಪ್ರವೀಣ್‌ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರು, ಆಜ್ರಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next