ಭೋಪಾಲ್: ಕರ್ನಾಟಕದಲ್ಲಿ ಆಗಿರುವ ರಾಜಕೀಯ ಭೂಕಂಪದಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ಪತನದ ಭೀತಿ, ದೂರದ ಮಧ್ಯ ಪ್ರದೇಶದಲ್ಲೂ ತಲ್ಲಣ ಸೃಷ್ಟಿಸಿದೆ. ಅಲ್ಲಿ ಕಾಂಗ್ರೆಸ್ ಅಲ್ಪ ಬಹುಮತದ ಸರ್ಕಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್, ತಮ್ಮ ಪಕ್ಷದ ಹಾಗೂ ತಮ್ಮ ಮಿತ್ರಪಕ್ಷಗಳ ಶಾಸಕರನ್ನು ಬಿಜೆಪಿಯ ಆಮಿಷಗಳಿಂದ ದೂರವಿಡಲು ಹೊಸ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಹಾಗಾಗಿ, ಕರ್ನಾಟಕದಲ್ಲಿ ಆದಂತೆ ತಮಗೆ ಬೆಂಬಲ ನೀಡಿರುವ ಪಕ್ಷೇತರರು, ಬಿಎಸ್‌ಪಿ, ಎಸ್‌ಪಿ ಶಾಸಕರು ಅಥವಾ ಕಾಂಗ್ರೆಸ್‌ನದ್ದೇ ಶಾಸಕರು ಬಿಜೆಪಿಯ ಆಮಿಷಕ್ಕೆ ಒಳಗಾಗಬಹುದು ಎಂಬ ಭೀತಿ ಆವರಿಸಿದ್ದರಿಂದ ಕಮಲ್ನಾಥ್ ಅವರು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆಂದು ಹೇಳಲಾಗಿದೆ.
ಈಗಾಗಲೇ ತಮ್ಮ ಪಕ್ಷದ ಹಾಗೂ ಮಿತ್ರ ಪಕ್ಷಗಳ ಸದಸ್ಯರು ಹಾಗೂ ಪಕ್ಷೇತರ ಶಾಸಕರಿಗೆ ಮೌಖೀಕ ಸೂಚನೆ ನೀಡಿರುವ ಕಮಲ್ನಾಥ್, ಯಾರೂ ರಾಜಧಾನಿ ಬಿಟ್ಟು ಹೋಗದಂತೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಿಜೆಪಿ ಬೇರೆ ಲೆಕ್ಕಾಚಾರ: ಅಸಲಿಗೆ, ರಾಜ್ಯ ಸರ್ಕಾರ ಕೆಲವಾರು ತೀರ್ಮಾನಗಳು ಹಾಗೂ ಆರ್ಥಿಕತೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಸದನದಲ್ಲಿ ಪ್ರಶ್ನಿಸಿ ಮತದಾನಕ್ಕೊಡ್ಡುವ ಮೂಲಕ ಸರ್ಕಾರಕ್ಕೆ ಹಿನ್ನಡೆ ಉಂಟು ಮಾಡಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಂಥ ಸಂದರ್ಭ ಬಂದರೆ ಸರ್ಕಾರಕ್ಕೆ ಮತಗಳ ಕೊರತೆ ಆಗಬಾರದು ಎಂಬ ಉದ್ದೇಶವನ್ನು ಸಿಎಂ ಹೊಂದಿದ್ದು, ಇದನ್ನು ಸರ್ಕಾರದ ಶಾಸಕರಿಗೆ ಖುದ್ದು ಸಿಎಂ ಅವರೇ ತಿಳಿಸಿ ಹೇಳಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚಿತ್ರಣ
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಒಟ್ಟು 230 ಸ್ಥಾನಗಳಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷಕ್ಕೆ 116 ಸ್ಥಾನಗಳು ಬೇಕಿವೆ. ಕಾಂಗ್ರೆಸ್ 114 ಸ್ಥಾನ ಗಳಿಸಿದ್ದು, ಬಿಎಸ್‌ಪಿ (2), ಎಸ್‌ಪಿ (1) ಹಾಗೂ 4 ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಿದೆ. ಬಿಜೆಪಿ 109 ಸ್ಥಾನ ಹೊಂದಿದೆ.