Advertisement

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್

12:46 PM Nov 08, 2020 | keerthan |

ವಾಷಿಂಗ್ಟನ್ ಡಿಸಿ: ಡೆಮಾಕ್ರೆಟಿಕ್‌ ಪಕ್ಷ ಶ್ವೇತಭವನವನ್ನು ಪ್ರವೇಶಿಸಲಿರುವ ಈ ಹೊತ್ತಲ್ಲೇ, ಬೈಡೆನ್‌ರ ಅನಂತರ ಬಹುಚರ್ಚೆಯಲ್ಲಿರುವ ಹೆಸರೆಂದರೆ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರದ್ದು.

Advertisement

ಡೆಮಾಕ್ರೆಟಿಕ್‌ ಪಕ್ಷ ಅಧಿಕಾರ ವಹಿಸಿಕೊಳ್ಳಲಿದ್ದು, ಕಮಲಾ ಹ್ಯಾರಿಸ್‌ ಹಲವು ವಿಧಗಳಲ್ಲಿ ಇತಿಹಾಸ ರಚಿಸಲಿದ್ದಾರೆ. ಜಮೈಕಾ ಮೂಲದ ತಂದೆ, ಭಾರತೀಯ ಮೂಲದ ತಾಯಿಯ ಸಂತಾನವಾದ ಕಮಲಾ ಹ್ಯಾರಿಸ್‌, ಅಮೆರಿಕದಲ್ಲಿನ ಮೊದಲ ಕಪ್ಪುವರ್ಣೀಯ, ಮೊದಲ ಭಾರತೀಯ ಅಮೆರಿಕನ್‌ ಹಾಗೂ ಮೊದಲ ದಕ್ಷಿಣ ಏಷ್ಯನ್‌ ಉಪಾಧ್ಯಕ್ಷೆಯಾಗಲಿದ್ದಾರೆ. ಅಲ್ಲದೇ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿಯೂ ದಾಖಲೆ ಬರೆಯಲಿದ್ದಾರೆ.

ಉಪಾಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆಯಾದದ್ದೇ ಹ್ಯಾರಿಸ್‌ ಅವರು ಭಾರತೀಯ ಮೂಲದ ಮತದಾರರು, ಏಷ್ಯನ್ನರು ಹಾಗೂ ಕಪ್ಪುವರ್ಣೀಯರನ್ನು ಸೆಳೆಯುವ ಪ್ರಯತ್ನಕ್ಕೆ ಧುಮುಕಿದರು. ಅಮೆರಿಕದಲ್ಲಿ 45 ಲಕ್ಷ ಭಾರತೀಯರಿದ್ದು, ಇವರಲ್ಲಿ 19 ಲಕ್ಷ ಜನ ಮತದಾನಕ್ಕೆ ಅರ್ಹರು.

ಭಾರತೀಯ ಮೂಲದ ಮತದಾರರು ಎಲ್ಲಿ ಕಮಲಾ ಪರ ವಾಲುತ್ತಾರೋ ಎಂಬ ಎಚ್ಚರಿಕೆಯಿಂದ ಟ್ರಂಪ್‌, ಪ್ರಚಾರ ಕಾರ್ಯಗಳ ಆರಂಭದಿಂದಲೂ ಅವರನ್ನು ಟಾರ್ಗೆಟ್‌ ಮಾಡುತ್ತಾ ಬಂದರು. ಒಂದು ಸಮಯದಲ್ಲಂತೂ ಕಮಲಾರನ್ನು “ಕೆಟ್ಟ’ ಹಾಗೂ “ರಾಕ್ಷಸಿ’ ಗುಣದ ಮಹಿಳೆ ಎಂದೂ ಮೂದಲಿಸಿದ್ದರು ಟ್ರಂಪ್‌. ಇನ್ನು ಟ್ರಂಪ್‌ರ ತಂಡವು ಬೇಕಂತಲೇ ಕಮಲಾರ ಹೆಸರನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಾ ಬಂದಿತು ಎನ್ನಲಾಗುತ್ತದೆ.

