Advertisement

ಕಮಲಾಕ್ಷಿ ಸಹಕಾರ ಸಂಘದಲ್ಲಿ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್‌ ಖಾತೆ ಸ್ಥಗಿತಕ್ಕೆ ನಿರ್ಧಾರ

07:30 PM Dec 30, 2022 | Team Udayavani |

ಉಡುಪಿ : ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಅದರ ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು (ಡೆಬಿಟ್‌ ಫ್ರೀಜ್‌) ಪೊಲೀಸ್‌ ಇಲಾಖೆ ಸಂಬಂಧಪಟ್ಟವರಿಗೆ ಪತ್ರ ಬರೆದಿದೆ.

Advertisement

ಆರೋಪಿಗಳಾದ ಬಿ.ವಿ. ಲಕ್ಷ್ಮೀನಾರಾಯಣ ಅಧ್ಯಕ್ಷರಾಗಿರುವ ಈ ಸೊಸೈಟಿಯಲ್ಲಿ ರವಿ ಉಪಾಧ್ಯ, ಬಿ.ವಿ.ಬಾಲಕೃಷ್ಣ, ಭಾಸ್ಕರ್‌ ಉಪಾಧ್ಯ, ಉದಯ ಉಪಾಧ್ಯ, ರಾಧಿಕಾ, ಸುಜಾತಾ ಅವರು ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ.

ಸಂಘದವರು ಸಾರ್ವಜನಿಕರಿಗೆ ಶೇ. 10ರಿಂದ 12ರ ವರೆಗೆ ಬಡ್ಡಿದರ ನೀಡುವುದಾಗಿ ಸುಮಾರು 700 ಜನರಿಂದ 40ರಿಂದ 50 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ 2022ರ ಜೂನ್‌ನಿಂದ ಹೂಡಿಕೆದಾರರಿಗೆ ಬಡ್ಡಿಯನ್ನು ನೀಡದೆ ಕಚೇರಿಯನ್ನು ಮುಚ್ಚಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು. ಈಗಾಗಲೇ ನ್ಯಾಯಾಲಯದಿಂದ ಸರ್ಚ್‌ ವಾರಂಟ್‌ ಪಡೆದು ತನಿಖೆಗೆ ಅಗತ್ಯ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಸಹಕಾರಿ ಸಂಘದ ಕಚೇರಿಯನ್ನು ಸೀಲ್‌ ಮಾಡಲಾಗಿದೆ.

ಸಂಘಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಆಸ್ತಿಗಳಿವೆ ಅವುಗಳನ್ನು ಗುರುತಿಸಿ, ಆ ಆಸ್ತಿಗಳನ್ನು ಪರಭಾರೆ ಮಾಡಬಾರದು ಎಂದು ನಗರಸಭೆ ಪೌರಾಯುಕ್ತರು, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಉಪನೋಂದಣಾಧಿಕಾರಿಯವರಿಗೆ ಕೋರಿಕೆ ಪತ್ರಗಳನ್ನು ಸಲ್ಲಿಸಲಾಗಿದೆ. ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಬ್ಯಾಂಕ್‌ ಹಾಗೂ ಸೊಸೈಟಿಗಳಲ್ಲಿ ಇರುವ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಎಲ್ಲ ಬ್ಯಾಂಕ್‌ ಹಾಗೂ ಸೊಸೈಟಿಗಳಿಗೆ ಕೋರಿಕೆ ಪತ್ರ ಸಲ್ಲಿಸಲಾಗಿದೆ.

ವರದಿ ನೀಡಲು ಸೂಚನೆ
ಜಿಲ್ಲಾ ಸಹಕಾರ ಸಂಘಗಳ ಉಪ-ನಿಬಂಧಕರಿಗೆ ಈ ಸಂಘದಲ್ಲಿ ನಡೆದ ವಂಚನೆ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಪ್ರಮುಖ ಆರೋಪಿ ಬಿ.ವಿ. ಲಕ್ಷ್ಮೀನಾರಾಯಣನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಸಂದರ್ಭಕ್ಕನುಸಾರವಾಗಿ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Advertisement

ದಾಖಲೆ ಸಲ್ಲಿಸದ ಹೂಡಿಕೆದಾರರು!
ಈ ಪ್ರಕರಣದಲ್ಲಿ ಈಗಾಗಲೇ 100 ಜನ ಹೂಡಿಕೆದಾರರು ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ನೀಡಿದ್ದು, ಇನ್ನೂ 500ರಿಂದ 600 ಜನ ಹೂಡಿಕೆದಾರರು ದಾಖಲೆಗಳನ್ನು ತನಿಖೆ ಸಲುವಾಗಿ ಹಾಜರುಪಡಿಸಲು ಬಾಕಿ ಇದೆ. ಸಂಘ ಹಾಗೂ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ವಿವರ ಸಲ್ಲಿಸಲಾಗುವುದು. ಆಸ್ತಿಗಳನ್ನು ನಿಯಮಾನುಸಾರ ವಿಲೇ ಮಾಡಿ ಹೂಡಿಕೆದಾರರಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಂಘದಲ್ಲಿ ಹೂಡಿಕೆ ಮಾಡಿ ದೂರು ನೀಡದೇ ಇದ್ದವರು ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಬಹುದು ಎಂದು ಎಸ್‌ಪಿ ಹಾಗೂ ಸೆನ್‌ ಠಾಣೆಯ ನಿರೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೊಂದು ಮಾದಕ ವಸ್ತು ಮಾರಾಟ ಮಳಿಗೆ! ಇದು ಸರ್ಕಾರದಿಂದಲೇ ಪರವಾನಗಿ ಹೊಂದಿರುವ ಮೊದಲ ಮಳಿಗೆ

Advertisement

Udayavani is now on Telegram. Click here to join our channel and stay updated with the latest news.

Next