Advertisement

ಕಲ್ಯಾಣಪುರ ಸಂತೆಕಟ್ಟೆ ಓವರ್‌ಪಾಸ್‌: 3 ಪಾಳಿ ಕೆಲಸಕ್ಕೆ ಸೂಚನೆ

06:21 PM Jan 13, 2023 | Team Udayavani |

ಉಡುಪಿ: ಸಂತೆಕಟ್ಟೆ ಓವರ್‌ ಪಾಸ್‌ ಕಾಮಗಾರಿಯನ್ನು ಮೂರು ಪಾಳಿಯಲ್ಲಿ ನಿರ್ವಹಿಸುವ ಮೂಲಕ ಮಳೆ ಶುರುವಾಗುವ ಮುನ್ನ ಮೇ-ಜೂನ್‌ ಒಳಗೆ ಬಹುತೇಕ ಪ್ರಮುಖ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆದ್ದಾರಿ ಎಂಜಿನಿಯರ್‌ ಗಳಿಗೆ ಮತ್ತು ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಗುರುವಾರ ರಾ. ಹೆ. 66 ಸಂತೆಕಟ್ಟೆ ಓವರ್‌ ಪಾಸ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಳೆಗಾಲದ ಒಳಗೆ ಡಿಗ್ಗಿಂಗ್‌ನಂತಹ ಪ್ರಮುಖ ಕಾಮಗಾರಿ ಪೂರ್ಣಗೊಳಿಸುವುದು ಮುಖ್ಯವಾಗಿದೆ.ಒಂದು ವರ್ಷದ ಒಳಗೆ ಓವರ್‌ಪಾಸ್‌ ವ್ಯವಸ್ಥಿತವಾಗಿ ಪೂರ್ಣಗೊಳ್ಳಬೇಕು.

ಸರ್ವಿಸ್‌ ರಸ್ತೆಯನ್ನು ಅಂಬಾಗಿಲುವರೆಗೆ ವಿಸ್ತರಿಸಲಾಗುತ್ತದೆ. ಈ ಬಗ್ಗೆ ಡಿಸಿ, ಎಸ್‌ಪಿ ಅವರು ನಿರಂತರ ನಿಗಾ ವಹಿಸಲಿದ್ದಾರೆ. ಕಾಮಗಾರಿ ಮುಗಿಯುವವರೆಗೆ ಜನತೆಯೂ ಸಹಕಾರ ನೀಡಬೇಕು. ಸಂಚಾರದಟ್ಟಣೆಯಿಂದ ಜನರಿಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಿರ್ವಹಿಸುವ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಎಚ್ಚರವಹಿಸಿ ಕಾಮಗಾರಿ ನಿರ್ವಹಿಸಬೇಕು ಎಂದರು.

ಕಟಪಾಡಿ, ಪಡುಬಿದ್ರಿ ಜಂಕ್ಷನ್‌ಗೂ ಮುಕ್ತಿ
ಹಿಂದಿನ ಸರಕಾರ ಅವೈಜ್ಞಾನಿಕ ಡಿಪಿಆರ್‌ ನಿಂದ ರಸ್ತೆ ನಿರ್ಮಿಸಿದ್ದು, ಸಾಕಷ್ಟು ವರ್ಷ ಜನರು ತೊಂದರೆಗೊಳಗಾಗುವಂತೆ ಆಗಿದೆ. ಬಹುತೇಕ ಕಡೆಗಳಲ್ಲಿ ಸರ್ವಿಸ್‌ ರಸ್ತೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸಂತೆಕಟ್ಟೆ ಜಂಕ್ಷನ್‌ ಅಪಘಾತ ವಲಯವಾಗಿ ಜನರಿಗೆ ಸಂಕಷ್ಟವಾಗಿ ಪರಿಣಮಿಸಿತ್ತು. ಜನರ ಬಹುಕಾಲದ ಓವರ್‌ಪಾಸ್‌ ಬೇಡಿಕೆಯನ್ನು ಕೇಂದ್ರ ಸರಕಾರದ ಈಡೇರಿಸಿದೆ.

ಸಂತೆಕಟ್ಟೆ ಓವರ್‌ ಪಾಸ್‌ 21.26 ಕೋ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅಂಬಲಪಾಡಿಯಲ್ಲಿಯೂ ಓವರ್‌ಪಾಸ್‌ ನಿರ್ಮಾಣದ ಕೆಲಸ ಒಂದು ತಿಂಗಳ ಒಳಗೆ ಶುರುವಾಗಲಿದೆ. ಕಟಪಾಡಿ, ಪಡುಬಿದ್ರಿ ಜಂಕ್ಷನ್‌ ಸಮಸ್ಯೆಗೂ ಶೀಘ್ರ ಮುಕ್ತಿ ಕಲ್ಪಿಸಲಾಗುವುದು ಎಂದು ಶೋಭಾ ತಿಳಿಸಿದರು.

Advertisement

ಗುಣಮಟ್ಟದ ಕಾಮಗಾರಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಯಾವುದೇ ಕಾರಣಕ್ಕೂ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲಿ ಟ್ರಾಫಿಕ್‌ ಸಮಸ್ಯೆಯಾದಲ್ಲಿ ದೊಡ್ಡಮಟ್ಟದಲ್ಲಿ ತೊಂದರೆಯಾಗುತ್ತದೆ. ಗಡಿಬಿಡಿಯಲ್ಲಿ ಕೆಲಸ ಮಾಡದೆ ವಾಹನ ಸವಾರರ ಪರ್ಯಾಯ ರಸ್ತೆ ಬಳಕೆಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಗುತ್ತಿಗೆದಾರರು, ಹೆದ್ದಾರಿ ಎಂಜಿನಿಯರ್‌ ಅವರು ಎಸ್‌ಪಿ ಮತ್ತು ಡಿಸಿ ಅವರಲ್ಲಿ ಕಾಮಗಾರಿ ಪೂರ್ಣಗೊಳ್ಳುವ
ಅವಧಿಯನ್ನು ಸ್ಪಷ್ಟವಾಗಿ ತಿಳಿಸಬೇಕು. ಕಳಪೆ ಕಾಮಗಾರಿ ಆಗದಂತೆ ಗುಣಮಟ್ಟದ ಕೆಲಸಕ್ಕೆ ಒತ್ತು ನೀಡಬೇಕು. ವೈಜ್ಞಾನಿಕವಾಗಿ ಓವರ್‌ ಪಾಸ್‌ ನಿರ್ಮಾಣಗೊಳ್ಳಬೇಕು. ಟ್ರಾಫಿಕ್‌ ವ್ಯವಸ್ಥೆಯನ್ನು ತಾಂತ್ರಿಕವಾಗಿ ನಿರ್ವಹಿಸುವ ಬಗ್ಗೆ ಸರಿಯಾದ ಯೋಜನೆ ರೂಪಿಸಬೇಕು ಎಂದು ರಾ. ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌. ಕಲ್ಮಾಡಿ, ನಗರಸಭಾ ಸದಸ್ಯೆ ಮಂಜುಳಾ ವಿ. ನಾಯಕ್‌, ನಾಮನಿರ್ದೇಶಿತ ಸದಸ್ಯರಾದ ದಿನೇಶ್‌ ಪೈ, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಹಾಕೆ ಮಚ್ಚೀಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾ.ಹೆ ಯೋಜನಾ
ನಿರ್ದೇಶಕ ಲಿಂಗೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next