Advertisement

ಕಮಲ್‌-ರಜನಿ ನಡೆ ಹುಟ್ಟಿಸಿದೆ ಕೌತುಕ ರಾಜಕೀಯ ಕದನ ಕುತೂಹಲ

10:39 AM Sep 23, 2017 | Team Udayavani |

ತಮಿಳು ಸೂಪರ್‌ಸ್ಟಾರ್‌ಗಳಾದ ಕಮಲಹಾಸನ್‌ ಮತ್ತು ರಜನೀಕಾಂತ್‌ ರಾಜಕೀಯ ಪ್ರವೇಶ ಸದ್ಯಕ್ಕೆ ಭಾರೀ ಚರ್ಚಿತ ವಿಷಯ. ಸಿನೆಮಾ ರಂಗದಲ್ಲಿ ಇಬ್ಬರೂ ಸಮಕಾಲೀನರು. ಇಬ್ಬರ ನಡುವೆ ಹಲವು ಸಾಮ್ಯತೆಗಳು, ವೈರುಧ್ಯಗಳಿವೆ. ಜನಪ್ರಿಯತೆಯಲ್ಲಿ ಒಬ್ಬರನ್ನು ಮೀರಿಸುವಂತೆ ಇನ್ನೊಬ್ಬರಿದ್ದಾರೆ. 60ರ ಆಸುಪಾಸಿನಲ್ಲಿದ್ದರೂ ಅವರ ಜನ ಪ್ರಿಯತೆ ಮುಕ್ಕಾಗಿಲ್ಲ. ಕಮಲಹಾಸನ್‌ ಪ್ರಯೋಗಶೀಲತೆ ಮತ್ತು ವೈವಿಧ್ಯಗಳಿಂದ ಮೇರು ಹಂತ ತಲುಪಿದರೆ ರಜನೀಕಾಂತ್‌ ವಿಶಿಷ್ಟ ಮ್ಯಾನರಿಸಂಗಳಿಂದ ತಮಿಳರ ಹೃದಯಕ್ಕೆ ಲಗ್ಗೆ ಹಾಕಿ ಆರಾಧ್ಯ ದೇವರಾಗಿದ್ದಾರೆ. ಕಮಲ್‌ ಎಂದರೆ ಬುದ್ಧಿವಂತಿಕೆ, ರಜನಿ ಎಂದರೆ ಜನಪ್ರಿಯತೆ ಎಂಬ ಅಭಿಪ್ರಾಯ ತಮಿಳುನಾಡಿನಲ್ಲಿ ಇತ್ತು. ನಾವು ಆತ್ಮೀಯ ಸ್ನೇಹಿತರೆಂದು ಇಬ್ಬರೂ ಹೇಳಿಕೊಳ್ಳುತ್ತಿದ್ದರೂ ವೃತ್ತಿ ಬದುಕಿನುದ್ದಕ್ಕೂ ಪ್ರತಿಸ್ಪರ್ಧಿಗಳಾಗಿದ್ದರು. ಇದೀಗ ಇಳಿ ವಯಸ್ಸಿನಲ್ಲಿ ರಾಜಕೀಯ ರಂಗದ ಹೊಸ್ತಿಲಲ್ಲಿ ಅವರು ಎದುರುಬದುರಾಗಿ ನಿಂತಿರುವುದು ಅವರ ಸಿನೆಮಾ ರಂಗದ ಸ್ಪರ್ಧೆಯ ವಿಸ್ತರಿತ ರೂಪದಂತೆ ಕಾಣಿಸುತ್ತಿದೆ. 

