ಕಮಲನಗರ: ತಾಲೂಕಿನ ಸೋನಾಳದಿಂದ- ಕಮಲನಗರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತುಂಬ ತಗ್ಗು ಗುಂಡಿಗಳೇ ತುಂಬಿವೆ. ಇದರಿಂದ ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಹಲವು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ರಸ್ತೆಯ ಬಹುತೇಕ ಕಡೆ ಜಲ್ಲಿಕಲ್ಲು ಹೊರಬಂದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ ಎಂದು ಸೋನಾಳ ಗ್ರಾಮದ ಅಂಕೋಶ ಹಣಮಶೆಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋನಾಳದಿಂದ ಕಮಲನಗರಕ್ಕೆ ತೆರಳುವ ಮುಖ್ಯ ರಸ್ತೆ ಇದಾಗಿರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಖಾಸಗಿ, ಶಾಲಾ ವಾಹನ, ಸಾರಿಗೆ ಬಸ್, ಲಾರಿ, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಆದರೂ ಸಂಬಂಧಿಸಿದವರ ನಿಷ್ಕಾಳಜಿಯಿಂದ ಸುಗಮ ಸಂಚಾರಕ್ಕೆ ಬಾರದಂತಾಗಿದೆ.
ಗ್ರಾಮಸ್ಥರು ಹದಗೆಟ್ಟ ರಸ್ತೆಯ ಬಗ್ಗೆ ಹಲವು ಬಾರಿ ಸಂಬಂಧಿತ ಅಧಿಕಾರಿ ಮತ್ತು ಚುನಾಯಿತ ಪ್ರತಿನಿಧಿ ಗಳ ಗಮನಕ್ಕೆ ತಂದು,
ಹೊಸ ರಸ್ತೆ ನಿರ್ಮಿಸುವಂತೆ ಮನವಿ ಕೂಡ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ವ್ಯಾಪಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ, ಬ್ಯಾಂಕ್‌ಗಳಿಗೆ, ತಹಶೀಲ್ದಾರ್ ಕಚೇರಿಗೆ ಹಾಗೂ ಮುಂತಾದ ಕಾರ್ಯ ನಿಮಿತ್ತ ನಿತ್ಯ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೆ ಇಲ್ಲಿ ಸಂಚಾರ ಸಂಕಟ ಹೇಳತೀರದಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಒದಗಿಸಬೇಕು ಎಂದು ಸೋನಾಳ ಗ್ರಾಮದ ಶ್ರೀಕಾಂತ ಜಡಗೆ, ಮಹೇಶ ಬಿರಾದಾರ, ಬಸವರಾಜ ಇಸರಣ್ಣಾ, ಅರುಣ ಇಸರಣ್ಣಾ ಒತ್ತಾಯಿಸಿದ್ದಾರೆ.
ಸೋನಾಳ-ಕಮಲನಗರ ಮುಖ್ಯ ರಸ್ತೆ ಬಹು ವರ್ಷಗಳಿಂದ
ಹಾಳಾಗಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಶೀಘ್ರದಲ್ಲಿ ರಸ್ತೆ ಅಭಿವೃದ್ಧಿಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು
ಮಾಡಿಕೊಡಬೇಕು.
ಆನಂದ ಬಿರಾದಾರ, ಕರವೇ
ಕಮಲನಗರ ವಲಯ ಅಧ್ಯಕ್ಷ
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಹು ವರ್ಷಗಳಿಂದ
ಹದಗೆಟ್ಟಿದೆ. ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವಂತಾಗಿದೆ.
ಪ್ರೇಮಕುಮಾರ ಘಾಳೆ,
ಸೋನಾಳ ಗ್ರಾಮಸ್ಥ
ವೈಜಿನಾಥ ವಡ್ಡೆ