Advertisement

ಪಟ್ಟಕ್ಕೆ ಪೈಪೋಟಿ : ಮಧ್ಯಪ್ರದೇಶ ಸಿಎಂ ಆಗಿ ಕಮಲನಾಥ್‌ ಆಯ್ಕೆ

05:30 AM Dec 14, 2018 | Team Udayavani |

ಹೊಸದಿಲ್ಲಿ/ಹೈದರಾಬಾದ್‌: ಅಂತೂ ಇಂತೂ ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪಕ್ಷದ ಹಿರಿಯ ನಾಯಕ ಕಮಲ್‌ನಾಥ್‌ ಅವರನ್ನು ಅಂತಿಮಗೊಳಿಸಿದೆ. ಗುರುವಾರ ತಡರಾತ್ರಿ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಅಕೌಂಟ್‌ ಮೂಲಕ ಕಮಲ್‌ನಾಥ್‌ ಆಯ್ಕೆಯನ್ನು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಗಾದಿ ಪೈಪೋಟಿಯಲ್ಲಿ ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶರಣಾಗಿದ್ದಾರೆ. 2019ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಿರಿಯರಿಗೇ ಮಣೆ ಹಾಕಿದ್ದಾರೆ.

Advertisement

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿ ಹೊಮ್ಮಿದ್ದರೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ಪೈಪೋಟಿಯಿಂದಾಗಿ ಬುಧವಾರವಿಡೀ ಮುಖ್ಯಮಂತ್ರಿ ಹುದ್ದೆ ಯಾರಿಗೆಂದು ಅಂತಿಮವಾಗಿರಲಿಲ್ಲ. ಗುರುವಾರವೂ ಈ ಸಂಬಂಧ ದಿನವಿಡೀ ಚರ್ಚೆ, ಸಮಾಲೋಚನೆ ನಡೆದವು. ಇಬ್ಬರೂ ನಾಯಕರು ದಿಲ್ಲಿಗೆ ಆಗಮಿಸಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಮಾತುಕತೆ ನಡೆಸಿದರು. ಅಂತಿಮವಾಗಿ ಕಮಲ್‌ನಾಥ್‌ ಹೆಸರು ಘೋಷಣೆಯಾಯಿತು.

ರಾಜಸ್ಥಾನದಲ್ಲಿ ಕಗ್ಗಂಟು
ಅತ್ತ ರಾಜಸ್ಥಾನದಲ್ಲಿ ಸಿಎಂ ಗಾದಿ ಕಗ್ಗಂಟು ಮುಂದುವರಿದಿದೆ. ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೊಟ್‌ ಜತೆಗೆ ರಾಹುಲ್‌ ಗಾಂಧಿ ಸತತ ಮಾತುಕತೆ ನಡೆಸಿದ್ದಾರೆ. ಇಲ್ಲಿ ಹಿರಿಯರಾದ ಅಶೋಕ್‌ ಗೆಹ್ಲೊಟ್‌ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸಚಿನ್‌ ಪೈಲಟ್‌, ತಾನು ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷನಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಸಿಎಂ ಗಾದಿ ನನ್ನ ಹಕ್ಕಾಗಿದ್ದು, ನನಗೇ ಅವಕಾಶ ಕೊಡಬೇಕು ಎಂದು ರಾಹುಲ್‌ ಮುಂದೆ ಪ್ರತಿಪಾದಿಸಿದ್ದಾರೆ ಎಂದು ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ.

ಹಿಂಸಾಚಾರ
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಸಚಿನ್‌ ಪೈಲಟ್‌ಗೆ ಕೊಡಬೇಕು ಎಂದು ಗುಜ್ಜರ್‌ ಸಮುದಾಯ ಒತ್ತಾಯಿಸಿದೆ. ಜತೆಗೆ ಆಗ್ರಾ- ಜೈಪುರ ಹೆದ್ದಾರಿಯ ಅಲ್ಲಲ್ಲಿ ಪ್ರತಿಭಟನೆಗಳನ್ನೂ ನಡೆಸಲಾಗಿದೆ. ಕೆಲವೆಡೆ ಬಸ್‌ ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. 

ಆ್ಯಪ್‌ ಮೂಲಕ ಸಿಎಂ ಆಯ್ಕೆ
ಕಾರ್ಯಕರ್ತರೊಂದಿಗೆ ನೇರವಾಗಿ ವ್ಯವಹರಿಸಲು ರಾಹುಲ್‌ ಗಾಂಧಿ ಬಳಸಿದ ‘ಶಕ್ತಿ’ ಆ್ಯಪ್‌ ಅನ್ನು ಈಗ ಸಿಎಂ ಆಯ್ಕೆಗೂ ಬಳಸಿಕೊಳ್ಳಲಾಗಿದೆ. ಆದರೆ ಅದರ ವಿವರ ಬಹಿರಂಗಗೊಳಿಸಿಲ್ಲ.

Advertisement

ಇಂದು ತೀರ್ಮಾನ?
ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಶುಕ್ರವಾರ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ದಿಲ್ಲಿಯಲ್ಲಿ ಸಮಾಲೋಚನೆಯೂ ನಡೆದಿದೆ. ಇದೇ ವೇಳೆ ರಾಯ್‌ಪುರದಲ್ಲಿ ಪಕ್ಷದ ನಾಯಕ ಭೂಪೇಶ್‌ ಬಘೇಲ್‌ ನಿವಾಸದ ಮುಂದೆ ಘರ್ಷಣೆ ನಡೆದಿದೆ. ಟಿ.ಎಸ್‌.ಸಿಂಗ್‌ ದೇವ್‌, ತಾಮ್ರಧ್ವಜ ಸಾಹೂ, ಚರಣ್‌ ದಾಸ್‌ ಮಹಾಂತ್‌ ಸಿಎಂ ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next