Advertisement

ಕಮಲ್‌ ಮತ್ತು ರಜನಿ ರಾಜಕೀಯವನ್ನು ಗಂಭೀರವಾಗಿ ತೆಗೆದು ಕೊಂಡಿರುವುದು ಜಯಲಲಿತಾ ನಿಧನದ ಬಳಿಕ. ಕಮಲ್‌ ಪಾಲಿಗಂತೂ ರಾಜಕೀಯ ತೀರಾ ಹೊಸ ಕ್ಷೇತ್ರ. ರಜನಿ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಕೊಂಡಿರದಿದ್ದರೂ 1996ರಲ್ಲಿ ವಿಪಕ್ಷದತ್ತ ವಾಲುವ ಮೂಲಕ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಜನಿಯ ಒಂದು ಹೇಳಿಕೆಯ ಪರಿಣಾಮ ಎಐಎಡಿಎಂಕೆ ಸೋಲಾಗಿತ್ತು. ಅನಂತರ ರಜನಿ 2014ರ ಚುನಾವಣೆಯಲ್ಲಿ ಬಿಜೆಪಿಯತ್ತ ವಾಲಿದರು. ಇದರಿಂದ ಬಿಜೆಪಿಗೆ ತಮಿಳುನಾಡಿನಲ್ಲಿ ಲಾಭವಾಗದಿದ್ದರೂ ಪಕ್ಷ ಬಲಪಡಿಸಲು ಅವಕಾಶ ಸಿಕ್ಕಿದೆ. ರಜನಿ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ. ಹೀಗಾಗಿ ಅವರು ಬಿಜೆಪಿಯತ್ತ ಸರಿಯಬಹುದು ಎಂಬ ನಿರೀಕ್ಷೆ ಬಹಳ ಕಾಲದಿಂದ ಇತ್ತು. ಅದಕ್ಕೆ ತಕ್ಕಂತೆ ರಜನಿ ಕೂಡ ಆಗಾಗ ಹೇಳಿಕೆಗಳನ್ನು ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ತನ್ನ ಅಭಿಮಾನಗಳಿಗೆ ಯುದ್ಧಕ್ಕೆ ತಯಾರಾಗಿ ಎಂದು ಹೇಳಿದಾಗ ರಜನಿ ರಾಜಕೀಯ ಪ್ರವೇಶ ಆಗಿಯೇ ಹೋಯಿತು ಎಂದು ಭಾವಿಸಲಾಗಿತ್ತು. ಆದರೆ ನಂತರ ಮುಂದಿನ ನಡೆಯಿರಿಸಿಲ್ಲ. ರಜನಿಗಿಂತಲೂ ಬಿಜೆಪಿಗೆ ಅವರು ರಾಜಕೀಯಕ್ಕೆ ಬರುವುದು ಅತೀ ಅಗತ್ಯವಾಗಿದೆ. 

