ಕಮಲನಗರ: ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಸೋಯಾಬಿನ್ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ. ಗಳ ಸೋಯಾ ಬೆಳೆ ನಷ್ಟವಾದ ಘಟನೆ ಮಂಗಳವಾರ ರಾತ್ರಿ ಜರುಗಿದೆ. ರೈತ ವಿಠ್ಠಲರಾವ್ ವೆಂಕಟರಾವ್ ಅವರು ತಮ್ಮ 3.24 ಎಕರೆ ಜಮೀನಿನಲ್ಲಿ ಸೋಯಾಬಿನ್ ಬೆಳೆ ಕಟಾವು ಮಾಡಿ ಬಣವಿ ಹಾಕಿದ್ದರು. ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 80 ಸಾವಿರ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸೋಯಾ ಬೆಳೆ ಹಾಳಾಗಿದ್ದು, ಅಲ್ಪ-ಸ್ವಲ್ಪ ಇರುವ ಸೋಯಾ ಬೆಳೆ ಕಟಾವು ಮಾಡಿ ಬಣವಿ ಹಾಕಿದ್ದೆ. ಸ್ವಲ್ಪ ಒಣಗಿಸಿ ರಾಶಿ ಮಾಡಿಕೊಳ್ಳೋಣ ಎನ್ನುವಷ್ಟರಲ್ಲಿ ಅದೂ ಕೂಡಾ ಕೈಗೆ ಬಾರದೆ ಬೆಂಕಿಗೆ ಸುಟ್ಟು ಹೋಗಿದೆ ಎಂದು ರೈತ ವಿಠ್ಠಲರಾವ್ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ರೈತ ವೆಂಕಟರಾವ್ ದೂರು ಸಲ್ಲಿಸಿದ್ದಾರೆ. ಎಎಸ್‌ಐ ಚಿದಾನಂದ ಹಿರೇಮಠ, ಎಚ್‌ಸಿ ಗುರುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ :ಚಿತ್ರದುರ್ಗ ಜಿಲ್ಲೆಯಲ್ಲಿ 182 ಜನರಿಗೆ ಕೋವಿಡ್, ಸೋಂಕಿತರ ಸಂಖ್ಯೆ 8,292ಕ್ಕೆ ಏರಿಕೆ
ಅಗ್ನಿಶಾಮಕ ಠಾಣೆ ಆರಂಭಿಸಿ: ಕಮಲನಗರ ತಾಲೂಕಿನಲ್ಲಿ ಅಗ್ನಿ ಅವಘಡ ಸಂಭವಿಸಿದರೆ ತುರ್ತು ಪರಿಸ್ಥಿತಿಯಲ್ಲಿ ಔರಾದ ಮತ್ತು ಭಾಲ್ಕಿ ತಾಲೂಕು ಕೇಂದ್ರಗಳಿಂದ ವಾಹನಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ಔರಾದ ಪಟ್ಟಣ ಸುಮಾರು 30 ಕಿ.ಮೀ. ಹಾಗೂ ಭಾಲ್ಕಿ ಸುಮಾರು 35 ಕಿ.ಮೀ. ಅಂತರದಲ್ಲಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ವಾಹನಗಳು ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವ ಅನೇಕ ಘಟನೆಗಳು ಜರುಗಿವೆ.
ಸಂಬಂಧಿತ ಅಧಿಕಾರಿಗಳು ಶೀಘ್ರದಲ್ಲಿ ಕಮಲನಗರಕ್ಕೆ ಅಗ್ನಿಶಾಮಕ ಇಲಾಖೆ ಆರಂಭಿಸಬೇಕೆಂದು ಮುಖಂಡ ಶ್ರೀರಂಗ ಆಗ್ರಹಿಸಿದ್ದಾರೆ.