ಚೆನ್ನೈ: ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ವಿವಾದವನ್ನು ಹುಟ್ಟುಹಾಕಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ್ದ ವೆಟ್ರಿಮಾರನ್ “ರಾಜ ರಾಜ ಚೋಳನ್ ಹಿಂದೂ ಅಲ್ಲ. ಆದರೆ ಅವರು (ಬಿಜೆಪಿ) ನಮ್ಮ ಗುರುತನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಅವರು ಈಗಾಗಲೇ ತಿರುವಳ್ಳುವರ್ ಅವರನ್ನು ಕೇಸರಿ ಮಾಡಲು ಪ್ರಯತ್ನಿಸಿದ್ದಾರೆ. ನಾವು ಎಂದಿಗೂ ಅವಕಾಶ ನೀಡಬಾರದು” ಎಂದು ಹೇಳಿದ್ದರು.
ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ವೆಟ್ರಿಮಾರನ್ ಹೇಳಿಕೆಯನ್ನು ನಟ ಕಮಲ್ ಹಾಸನ್ ಕೂಡಾ ಬೆಂಬಲಿಸಿದ್ದಾರೆ. “ರಾಜ ರಾಜ ಚೋಳನ್ ಅವಧಿಯಲ್ಲಿ ‘ಹಿಂದೂ ಧರ್ಮ’ ಎಂಬ ಹೆಸರಿರಲಿಲ್ಲ. ವೈನವಂ, ಶಿವಂ ಮತ್ತು ಸಮಾನಂ ಎಂದಿತ್ತು. ಇವೆಲ್ಲವನ್ನೂ ಒಟ್ಟಾಗಿ ಉಲ್ಲೇಖಿಸಲು ಬ್ರಿಟಿಷರು ‘ಹಿಂದೂ’ ಎಂಬ ಪದವನ್ನು ಸೃಷ್ಟಿಸಿದರು. ಅವರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಬದಲಾಯಿಸಿದಂತೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತ-ದ.ಆಫ್ರಿಕಾ: ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಋತುರಾಜ್- ಬಿಷ್ಣೋಯ್
ರಾಜ ರಾಜ ಚೋಳನ್‌ನಿಂದ ಪ್ರೇರಿತವಾದ ಕಾದಂಬರಿಯನ್ನು ಆಧರಿಸಿದ `ಪೊನ್ನಿಯಿನ್ ಸೆಲ್ವನ್: 1` ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ ವೆಟ್ರಿಮಾರನ್ ಅವರು ಹೇಳಿಕೆ ನೀಡಿದ್ದರು. ವೆಟ್ರಿಮಾರನ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಎಚ್ ರಾಜಾ, ‘ರಾಜರಾಜ ಚೋಳ ನಿಜವಾಗಿಯೂ ಹಿಂದೂ ರಾಜನಾಗಿದ್ದ’ ಎಂದು ಹೇಳಿಕೆ ನೀಡಿದ್ದಾರೆ.