ರಜನೀಕಾಂತ್‌ ರಾಜಕೀಯ ಪ್ರವೇಶಿಸುವುದು ಬೇಡ ಎಂದು ಮೇ ತಿಂಗಳಲ್ಲಷ್ಟೇ ಬಹಿರಂಗವಾಗಿ ಹೇಳಿದ್ದ ಕಮಲಹಾಸನ್‌ ಈಗ ಸ್ವತಃ ತಾನು ರಾಜಕೀಯ ಪ್ರವೇಶಿಸಲು ತಯಾರಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಜನಿಗಿಂತ ಕಮಲ್‌ ನಡೆಗಳು ಹೆಚ್ಚು ಕ್ಷಿಪ್ರ ಮತ್ತು ಕರಾರುವಾಕ್ಕಾಗಿವೆ. ಕಳೆದ ತಿಂಗಳು ಅವರು ಕೇರಳ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿದ್ದರು. ಎರಡು ದಿನಗಳ ಹಿಂದೆ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಸ್ವತಃ ಚೆನ್ನೈಗೆ ಬಂದು ಮಾತುಕತೆ ನಡೆಸಿ ಹೋಗಿದ್ದಾರೆ. ಈ ಎರಡು ಭೇಟಿಗಳು ರಾಷ್ಟ್ರ ರಾಜಕೀಯದಲ್ಲೂ ಗಮನ ಸೆಳೆದಿವೆ. ಬಿಜೆಪಿ ವಿರೋಧಿ ಶಕ್ತಿಗಳನ್ನು ಭೇಟಿ ಮಾಡುವ ಮೂಲಕ ಕಮಲ್‌ ತನ್ನ ಭವಿಷ್ಯದ ನಡೆಗಳ ಸುಳಿವೊಂದನ್ನು ನೀಡಿದ್ದಾರೆ. ತನ್ನನ್ನು ಎಡಪಂಥೀಯ ಸಿದ್ಧಾಂತವಾದಿ ಎನ್ನುವ ಮೂಲಕ ತನ್ನ ರಾಜಕೀಯ ಪರಿಧಿಯನ್ನು ಅಲ್ಲಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ರಾಜ್ಯದ ಎಐಎಡಿಎಂಕೆ ಸರಕಾರ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಕಮಲ್‌ಮಾಡುತ್ತಿರುವ ಟೀಕೆಗಳನ್ನು ಗಮನಿಸಿದರೆ, ಸಾಂಪ್ರದಾಯಿಕ ರಾಜಕಾರಣಿಯಾಗುವ ಎಲ್ಲ ಅರ್ಹತೆಗಳು ಅವರಿಗಿರುವಂತೆ ಕಾಣಿಸುತ್ತದೆ. ಆದರೆ ಸದ್ಯ ಮೇರುನಟರಿಬ್ಬರು ಯಾವುದೇ ಪಕ್ಷ ಸೇರುವ ಇರಾದೆ ಹೊಂದಿಲ್ಲ. ಸ್ವತಂತ್ರಪಕ್ಷ ಸ್ಥಾಪಿಸುವುದು ಅವರ ಉದ್ದೇಶವಾಗಿರುವಂತೆ ಕಾಣಿಸುತ್ತಿದೆ. 

ಸಿನೆಮಾ ನಟರು ರಾಜಕೀಯ ಪ್ರವೇಶಿಸುವುದರಿಂದ ತಮಿಳುನಾಡಿಗೆ ಲಾಭವಿದೆಯೇ ಎನ್ನುವುದು ಇಲ್ಲಿರುವ ಪ್ರಶ್ನೆ. ಏಕೆಂದರೆ ಅನೇಕ ವರ್ಷಗಳಿಂದ ತಮಿಳುನಾಡಿನಲ್ಲಿ ರಾಜ್ಯವಾಳಿರುವುದು ಸಿನೆಮಾದವರೇ. ಇದರಿಂದ ರಾಜ್ಯಕ್ಕೆ ಭಾರೀ ಎನ್ನುವಂಥ ಲಾಭವಾಗಿಲ್ಲ. ಸಿನೆಮಾಗಳಲ್ಲಿ ನಟಿಸಿದ್ದಾರೆ ಎನ್ನುವುದನ್ನು ಬಿಟ್ಟರೆ ಅವರ ಉಳಿದ ಸಾಧನೆಯೇನು? ಸುನಾಮಿ, ಪ್ರವಾಹ ಸೇರಿದಂತೆ ರಾಜ್ಯ ಹಲವು ಭೀಕರ ವಿಕೋಪಗಳನ್ನು ಎದುರಿಸಿದಾಗ ಯಾವ ನೆರವೂ ನೀಡದ ಮೇರುನಟರು ಈಗ ರಾಜ ಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವುದರ ಹಿಂದಿನ ಕಾರಣವೇನು? ಇಷ್ಟಕ್ಕೂ ಜನರು ಈಗಲೂ ಸಿನೆಮಾ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುವ ನಟರನ್ನು ಗೆಲ್ಲಿಸಿ ಕಳುಹಿಸುವಷ್ಟು ಅಮಾಯಕರಾಗಿಯೇ ಉಳಿದಿದ್ದಾರೆಯೆ?

Advertisement

Udayavani is now on Telegram. Click here to join our channel and stay updated with the latest news.

Next