Advertisement

ಕಮಲಾ ಹೊರಗಿನವರು ಎಂದು ಬಿಂಬಿಸುವುದಕ್ಕಾಗಿ ಹೀಗೆ ಹೆಸರನ್ನು ತಪ್ಪಾಗಿ ಉಚ್ಚರಿಸಲಾಗುತ್ತಿದೆ ಎಂದು ಡೆಮಾಕ್ರಾಟ್‌ಗಳು ದೂರಿದರು. ಕಾರ್ನೆಗಿ ವರದಿಯ ಪ್ರಕಾರ, ಭಾರತೀಯ ಮೂಲದ ಮತದಾರರನ್ನು ಹಾಗೂ ಮುಖ್ಯವಾಗಿ ಡೆಮಾಕ್ರಾಟ್ ಗಳ ಮನಗೆಲ್ಲುವಲ್ಲಿ ಕಮಲಾ ಯಶಸ್ವಿಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಾಗ ಕಮಲಾ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದರು- “ಅಂದು ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದರಲ್ಲಿ 25ರ ಹರೆಯದ ಅಮ್ಮ ನನಗೆ ಜನ್ಮ ನೀಡಿದಾಗ, ಮುಂದೊಂದು ದಿನ ತನ್ನ ಮಗಳು ಉಪಾಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿಯಾಗುತ್ತಾಳೆ, ಈ ರೀತಿ ನಿಮ್ಮೆದುರಲ್ಲಿ ನಿಂತು ಭಾಷಣ ಮಾಡುತ್ತಾಳೆ ಎಂದು ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ. ಆಕೆಯ ನೆನಪು ನನ್ನನ್ನು ಬಹಳ ಕಾಡುತ್ತದೆ. ಆದರೆ ಆಕೆ ಮೇಲಿಂದ ಎಲ್ಲವನ್ನೂ ಗಮನಿಸುತ್ತಿದ್ದಾಳೆ ಎನ್ನುವುದು ಬಲ್ಲೆ’ ಎಂದಿದ್ದರು.

ಇದನ್ನೂ ಓದಿ:ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಭರ್ಜರಿ ಗೆಲುವು! 46ನೇ ಅಧ್ಯಕ್ಷರಾಗಿ ಆಯ್ಕೆ

ಆದರೆ ಕೆಲವು ವಿಚಾರಗಳಲ್ಲಿ ಕಮಲಾ ಬಗ್ಗೆ ಭಾರತೀಯ ಅಮೆರಿಕನ್ನರಿಗೆ ಅಸಮಧಾನವೂ ಇದೆ. ಮೊದಲಿನಿಂದಲೂ ಕಮಲಾ ತಮ್ಮನ್ನು ಕಪ್ಪುವರ್ಣೀಯ ಮಹಿಳೆ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು, ಆದರೆ ಚುನಾವಣೆ ಎದುರಾದದ್ದೇ ಅವರು ತಮ್ಮ ಭಾರತೀಯ ಮೂಲವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಇನ್ನು ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕಮಲಾ ಹ್ಯಾರಿಸ್‌ ಪಾಕಿಸ್ಥಾನ ಪರ ಲಾಬಿಗಳ ಮಾತು ಕೇಳಿಕೊಂಡು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದವರು ಎನ್ನುವುದು ಟೀಕಾಕಾರರವಾದ.

ಆದರೂ, ಕ್ಯಾಲಿಫೋರ್ನಿಯಾದ ಆಕ್ಲಂಡ್‌ ನಲ್ಲಿ ಸರಕಾರಿ ವಕೀಲರಾಗಿದ್ದ ಕಮಲಾ ಹ್ಯಾರಿಸ್‌, 2016ರಲ್ಲಿ ಸೆನೆಟ್‌ಗೆ ಆಯ್ಕೆಯಾದಾಗಲೂ ಕೂಡ ಮುಂದೆ ಅವರು ಉಪಾಧ್ಯಕ್ಷ ಪದವಿಯತ್ತ ದಾಪುಗಾಲಿಡಲಿದ್ದಾರೆ ಎಂದು ಯಾರೂ ಅಂದಾಜಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next